ರೂಪಾಂತರ ವರ್ತನೆಗಳು

Update: 2018-04-07 12:38 GMT

ಭಾಗ-10

ವಿಧ ವಿಧ ವರ್ತನೆಗಳು

ರೂಪುಗೊಳ್ಳುತ್ತಾ ರೂಪಿಸೋಣ

ಮಕ್ಕಳ ವ್ಯಕ್ತಿತ್ವಕ್ಕೆ ಕಾರಣವಾಗುವ ಮತ್ತು ಅವರ ಜೀವನದ ದಿಕ್ಕನ್ನು ಸ್ಪಷ್ಟಪಡಿಸುವ ವಿವಿಧ ವರ್ತನೆಗಳ ಬಗ್ಗೆ ಕೊನೆಯದಾಗಿ ಮೂರು ಅಂಶಗಳಲ್ಲಿ ಹೇಳಬಹುದೆಂದರೆ: ವರ್ತನೆಗಳ ಮಾದರಿಗಳಿಂದಲೇ ಪರಿವರ್ತನೆಗಳು ಸಾಧ್ಯ. ಕ್ರಿಯೆಗೆ ಪ್ರತಿಕ್ರಿಯೆ ರೀತಿಯ ಬದಲಾವಣೆಗಳಲ್ಲದ್ದು ಆದರೆ ಇದು ಪ್ರಕ್ರಿಯೆಯದ್ದು, ಮತ್ತು ನಿಗ್ರಹ ಆಗ್ರಹಗಳಿಂದ ಸಾಧ್ಯವಾಗದ ವರ್ತನೆಗಳು ರೂಪಾಂತರಗಳಿಂದ ಸಾಧ್ಯ. ಹದಿಹರೆಯಕ್ಕೆ ಕಾಲಿಡುವವರಲ್ಲಿ ಬಹುಪಾಲು ಮಕ್ಕಳು ವ್ಯಕ್ತಿಗತ ಸಾಹಸಕ್ಕೆ ಹಾತೊರೆಯುವವರಾಗಿರುತ್ತಾರೆ. ತಮ್ಮ ಸ್ನೇಹ ಮತ್ತು ಆಪ್ತ ವಲಯಗಳ ಗಾಢತೆ ಹೆಚ್ಚಿದಷ್ಟೂ ಸಾಹಸಕ್ಕೆ ಹಿಂದೂಮುಂದಿಲ್ಲದೇ ಮುನ್ನುಗ್ಗುವ ಮನಸ್ಥಿತಿ ಅಥವಾ ಉನ್ಮತ್ತತೆ ಅವರಲ್ಲಿರುತ್ತದೆ. ಇದು ತೀರಾ ಸಹಜ ಎನ್ನುವಷ್ಟಿಲ್ಲದಿದ್ದರೂ ಅಸಹಜವೂ ಏನಲ್ಲ. ಹದಿನಾರು ವರುಷದ ತಮ್ಮ ಮಗ ಸಿಗರೆಟ್ ಸೇದುತ್ತಿದ್ದಾನೆಂದು ನನ್ನ ಮಿತ್ರನಿಗೆ ತಿಳಿದುಬಂತು. ಈ ವಿಷಯದ ಬಗ್ಗೆ ಮಗನ ಕೂಡ ಮಾತನಾಡುವುದು ಒಳ್ಳೆಯದು ಎಂದು ತಾಯಿ ಹೇಳಿದಳು. ಆದರೆ ತಂದೆ ಏನು ಹೇಳಿದನೆಂದರೆ, ನಮಗೆ ಆ ವಿಷಯ ತಿಳಿದಿಲ್ಲವೆಂದು ಅವನು ಭಾವಿಸಿದ್ದಾನೆ. ಆದರೆ ನಮಗೆ ತಿಳಿಯಿತು ಎಂದರೆ, ಎಲ್ಲೋ ಮಾಡುವುದು ನಮ್ಮ ಮುಂದೆಯೇ ಮಾಡತೊಡಗಬಹುದು. ನಾವು ತಿಳಿಯದಂತೆಯೇ ಇರೋಣ ಎಂದು ತಮ್ಮ ಹೆಂಡತಿಯನ್ನು ಸುಮ್ಮನಾಗಿಸುವ ಪ್ರಯತ್ನ ಮಾಡಿದರು. ತಾಯಿಯ ಅಭಿಪ್ರಾಯವೇನೆಂದರೆ, ತಾವು