ಕನ್ನಡಿಗರಿಗೆ ಕನ್ನಡ ಬಳಸಲು ದಟ್ಟ ದಾರಿದ್ರ ಅಂಟಿಕೊಂಡಿದೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-04-07 14:58 GMT

ಬೆಂಗಳೂರು, ಎ.7: ವಿಶ್ವದಾದ್ಯಂತ ಹರಡಿಕೊಂಡಿರುವ ಕನ್ನಡ ಭಾಷೆ ಇಂದು ಆತಂಕದ ಸ್ಥಿತಿಯಲ್ಲಿದ್ದು, ಕನ್ನಡಿಗರಿಗೆ ಕನ್ನಡ ಬಳಸಲು ಈಗ ದಟ್ಟ ದಾರಿದ್ರ ಅಂಟಿಕೊಂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಮಲ್ಲೇಶ್ವರ ಸರಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್‌ನ 2ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡಿಗರಲ್ಲಿ ಭಾಷೆ ಬಗೆಗಿನ ಇಚ್ಛಾಶಕ್ತಿ ಕೊರತೆಯಾಗಿದೆ ಎಂದರು.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕನ್ನಡ ಭಾಷೆ ಅಳಿಯುತ್ತಿದೆ. ಇಲ್ಲಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವ ಎಷ್ಟು ಎಂಬುದು ಇದರಿಂದ ಅರ್ಥವಾಗುತ್ತದೆ. ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚಿದರೆ ಅದು ಕನ್ನಡ ಭಾಷೆ ನಾಶಕ್ಕೆ ದಾರಿ ಎಂದು ಆಂತಕ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷ ಬೇಂದ್ರೆ ಕೃಷ್ಣಪ್ಪ ಮಾತನಾಡಿ, ವಿಶ್ವ ವಾಣಿಜ್ಯೀಕರಣದಲ್ಲಿ ಜಗತ್ತಿನ ವ್ಯಾಪಾರ ವ್ಯವಹಾರದ ನಗರವಾದ ಬೆಂಗಳೂರಿನಲ್ಲಿ ಕನ್ನಡ ಇಂದು ಉಸಿರುಗಟ್ಟಿದ ವಾತಾವರಣದಲ್ಲಿದೆ. ರಾಜ್ಯದಲ್ಲಿರುವ ಕನ್ನಡ ಸಂಸ್ಥೆಗಳು ಇಂದು ವ್ಯಾಪಾರಿ ಕೇಂದ್ರಗಳಾಗಿ ನಿರ್ಮಾಣವಾಗುತ್ತಿವೆ. ಈಗ ಆಂಗ್ಲಭಾಷಾ ಮೋಹದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳ ಹೆಚ್ಚಳದಲ್ಲಿ ಕನ್ನಡದ ಅಸ್ಮಿತೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.

ಬೆಂಗಳೂರಿಗೆ ವಲಸಿಗರು ದಂಡು ದಂಡಾಗಿ ಬರುತ್ತಿದ್ದಾರೆ. ನಾವು ಇಲ್ಲಿರುವ ಎಲ್ಲರನ್ನೂ ಕರ್ನಾಟಕದವರು ಎಂದು ಕರೆಯುತ್ತೇವೆ. ಕರ್ನಾಟಕದವರು ಆಗುವುದು ಬೇರೆ ಕನ್ನಡಿಗರಾಗಿ ಬಾಳುವುದು ಬೇರೆ ಎಂದ ಅವರು, ಈ ಕಾರಣಕ್ಕಾಗಿ ದ.ರಾ. ಬೇಂದ್ರೆಯವರ ಕವಿತೆ ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ’ ಹಾಡಿನ ಸಾಲುಗಳನ್ನು ಉಲ್ಲೇಖಿಸಿದರು.

ನಾವೆಲ್ಲ ಆತ್ಮವಂಚಕರು: ನಾವು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದು, ನಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸುತ್ತಿದ್ದೇವೆ. ಬಾಯಿ ಉಪಚಾರಕ್ಕೆ ಮಾತ್ರ ಕನ್ನಡ ಮಾತನಾಡುತ್ತಿದ್ದೇವೆ. ಅದನ್ನು ಬಿಟ್ಟು ನಾವು ರಾಜ್ಯದಲ್ಲಿ ವಾಸಿಸುವ ಎಲ್ಲರಿಗೂ ಕನ್ನಡ ಕಲಿಸುವುದರ ಜೊತೆಗೆ ನಮ್ಮ ಮಕ್ಕಳಿಗೆ ಮೊದಲು ಕನ್ನಡ ಕಲಿಸಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನದಲ್ಲಿ ಮೊದಲಿಗೆ ಕನ್ನಡ ರಾಜರತ್ನ ಜಿ.ಪಿ. ರಾಜರತ್ನಂ ಮಹಾದ್ವಾರದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಚಾಲನೆ ನೀಡಲಾಯಿತು. ಧ್ವಜಾರೋಹಣದಲ್ಲಿ ಶಾಸಕ ಡಾ. ಅಶ್ವತ್‌ನಾರಾಯಣ್, ಪರಿಷತ್ತಿನ ಅಧ್ಯಕ್ಷ ಕೆ. ಗಣೇಶರಾವ್ ಕೇಸರ್ಕರ, ಮಾಜಿ ಅಧ್ಯಕ್ಷ ಸಮಿವುಲ್ಲಾ ಖಾನ್ ಉಪಸ್ಥಿತರಿದ್ದರು.

ಅದ್ದೂರಿ ಮೆರವಣಿಗೆ: ಸಮ್ಮೇಳನ ಆರಂಭಕ್ಕೂ ಮೊದಲು ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅನಂತರ ಕನ್ನಡ ರಥದಲ್ಲಿ ಸಮ್ಮೇಳನಾಧ್ಯಕ್ಷ ಬೇಂದ್ರೆ ಕೃಷ್ಣಪ್ಪ ಅವರನ್ನು ಮಲ್ಲೇಶ್ವರ ಸಂಪಿಗೆ ಮುಖ್ಯರಸ್ತೆ, ಮಾರ್ಗೋಸಾ ರಸ್ತೆಗಳ ಮೂಲಕ ಮೆರವಣಿಗೆ ಮಾಡಲಾಯಿತು. ಇದೇ ವೇಳೆ ಡೊಳ್ಳು ಕುಣಿತ, ಪಟ ಕುಣಿತ, ವಾದ್ಯಗೋಷ್ಠಿ ಮುಂತಾದ ಜನಪದ ತಂಡಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ ಕಾಲೇಜುಗಳ ಮಕ್ಕಳು, ಕನ್ನಡ ಅಭಿಮಾನಿಗಳು ಭುವನೇಶ್ವರಿ ತಾಯಿಯ ಭಾವಚಿತ್ರದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News