×
Ad

ಬೆಂಗಳೂರು: ಚುನಾವಣಾ ಅಕ್ರಮ ತಡೆಗೆ 400 ಚೆಕ್‌ಪೋಸ್ಟ್; ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್

Update: 2018-04-07 18:22 IST

ಬೆಂಗಳೂರು, ಎ.7: ಚುನಾವಣೆ ಪ್ರಕ್ರಿಯೆ ವೇಳೆ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ನಗರದ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅನುಮಾನಾಸ್ಪದವಾಗಿ ಹೋಗುವ ವಾಹನಗಳು, ವ್ಯಕ್ತಿಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ಮಾಹಿತಿ ನೀಡಿದರು.

ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂರು ಸ್ಥಿರ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. 9 ಪ್ರಮುಖ ಚೆಕ್‌ಪೋಸ್ಟ್‌ಗಳು ನಗರದಾದ್ಯಂತ ಕೆಲಸ ಮಾಡುತ್ತಿವೆ. ಗಡಿ ಭಾಗದಲ್ಲಿ 20 ಚೆಕ್‌ಪೋಸ್ಟ್‌ಗಳಿದ್ದು, ಪೊಲೀಸ್ ಅಧಿಕಾರಿಗಳು ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಕೆಲಸ ಮಾಡುತ್ತಿದ್ದು, ಸುಮಾರು 400ಕ್ಕೂ ಹೆಚ್ಚು ಪರಿಶೀಲನಾ ತಂಡಗಳಿವೆ ಎಂದು ಹೇಳಿದರು.

ಚುನಾವಣೆ ಅಕ್ರಮ ಮತ್ತು ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದ ಅವರು, ನಗರದ 28 ವಿಧಾನಸಭಾ ಕ್ಷೇತ್ರಗಳ ಭದ್ರತೆಗಾಗಿ ಕೇಂದ್ರ ಸರಕಾರದ ಶಸ್ತ್ರಸಜ್ಜಿತ ಸುಮಾರು 45 ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಪಡೆಯಲ್ಲಿ ಸುಮಾರು 100ರಿಂದ 110 ಶಸ್ತ್ರಸಜ್ಜಿತ ಸಿಬ್ಬಂದಿಗಳಿರುತ್ತಾರೆ. ಈಗಾಗಲೇ 15 ಪಡೆಗಳು ಬಂದಿವೆ. ಉಳಿದ ಪಡೆಗಳು ಹಂತ ಹಂತವಾಗಿ ಬರಲಿವೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಎಸಿಪಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. 6 ಸಂಚಾರಿ ತಂಡಗಳನ್ನು ನಿಯೋಜಿಸಿದ್ದು, ಅದರಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಾರೆ ಎಂದು ಸುನೀಲ್‌ಕುಮಾರ್ ತಿಳಿಸಿದರು.

ಈವರೆಗೂ ನೀತಿ ಸಂಹಿತೆ ಉಲ್ಲಂಘನೆಯಡಿ 8 ಪ್ರಕರಣಗಳನ್ನು ದಾಖಲಿಸಲಾಗಿವೆ. ಜನವರಿಯಿಂದೀಚೆಗೆ 2800 ಜನರ ಮೇಲೆ ಸೆಕ್ಷನ್ 107, 110ರ ಪ್ರಕಾರ ಕ್ರಮ ಜರುಗಿಸಲಾಗಿದೆ. ಶಸ್ತ್ರಾಸ್ತಗಳನ್ನು ಠಾಣೆಗೆ ಜಮಾ ಮಾಡಲು ಸೂಚಿಸಲಾಗಿದ್ದು, ಈಗಾಗಲೇ ಶೇ.70ರಷ್ಟು ಶಸ್ತ್ರಾಸ್ತ್ರಗಳನ್ನು ಮಾಲಕರು ಠಾಣೆಗೆ ಒಪ್ಪಿಸಿದ್ದಾರೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ಸುಮಾರು 8 ಸಾವಿರ ಜಾಮೀನು ರಹಿತ ವಾರೆಂಟ್‌ಗಳಿದ್ದವು. ಅವುಗಳಲ್ಲಿ 5 ಸಾವಿರ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ. ಇನ್ನು 3 ವಾರೆಂಟ್‌ಗಳು ಹೊರ ರಾಜ್ಯಕ್ಕೆ ಸೇರಿದ್ದವಾಗಿದ್ದು, ಅಪಘಾತ, ಕ್ರಿಮಿನಲ್ ಚಟುವಟಿಕೆಗಳಿಗೆ ಸಂಬಂಧಿಸಿದ್ದವಾಗಿವೆ. ಬೇರೆ ರಾಜ್ಯಗಳಾಗಿರುವುದರಿಂದ ಅವುಗಳನ್ನು ಜಾರಿಗೊಳಿಸಲು ವಿಳಂಬವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News