×
Ad

ಬೆಂಗಳೂರು: ಕೇಂದ್ರದ ದಲಿತ ವಿರೋಧಿ ನೀತಿ ಖಂಡಿಸಿ ಎ.9ಕ್ಕೆ ದಲಿತ ಸಂಘಟನೆಗಳಿಂದ ಪ್ರತಿಭಟನೆ

Update: 2018-04-07 20:54 IST

ಬೆಂಗಳೂರು, ಎ. 7: ಎಸ್ಸಿ-ಎಸ್ಟಿ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ನಿಷ್ಕ್ರಿಯೆಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಎ.9ರಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಎ.9ರ ಸೋಮವಾರ ಬೆಳಗ್ಗೆ 11ಗಂಟೆಗೆ ಇಲ್ಲಿನ ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಲಿದ್ದು, ದಲಿತ ಮುಖಂಡರಾದ ಶ್ರೀಧರ ಕಲಿವೀರ, ಎಂ.ಜಯಣ್ಣ, ಡಿ.ಜಿ.ಸಾಗರ್, ಅಣ್ಣಯ್ಯ, ಜಿಗಣಿ ಶಂಕರ್, ಚನ್ನಕೃಷ್ಣಪ್ಪ, ಎಂ. ಸೋಮಶೇಖರ್, ಎಂ.ಗುರುಮೂರ್ತಿ, ಕೆ.ಕೃಷ್ಣಪ್ಪ, ಮುನಿಆಂಜಿನಪ್ಪ, ಮರಿಯಪ್ಪ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾದೀಶರ ಹುದ್ದೆಗಳಲ್ಲಿ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಬೇಕು. ದೌರ್ಜನ್ಯ ತಡೆ ಕಾಯ್ದೆ ಊರ್ಜಿತಗೊಳಿಸಿ, ದಲಿತರಿಗೆ ರಕ್ಷಣೆ ಕಲ್ಪಿಸಲು ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಕರ್ತವ್ಯ ಲೋಪವೆಸಗಿದ ಕೇಂದ್ರ ಕಾನೂನು ಇಲಾಖೆ ಕಾರ್ಯದರ್ಶಿ ಮತ್ತು ಸರಕಾರಿ ವಕೀಲರನ್ನು ಕೂಡಲೇ ಅಮಾನತ್ತು ಮಾಡಬೇಕು. ಅಲ್ಲದೆ, ದಲಿತ ವಿರೋಧಿ ಕೇಂದ್ರ ಕಾನೂನು ಸಚಿವ ಹಾಗೂ ಪ್ರಧಾನಿಯವರನ್ನು ವಜಾಮಾಡಬೇಕು. ಪುನರ್ ಪರಿಶೀಲನಾ ಅರ್ಜಿ ಪರ ವಕಾವತ್ತು ವಹಿಸಲು ಸಾಮಾಜಿಕ ನ್ಯಾಯದಲ್ಲಿ ಪರಿಣಿತ ಮತ್ತು ಬದ್ಧತೆಯುಳ್ಳ ಖಾಸಗಿ ವಕೀಲರನ್ನು ನೇಮಿಸಬೇಕೆಂದು ಒತ್ತಾಯಿಸಲಾಗಿದೆ.

ಭಾರತ್ ಬಂದ್ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರಕಾರ ತಲಾ 1ಕೋಟಿ ರೂ.ಪರಿಹಾರ ನೀಡಬೇಕು. ಹಿಂಸೆ ಮತ್ತು ಗಲಭೆಗೆ ಕಾರಣರಾದ ಸಮಾಜ ವಿರೋಧಿ ಶಕ್ತಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News