×
Ad

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದದ್ದು ಅಮಿತ್ ಶಾರ ವೈಯಕ್ತಿಕ ಹೇಳಿಕೆ: ಮುರುಘಾ ಶ್ರೀ

Update: 2018-04-07 20:36 IST

ಬೆಂಗಳೂರು, ಎ.7: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಬಿಜೆಪಿ ಪಕ್ಷದ ಮತಬ್ಯಾಂಕ್ ಎಂದು ಗುರುತಿಸಿಕೊಂಡಿದ್ದ ಲಿಂಗಾಯತರು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದತ್ತ ತಮ್ಮ ಒಲುವು ವ್ಯಕ್ತಪಡಿಸಿರುವುದು ಕಂಡು ಬಂದಿದೆ

ಶನಿವಾರ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವ ಸಮಿತಿ ಸಭಾಂಗಣದಲ್ಲಿ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನೇತೃತ್ವದಲ್ಲಿ ನಡೆದ ಲಿಂಗಾಯತ ಮಠಾಧಿಪತಿಗಳ ವೇದಿಕೆಯ ಸಮಾವೇಶದಲ್ಲಿ ಮಠಾಧೀಶರು ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರವು ನಮಗೆ ಬೆಂಬಲ ನೀಡಿದೆ. ಕೇಂದ್ರ ಸರಕಾರವು ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂಬುದು ನಮ್ಮ ಆಗ್ರಹ, ಹಕ್ಕೊತ್ತಾಯ. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆಯು ವೈಯಕ್ತಿಕವಾದದ್ದು ಎಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರು ಹೇಳಿದರು.

ಬಸವ ಸಮಿತಿ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರಕಾರ ಅಥವಾ ಸರಕಾರವನ್ನು ಪ್ರತಿನಿಧಿಸುವವರು ಈ ಬಗ್ಗೆ ಹೇಳಿಕೆ ನೀಡಿದರೆ ನಾವು ಪ್ರತಿಕ್ರಿಯಿಸುತ್ತೇವೆ. ಅಮಿತ್ ಶಾ ನೀಡಿರುವ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ಪ್ರಧಾನಿ ನರೇಂದ್ರಮೋದಿ ನಮ್ಮ ಬೇಡಿಕೆಯನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಮ್ಮ ಗುರಿ ಈಡೇರುವವರೆಗೆ ವಿರಮಿಸುವುದಿಲ್ಲ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮಾತೆ ಮಹಾದೇವಿ ನೀಡಿರುವ ಹೇಳಿಕೆಯು ವೈಯಕ್ತಿಕವಾದದ್ದು. ನಾವು ಈ ಸಮಾವೇಶದಲ್ಲಿ ಯಾವುದೆ ರೀತಿಯ ರಾಜಕೀಯ ಗುಪ್ತ ಕಾರ್ಯಸೂಚಿಯನ್ನು ಹೊಂದಿಲ್ಲ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ಮುಖ್ಯ. ನಾವು ಇಲ್ಲಿ ಯಾವುದೇ ಪಕ್ಷದ ಪರವಾಗಿ ವಕಾಲತ್ತು ವಹಿಸಲು ಬಂದಿಲ್ಲ. ನಮಗೆ ಸಹಕಾರ ನೀಡಿದವರಿಗೆ ಸಹಕಾರ ನೀಡುವುದು ಧರ್ಮ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸುವುದಾಗಿ ಮುರುಘಾ ಶರಣು ತಿಳಿಸಿದರು.

ಗದಗಿನ ತೋಂಟದಾರ್ಯ ಮಠದ ತೋಂಟದ ಸಿದ್ದಲಿಂಗ ಸ್ವಾಮಿ ಮಾತನಾಡಿ, ಅಮಿತ್ ಶಾ ಒಬ್ಬ ಅಸಾಮಾನ್ಯ ವ್ಯಕ್ತಿ. ಉತ್ತರಪ್ರದೇಶದಲ್ಲಿ ಜಾತಿ, ಹಣ ಬಲವಿದ್ದರೂ ಯಾದವರನ್ನು ಪರಾಭವಗೊಳಿಸಿ, ಬಿಜೆಪಿ ಆಡಳಿತಕ್ಕೆ ಬರುವಂತೆ ಮಾಡಿದರು. ನಮ್ಮ ರಾಜ್ಯದಲ್ಲಿಯೂ ಲಿಂಗಾಯತರನ್ನು ಬದಿಗಿಟ್ಟು ಬಿಜೆಪಿ ಅಧಿಕಾರಕ್ಕೆ ತರಲು ರಣತಂತ್ರ ಹೂಡುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದರು.

ಲಿಂಗಾಯತ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮಿ ಮಾತನಾಡಿ, ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಕಳುಹಿಸಿದ ಲಿಂಗಾಯತ ಅಲ್ಪಸಂಖ್ಯಾತ ಧರ್ಮದ ಪ್ರಸ್ತಾವನೆಯನ್ನು ತಿರಸ್ಕರಿಸುವುದಾಗಿ ಹೇಳಿಕೆ ನೀಡಲು ಅಮಿತ್ ಶಾ ಯಾರು? ನೀವೇನು ರಾಷ್ಟ್ರಪತಿಗಳೆ? ಭಾರತ ಸರಕಾರವೇ? ಪ್ರಧಾನಮಂತ್ರಿಗಳೇ? ಕೇಂದ್ರ ಸಚಿವ ಸಂಪುಟದ ಸದಸ್ಯರೇ? ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರೇ? ಇವೆರೆಲ್ಲರನ್ನೂ ಮೀರಿದ ಸಾರ್ವಭೌಮ ಸರ್ವಾಧಿಕಾರಿಯೇ? ಯಾವ ಅಧಿಕಾರದಿಂದ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ್ದೀರಾ? ಒಂದು ವೇಳೆ ಕೇಂದ್ರ ಸರಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರೆ ಅದು ನಿಮ್ಮ ಪ್ರಭಾವದಿಂದ ರಾಜಕೀಯ ಪ್ರೇರಿತ ನಿರ್ಣಯವೆಂದೆ ಭಾವಿಸಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಅವರು ಎಚ್ಚರಿಕೆ ನೀಡಿದರು.

ದೇಶದ ಪ್ರಜಾಪ್ರಭುತ್ವವು ಸಂವಿಧಾನಕ್ಕೆ ಬದ್ಧವಾಗಿ ಸಂಸತ್ತು ಮತ್ತು ಶಾಸನ ಸಭೆಗಳು ನಿರ್ಮಿಸಿದ ಕಾನೂನುಗಳಿಗೆ ಅನುಗುಣವಾಗಿ ನಡೆಯಬೇಕೆ ಹೊರತು ಯಾವುದೋ ಒಂದು ರಾಜಕೀಯ ಪಕ್ಷದ ಅಧ್ಯಕ್ಷರ ಬೇಜವಾಬ್ದಾರಿ ಹೇಳಿಕೆಯಂತಲ್ಲ ಎಂಬುದನ್ನು ನೆನಪಿಡಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೇಲಿಮಠದ ಶ್ರೀ ಶಿವರುದ್ರಸ್ವಾಮಿ, ಬೀದರ್ ಜಿಲ್ಲೆಯ ಬಾಲ್ಕಿಯ ಬಸವಲಿಂಗ ಪಟ್ಟದೇವರು ಸ್ವಾಮಿ ಸೇರಿದಂತೆ ಹಲವು ಮಠಗಳ ಸ್ವಾಮಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News