ಅದರ ಬಗ್ಗೆ ಮಾತನಾಡಿದರೆ ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತಾನೆ. ತನ್ನ ಚಲನವಲನ ಮತ್ತು ಕಾರ್ಯಾಚರಣೆಗಳನ್ನು, ಹವ್ಯಾಸಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಎಚ್ಚರ ವಹಿಸುತ್ತಾನೆ ಎಂದು. ಆದರೆ, ಯಾವುದೇ ಒಂದು ಮಗುವಿನ ಅಥವಾ ಹದಿಹರೆಯಕ್ಕೆ ಕಾಲಿಟ್ಟ ಕಿಶೋರರ ಗುಣ ಸ್ವಭಾವದ ಬಗ್ಗೆ ನಾವು ಹೀಗೆಯೇ ಎಂದು ನಿರ್ಧರಿತವಾಗಿ ಹೇಳಲು ಸಾಧ್ಯವಿಲ್ಲ. ಬದಲಿಗೆ ತಾವು ಸಣ್ಣದರಿಂದ ನೋಡಿರುವ, ಗ್ರಹಿಸಿರುವ ಆಧಾರಿತವಾಗಿ ಆ ಒಂದೊಂದು ಮಗುವನ್ನು ಉದ್ದೇಶಿಸಿ ಮಾತನಾಡಬೇಕಾಗುತ್ತದೆ ಮತ್ತು ನಡೆದುಕೊಳ್ಳಬೇಕಾಗುತ್ತದೆ. ಆದರೆ ಒಂದಂತೂ ಸ್ಪಷ್ಟ. ಮಗುವಿಗೆ ಸಣ್ಣದರಿಂದ ಮನೆಯ ಮತ್ತು ಪರಿಸರ ವಾತಾವರಣದ ಪ್ರಭಾವವೇ ಹದಿಹರೆಯದಲ್ಲಿ ಗಾಢವಾಗುವುದೇ ಹೊರತು ಇನ್ನಾವುದೋ ಹೊಸತಲ್ಲ. ಹಾಗೆಯೇ ಅದೇ ಮಗುವಿನ ವ್ಯಕ್ತಿಗತ ಅರಿವು ಮತ್ತು ಪ್ರಯತ್ನದ ಆಧಾರದ ಮೇಲೆ ಮುಂದೆ ಯುವಕರಾಗುವಾಗ ತಮ್ಮನ್ನು ಎಲ್ಲಾ ಪ್ರಭಾವಗಳಿಂದ ಹೊರಗಾಗುವ ಅಥವಾ ಹೊಚ್ಚ ಹೊಸ ದೃಷ್ಟಿ ಮತ್ತು ದಿಕ್ಕುಗಳನ್ನು ಹೊಂದುವ ಸಾಧ್ಯತೆಗಳಿರುತ್ತವೆ. ಹಾಗಾಗಿ ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ ಹದಿಹರೆಯದ ವಯಸ್ಸಿನಿಂದ ಯೌವನಕ್ಕೆ ಹೊರಳುವ ಸಮಯವು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಆಗ ಹುಟ್ಟುವ ಆಸಕ್ತಿಯು ಅವರ ಪುಟಿಯುವ ಚೈತನ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತಹ ಉತ್ಸಾಹದಲ್ಲಿರುತ್ತದೆ. ಆತ ರ್ಯಾಂಕ್ ಬರುವಷ್ಟು ಜಾಣ. ಯಾರ ತಂಟೆಗೂ ಹೋಗದ, ತಾನಾಯ್ತು ತನ್ನ ಪಾಡಾಯ್ತು ಅಂತಿದ್ದ ಹುಡುಗ. ಪಾಪ ಅವನು ಹಾಗೆಯೇ ಸಣ್ಣ ವಯಸ್ಸಿನಿಂದಲೂ ಓದಿನಲ್ಲಿ, ಕಲಿಕೆಯಲ್ಲಿ, ಅಧ್ಯಯನಾಸಕ್ತನೂ ಮತ್ತು ಮುಗ್ಧನು. ಅವನ ಅಧ್ಯಯನದ ಆಗಸವು ಹಾಗೆಯೇ ನಿರ್ಮಲಾಕಾಶವಾಗಿ ಇರಲಿಲ್ಲ. ಕಾಲೇಜಿನಲ್ಲಿ ಮುಂದೊಂದು ದಿನಗಳಲ್ಲಿ, ಗಾಢವಾದ ಕಾರ್ಮೋಡಗಳು ಮುಸುಕಿದವು. ಯಾವಾಗಲೂ ರ್ಯಾಂಕ್ ಬರುತ್ತಿದ್ದ ಹುಡುಗ ಫೇಲ್ ಆದ ಕೆಲವು ಸಬ್ಜೆಕ್ಟ್‌ಗಳಲ್ಲಿ. ಒಂದೇ ಸಲಕ್ಕೆ ಓದುತ್ತಿದ್ದಂತಹ ಜಾಣ ಕಂತುಗಳಲ್ಲಿ ಕಟ್ಟಿ ಪಾಸ್ ಮಾಡಿಕೊಳ್ಳುವಂತಾದ. ಅಧ್ಯಯನ ಚತುರನಾದ ಆ ಅಮಾಯಕನ ಬಾಳಿನಲ್ಲಿ ಫೇಲಾಗುವಂತೆ ಮಾಡಿದ ಆ ಕಾರ್ಮೋಡಗಳು ಯಾವುವು? ಅವು ಹುಡುಗಿಯರಲ್ಲದೇ ಮತ್ತಾರೂ ಅಲ್ಲ!! ಅವರೋ ಅವನ ಕಲಿಕೆಯ ಸಾಮರ್ಥ್ಯವನ್ನು ಮತ್ತು ಪ್ರತಿಭೆೆಯನ್ನು ಮಿಸ್ಯೂಸ್ ಮಾಡಿಕೊಂಡರು. ಅವನ ನಿದ್ದೆಗೆಡಿಸಿದರು, ದಿಕ್ಕು ತಪ್ಪಿಸಿದರು, ದಾರಿಗೆಡಿಸಿದರು. ಕೊನೆಗೆ ನಪಾಸಾಗುವಂತೆ ಮಾಡಿದರು. ಅವನ ಬದುಕಿನಲ್ಲಿ ಆ ಸ್ವಾರ್ಥಿ ಹುಡುಗಿಯರ ಪ್ರವೇಶವಾಗದಿದ್ದರೆ ಅವನು ಚೆನ್ನಾಗಿಯೇ ಇರುತ್ತಿದ್ದ. ಚಾನೆಲ್‌ಗೇನಾದರೂ ಸ್ಟೋರಿ ಮಾಡಿದ್ದರೆ ಅಮಾಯಕನ ದಿಕ್ಕುಗೆಡಿಸಿದ ಅಪರಾಧಿಗಳು ಯಾರು? ಎಂದು ಟೈಟಲ್ಲಿಡಬಹುದಾಗಿತ್ತು. ಇರಲಿ, ಇನ್ನೊಬ್ಬ ಹುಡುಗನ ತಂದೆ ತಾಯಿಯರು ಗೋಳಿಡುತ್ತಿದ್ದರು. ನಮ್ಮ ಹುಡುಗ ಚಿನ್ನದಂತಹವನು. ಅವನು ಯಾರ ತಂಟೆಗೂ ಹೋಗುತ್ತಿರಲಿಲ್ಲ. ಸ್ಕೂಲಾದರೆ ಮನೆ, ಮನೆಯಾದರೆ ಸ್ಕೂಲು ಅಂತಿದ್ದ. ಕಾಲೇಜಿಗೆ ಹೋದ ಮೇಲೆ ಕೆಲವು ಪೊರುಕಿಗಳು, ಓದು ಬರಹ ಬೇಡವಾದವರು ಹೇಗಾದರೂ ಕಾಲೇಜು ಪಾಸ್ ಮಾಡ ಬೇಕಲ್ಲಾ. ಇವನ ಹತ್ತಿರ ಸಹಾಯ ಪಡ್ಕೊಳ್ತಿದ್ದರು. ಇವನು ಬೇಡಾ ಬೇಡಾ ಅಂದ್ರೂ ಅಲ್ಲಿಗೆ ಇಲ್ಲಿಗೆ ಕರ್ಕೊಂಡು ಹೋಗುತ್ತಿದ್ದರು. ಅದೆಂಗೋ ಕುಡಿಯೋದು ಕಲಿಸಿಬಿಟ್ಟರು. ಸಿಗರೆಟ್ ಸೇದೋದನ್ನೂ ಕಲಿಸಿಬಿಟ್ಟರು. ನಮ್ಮ ಅಮಾಯಕ ಹುಡುಗನನ್ನು ಹಾಳು ಮಾಡಿಬಿಟ್ಟರು. ಈಗ ಅವನು ಫುಲ್ ಟೈಟಾಗೇ ಬರ್ತಾನೆ. ಅವತ್ತಿನ ದಿನ ಹೇಳಿದ ಮಾತು ಕೇಳ್ಕೊಂಡು, ಒಂದೂ ಮಾತು ಎದುರಾಡದಿದ್ದವನು ನಮಗೆ ಬಾಯಿಗೆ ಬಂದಂಗೆ ಬೈಯ್ತೊನೆ. ಸಹವಾಸದಿಂದ ಸನ್ಯಾಸಿ ಕೆಟ್ಟ.

ಅಮಾಯಕ ಸನ್ಯಾಸಿಗಳು

ನಮ್ಮ ಮನೆಯ ಮಕ್ಕಳೆಲ್ಲಾ ಅಮಾಯಕವಾದ ಸನ್ಯಾಸಿಗಳೇ. ಏಕಾಗ್ರ ಚಿತ್ತದಿಂದ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರನೇ. ಅವಳ್ಯಾವಳೋ ಮೇನಕೆ ಬಂದು ಅವನ ತಪಸ್ಸನ್ನು ಕೆಡಿಸಿ, ಅವನನ್ನೂ ಕೆಡಿಸಿ, ಅವನ ಕಾರ್ಯಕ್ರಮಗಳೆಲ್ಲವನ್ನೂ ಕೆಡಿಸಿ ಬಿಟ್ಟಳು. ಅದಾದ ಮೇಲೆ ನಮ್ಮ ಸನ್ಯಾಸಿ ವಿಶ್ವಾಮಿತ್ರ ಟೋಟಲ್ ಕೇಡಿಯಾಗಿಬಿಟ್ಟಿದ್ದಾನೆ ಎನ್ನುವ ಮಾತುಗಳು ಪದೇ ಪದೇ ಕೇಳುತ್ತಿರುತ್ತೇನೆ. ಈ ಅಮಾಯಕ ಸನ್ಯಾಸಿಗಳು ಯಾಕಾದರೂ ಅವರನ್ನು ಅನುಸರಿಸಬೇಕು ಅಂತ ಪ್ರಶ್ನಿಸಿದರೆ, ಅವರು ಅಮಾಯಕರಾಗಿರುವ ಕಾರಣದಿಂದಲೇ ಒಳ್ಳೇದು ಕೆಟ್ಟದು ತಿಳಿಯದೇ ಪ್ರೀತಿಯಿಂದ, ಸ್ನೇಹದಿಂದ, ವಿಶ್ವಾಸದಿಂದ, ನಮಗೇನೂ ದ್ರೋಹ ಮಾಡರು ಎಂಬ ನಂಬಿಕೆಯಿಂದ ಆ ಡರ್ಟಿ ಕಂಪೆನಿಯಲ್ಲಿ ಬಿದ್ದು ಬಿಡುತ್ತಾರೆ. ನಂತರ ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲದಂತಾಗಿಬಿಡುತ್ತದೆ! ಇದು ಪೋಷಕರ ಷರಾ.

