ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯರಿಗೆ ಸೇಫ್ ಅಲ್ಲ ಎಂದು ಗುಪ್ತಚರ ಇಲಾಖೆ ವರದಿ ನೀಡಿತೇ?
ಬೆಂಗಳೂರು, ಎ.7:ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವು ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಸುರಕ್ಷಿತವಲ್ಲ ಎಂದು ಗುಪ್ತಚರ ಇಲಾಖೆ ನೀಡಿದೆ ಎನ್ನಲಾದ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದ್ದು, ಅಲ್ಲಿ ಸದ್ಯದ ಮಟ್ಟಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಒಕ್ಕಲಿಗ ಸಮುದಾಯವನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ. ಆದುದರಿಂದ, ಆ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲುವು ಅಷ್ಟು ಸುಲಭವಲ್ಲ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಈ ವರದಿ ನಕಲಿಯಾಗಿದ್ದು, ಗುಪ್ತಚರ ಇಲಾಖೆಯ ಮುಖ್ಯಸ್ಥರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡಿದೆ. ಇದರ ವಿರುದ್ದ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಚಾಮುಂಡೇಶ್ವರಿ ಹೊರತುಪಡಿಸಿ, ವರುಣಾ, ಬೀದರ್ ಜಿಲ್ಲೆಯ ಬಸವಕಲ್ಯಾಣ, ಕೊಪ್ಪಳ ಜಿಲ್ಲೆಯ ಗಂಗಾವತಿ ಅಥವಾ ಬೆಂಗಳೂರಿನ ಶಾಂತಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಉತ್ತಮ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತನಿಖೆಗೆ ಸೂಚನೆ: ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಕಚೇರಿಯ ವಿಶ್ವಾಸಾರ್ಹ ಮೂಲಗಳ ಪ್ರಕಾರ ಅಂತಹ ಯಾವುದೇ ವರದಿಯನ್ನು ಗುಪ್ತಚರ ವಿಭಾಗ ಕೊಟ್ಟಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಕಲಿ ವರದಿ ಎಂದು ತಿಳಿದು ಬಂದಿದೆ.
ಗುಪ್ತಚರ ವಿಭಾಗದಲ್ಲಿ ಈಗ ಎಡಿಜಿಪಿ ಹುದ್ದೆಯೇ ಇಲ್ಲ. ಅಲ್ಲದೆ, ಗುಪ್ತಚರ ಇಲಾಖೆಯು ಮುಖ್ಯಮಂತ್ರಿಗೆ ಸಲ್ಲಿಸುವ ವರದಿಯು ಕನ್ನಡದಲ್ಲಿರುತ್ತದೆ. ಇದು ಆಂಗ್ಲ ಭಾಷೆಯಲ್ಲಿದ್ದು, ಇದೊಂದು ನಕಲಿ ವರದಿಯಾಗಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.