ಆಗಿನವನು ಮತ್ತು ಈಗಿನವನು

ತಾವು ಬಾಲ್ಯದಿಂದಲೂ ನೋಡುತ್ತಾ ಇರುವ ಬಾಲಕನು ಈಗ ಬಾಲಕನಾಗಿಯೇ ಉಳಿದಿಲ್ಲ ಎಂಬ ಸತ್ಯ ಎಷ್ಟೋ ಜನ ಪೋಷಕರಿಗೆ ಅರ್ಥವಾಗುವುದೇ ಇಲ್ಲ. ಒಬ್ಬ ಯುವಕನ ಅಥವಾ ಯುವತಿಯ ಸಂಬಂಧವು ಎಲ್ಲರೊಡನೆಯೂ ಒಂದೇ ತೆರನಾಗಿರುವುದಿಲ್ಲ ಎಂದೂ ತಿಳಿಯುವುದಿಲ್ಲ. ಪ್ರತಿಯೊಬ್ಬರಿಗೂ ಅವರವರ ಪಾತ್ರ ನಿರ್ವಹಣೆಯನ್ನು ಯಾರಾರ ಬಳಿ ಹೇಗೆ ಮಾಡಬೇಕೆಂದು ತಿಳಿದಿರುತ್ತದೆ. ತಂದೆ ತಾಯಿ ಅಥವಾ ಅಣ್ಣ ಅಕ್ಕಂದಿರ ಬಳಿ ಕುಡುಕತನದ ಅಭಿಲಾಷೆಯನ್ನು ವ್ಯಕ್ತಪಡಿಸುವುದಾದರೂ ಆತನಿಗೆ ಹೇಗೆ ಸಾಧ್ಯ? ಅಥವಾ ಏಕಾಗಿ? ಆ ಕಂಪೆನಿ ಅದಕ್ಕಲ್ಲ. ತನ್ನ ಸ್ನೇಹಿತರೊಡನೆ ಮನಬಿಚ್ಚಿ, ಮುಕ್ತ ಕಾಮುಕತನದ ಅಥವಾ ಲೈಂಗಿಕಾಭಿಲಾಷೆಗಳ ಹಸಿ ಹಸಿ ಬಿಚ್ಚು ಮಾತುಗಳನ್ನು ಆಡುವಂತೆ ಮನೆಯವರೊಂದಿಗೆ ಯಾಕಾದರೂ ಆಡುತ್ತಾನೆ. ಆ ಅಭ್ಯಾಸವನ್ನು ಸಾಮಾಜಿಕವಾಗಿ ನಾವು ಕಂಡವರಲ್ಲ. ಅವನು ತನ್ನ ಅಭಿರುಚಿಗೆ ಮತ್ತು ಮನಸ್ಥಿತಿಗೆ ಹೊಂದುವ ಸ್ನೇಹಿತರೊಡನೆ ಕ್ರಿಯಾತ್ಮಕವಾಗಿರುವುದನ್ನು ಕಂಡಾಗ ಅವನ ಮನೆಯವರಿಗೆ ಅನ್ನಿಸುವುದು ಏನೆಂದರೆ, ನಮ್ಮ ಹುಡುಗ ಅಮಾಯಕ ಸನ್ಯಾಸಿಯಾಗಿದ್ದ, ಸ್ನೇಹಿತರ ಸಹವಾಸದಿಂದ ಕೆಟ್ಟ ಎಂದು. ಬೀಜವಿಲ್ಲದಿದ್ದರೆ ಸಸಿ ಹುಟ್ಟುವುದಿಲ್ಲ. ಮರವಾಗಿ ಕಂಡಿದ್ದು ಸಸಿಯಾಗಿ ಇದ್ದಿರಲೇ ಬೇಕು. ಯಾರೊಬ್ಬನೂ ತನ್ನ ಒಳಗೆ ಗುಪ್ತವಾಗಿರುವ ಬಯಕೆಗಳನ್ನು ಪೂರೈಸಿಕೊಳ್ಳಲು ಅನುಕೂಲಕರವಾದ ವಾತಾವರಣಕ್ಕೆ, ಸಹವಾಸಕ್ಕೆ ಹಾತೊರೆಯುತ್ತಿರುತ್ತಾನೆ. ತನ್ನ ಸಂಪರ್ಕಕ್ಕೆ ಬರುವ ವ್ಯಕ್ತಿಯಲ್ಲಿ ತನ್ನದೇ ಆಸಕ್ತಿ ಮತ್ತು ಅಭಿರುಚಿಗಳನ್ನು ಕೊಂಚವಾದರೂ ಗುರುತಿಸಿದಲ್ಲಿ, ಕಾಯುತ್ತಾನೆ. ಪರಸ್ಪರ ಸುಳುಹುಗಳನ್ನು ಕೊಟ್ಟುಕೊಳ್ಳುತ್ತಾರೆ. ಸಂಕೇತಗಳು ಪಾಸಿಟಿವ್ ಆದ ಕೂಡಲೇ ಸಿಗರೆಟ್‌ಹಚ್ಚುತ್ತಾರೆ, ಬಾಂಗ್ ಹೊಡೆಯುತ್ತಾರೆ, ಬಾಟಲೆತ್ತುತ್ತಾರೆ ಹಾಗೆಯೇ ಇತರ ಕ್ರಿಯೆಗಳೂ. ನಮ್ಮ ಹುಡುಗರೂ ಕೂಡ ದೂರುವುದರಲ್ಲಿ ಕಡಿಮೆಯೇನಿಲ್ಲ. ಸಭ್ಯನಾಗಿರುವಂತೆಯೇ ತೋರಿಸಿಕೊಂಡಿದ್ದು ಸಿಕ್ಕಿ ಹಾಕಿಕೊಂಡು ಬಿಟ್ಟರೆ ಪುಟ್ಟ ಮಗುವಿನಂತೆ ಚಾಡಿ ಹೇಳುತ್ತಾ ದೂರುತ್ತಾರೆ. ನನ್ನ ಪಾಡಿಗೆ ನಾನು ಇದ್ದೆ. ಅವನೇ ಕರೆದುಕೊಂಡು ಹೋಗಿದ್ದು ಎಂದು ಮಿಕಿಮಿಕಿ ನೋಡುತ್ತಾರೆ.

ವರ್ತನೆಗಳ ರೂಪಗಳು

ಮಕ್ಕಳಾಗಲಿ ಹಿರಿಯರಾಗಲಿ; ತಮ್ಮನ್ನು ಕಾಯುತ್ತಿರುವ ಕಣ್ಣುಗಳು ತಮ್ಮ ಚಲನವಲನಗಳನ್ನು ಗಮನಿಸುತ್ತಿವೆ ಎಂದರೆ ಅವರ ವರ್ತನೆಗಳಲ್ಲಿ ಬದಲಾವಣೆಗಳು ಕಾಣುತ್ತವೆ. ಹಾಗೆ ತೋರುವ ವರ್ತನೆಗಳಲ್ಲಿ ತಾವು ಕೋಪವನ್ನು ತೋರಬೇಕೋ, ಅಸಡ್ಡೆಯನ್ನು ತೋರಬೇಕೋ, ತಮ್ಮ ಯಾವುದೋ ಪ್ರತಿಭೆೆಯನ್ನು ತೋರಬೇಕೋ, ತಮಗಿರುವ ಜ್ಞಾನವನ್ನು ತೋರಬೇಕೋ, ಯಾವುದೋ ಭಾವನೆಯನ್ನು ತೋರಲು ಹೋಗಿ ಅದನ್ನು ಸರಿಯಾಗಿ ತೋರಲು ಬಾರದೆ ಇನ್ನಾವುದೋ ರೀತಿಯಲ್ಲಿ ಅರ್ಥವಾಗುವ ಹಾಗೆ ಮಾಡುವುದೂ ಕೂಡ ಉಂಟು; ಒಟ್ಟಾರೆ ಅದು ಅವರ ಆಗಿನ ಆಯ್ಕೆಗೆ ಬಿಟ್ಟಿದ್ದು. ಒಟ್ಟಾರೆ ಪ್ರದರ್ಶಕ ವರ್ತನೆಗಳು ಶಾಶ್ವತವೇನಾಗಿರುವುದಿಲ್ಲ. ಆದರೆ ಅವರ ಒಳಗಿನ ಆಸೆಯ ಪ್ರದರ್ಶನವೇ ಆಗಿರುತ್ತದೆ. ಕ್ರಿಯೆಗೆ ಪ್ರತಿಕ್ರಿಯೆಯಾಗಿ ತೋರುವ ವರ್ತನೆಗಳು ಕೂಡಾ ಶಾಶ್ವತ ವರ್ತನೆಗಳೇನಾಗಿರುವುದಿಲ್ಲ. ಆ ಸಮಯಕ್ಕೆ, ಆ ಸಂದರ್ಭಕ್ಕೆ ಪ್ರತಿಕ್ರಿಯಿಸುವ ಒತ್ತಡದಿಂದ ಮೂಡುವ ವರ್ತನೆಗಳನ್ನು ಹಿರಿಯರಾದವರು ಕೆಲವೊಮ್ಮೆ ನಿರ್ಲಕ್ಷಿಸಬೇಕು ಮತ್ತೂ ಕೆಲವೊಮ್ಮೆ ಗಮನದಲ್ಲಿಟ್ಟುಕೊಂಡು ಪ್ರೋತ್ಸಾಹಿಸಬೇಕು.

ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳಿಂದ ತಲೆದೋರಿರುವ ವರ್ತನೆಗಳು ಶಾಶ್ವತವಾಗಿ ನಿಲ್ಲುವುದಿಲ್ಲ. ಆದರೆ ಅದರ ಭಾವುಕತೆಯ ಪ್ರಭಾವ ತೀವ್ರವಾಗಿರುತ್ತದೆ. ಸಾಮಾನ್ಯವಾಗಿ ಜೀವನ ಶೈಲಿ ಇದರಿಂದಲೇ ರೂಪುಗೊಳ್ಳುವುದು.

ಇನ್ನೂ ಕೆಲವೊಮ್ಮೆ ಮಕ್ಕಳು ತಮಗೇ ಗೊತ್ತಿಲ್ಲದಂತೆ, ಸ್ವಇಚ್ಛೆಯಿಂದಲ್ಲದೇ ಗುಣ ಅಥವಾ ಸ್ವಭಾವದ ಅನೈಚ್ಛಿಕ ಪ್ರದರ್ಶನಗಳನ್ನು ಮಾಡುತ್ತಾರೆ. ಇವುಗಳನ್ನೂ ಕೂಡ ದೊಡ್ಡವರು ಮುಖ್ಯವಾಗಿ ಗಮನಿಸಿಕೊಳ್ಳಬೇಕು. ಮಕ್ಕಳಿಗೆ ತಮ್ಮ ಈ ಗುಣವನ್ನು ಪ್ರದರ್ಶಿಸುತ್ತಿದ್ದೇವೆ ಎಂಬ ಅರಿವು ಇರುವುದಿಲ್ಲ. ಆದರೆ, ದೊಡ್ಡವರಿಗೆ ಈ ಬಗೆಯ ಗುಣ ಪ್ರದರ್ಶನಗಳನ್ನು ಕಂಡು ಅಥವಾ ಪ್ರದರ್ಶಿಸಿ ಅರಿವಿರುವುದರಿಂದ ತಿಳಿದಿರುತ್ತದೆ. ಹೀಗೆ ಅನೇಕ ಬಗೆಯ ಆಂತರಿಕ ಸಮಸ್ಯೆಗಳಿಂದ ತಲೆದೋರಿಸುವಂತಹ ವರ್ತನೆಗಳು, ತಮ್ಮ ಒಪ್ಪಿಗೆ, ನಿರಾಕರಣೆಗಳ ತೀವ್ರತೆಯನ್ನು ಬಿಂಬಿಸುವಂತಹ ವರ್ತನೆಗಳು, ಉದ್ದೇಶ ಮತ್ತು ಸ್ಥಾನಬಲ ತೋರಿಸುವಂತಹ ವರ್ತನೆಗಳು, ತಮ್ಮ ಮಾನ್ಯತೆ, ಪ್ರಾತಿನಿಧ್ಯ ಅಥವಾ ಸ್ಥಾನಗಳನ್ನು ತೋರ್ಪಡಿಸುವಂತಹ ವರ್ತನೆಗಳು; ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಯಾವುದೇ ವರ್ತನೆಗಳಾದರೂ ಮಕ್ಕಳ ಮೇಲಿನ ತಾತ್ಕಾಲಿಕ ಅಥವಾ ಶಾಶ್ವತ ಪ್ರಭಾವಗಳ ಪ್ರತಿಫಲನ ಎಂಬುದನ್ನು ನಾವು ಮರೆಯಬಾರದು. ನಾವು ಮತ್ತೆ ಮತ್ತೆ ಮರೆಯಬಾರದ ವಿಷಯವೆಂದರೆ, ಯಾವ್ಯಾವ ವರ್ತನೆಗಳಿಂದ ಹಿತ ಮತ್ತು ಅಹಿತ ಅನುಭವಗಳು ಪುನರಾವರ್ತನೆಯಾಗುತ್ತಿರುವುವೋ ಮಕ್ಕಳು ಆಯಾ ವರ್ತನೆಗಳ ಪ್ರಭಾವಗಳಿಗೆ ಒಳಗಾಗುತ್ತಾರೆ ಮತ್ತು ಅವುಗಳನ್ನು ಕೇಂದ್ರೀಕರಿಸಿಕೊಂಡಂತೆ ತಮ್ಮ ವರ್ತನೆಗಳನ್ನು ರೂಪಿಸಿಕೊಂಡು ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಹಾಗಾಗಿ ಎಚ್ಚರಿಕೆ ವಹಿಸಬೇಕಾಗಿರುವುದು ರೂಪಿಸುವುದಕ್ಕಿಂತ ರೂಪಿಸಿಕೊಳ್ಳುವುದರಲ್ಲಿ.

ಇನ್ನೂ ಕೆಲವೊಮ್ಮೆ ಮಕ್ಕಳು ತಮಗೇ ಗೊತ್ತಿಲ್ಲದಂತೆ, ಸ್ವಇಚ್ಛೆಯಿಂದಲ್ಲದೇ ಗುಣ ಅಥವಾ ಸ್ವಭಾವದ ಅನೈಚ್ಛಿಕ ಪ್ರದರ್ಶನಗಳನ್ನು ಮಾಡುತ್ತಾರೆ. ಇವುಗಳನ್ನೂ ಕೂಡ ದೊಡ್ಡವರು ಮುಖ್ಯವಾಗಿ ಗಮನಿಸಿಕೊಳ್ಳಬೇಕು. ಮಕ್ಕಳಿಗೆ ತಮ್ಮ ಈ ಗುಣವನ್ನು ಪ್ರದರ್ಶಿಸುತ್ತಿದ್ದೇವೆ ಎಂಬ ಅರಿವು ಇರುವುದಿಲ್ಲ. ಆದರೆ, ದೊಡ್ಡವರಿಗೆ ಈ ಬಗೆಯ ಗುಣ ಪ್ರದರ್ಶನಗಳನ್ನು ಕಂಡು ಅಥವಾ ಪ್ರದರ್ಶಿಸಿ ಅರಿವಿರುವುದರಿಂದ ತಿಳಿದಿರುತ್ತದೆ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News