×
Ad

ನರ್ಸಪ್ಪ ಸಿ.ಸಾಲ್ಯಾನ್

Update: 2018-04-07 22:52 IST

ಮುಂಬೈ, ಎ. 7: ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಆಧಾರಸ್ತಂಭ, ಸಮಾಜ ಸೇವಕ, ಮಹಾನಗರದ ಹಿರಿಯ ಹೊಟೇಲ್ ಉದ್ಯಮಿ ನರ್ಸಪ್ಪ ಸಿ.ಸಾಲ್ಯಾನ್ (92) ನಗರದ ಕುಲಬಾ ಕಪ್‌ಪರೇಡ್ ಅಲ್ಲಿನ ಸೀಲಾರ್ಡ್ ಅಪಾರ್ಟ್‌ಮೆಂಟ್‌ನ ಸ್ವನಿವಾಸದಲ್ಲಿ ಅಲ್ಪಕಾಲ ಅನಾರೋಗ್ಯದಿಂದ ನಿಧನರಾದರು.

ಸಾಲ್ಯಾನ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೆಜಮಾಡಿಕೋಡಿ ನಡಿಕುದ್ರು ನಿವಾಸಿಯಾಗಿದ್ದು, ಮುಂಬೈನಲ್ಲಿ ಫೋರ್ಟ್ ಸೆಂಟ್ರಲ್ ಮತ್ತು ಭಾರತ್ ಎಕ್ಸಲೆನ್ಸಿ ಹೋಟೆಲು ಮಾಲಕರಾಗಿದ್ದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸದಾ ಮುಂದಿದ್ದು ವಿವಿಧ ರೀತಿಯ ಸೇವೆ ಸಲ್ಲಿಸಿದ್ದು, ನಡಿಕುದ್ರು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೂ ಸಹಕಾರ ನೀಡಿದ್ದರು.

ಬಿಲ್ಲವರ ಅಸೋಸಿಯೇಶನ್‌ನ 85ನೇ ಸಂಸ್ಥಾಪಕ ದಿನಾಚರಣಾ ಸಂಭ್ರಮದಲ್ಲಿ ನರ್ಸಪ್ಪ ಸಾಲ್ಯಾನ್ ಅವರಿಗೆ ವಿಶೇಷ ಗೌರವವನ್ನಿತ್ತು ಸನ್ಮಾನಿಸಲಾಗಿತ್ತು. ಅನೇಕ ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟ ಸಾಲ್ಯಾನ್ ಅಸೀಮ ಛಲವಾದಿಯಾಗಿದ್ದರು. ಮಹಾಲಕ್ಷ್ಮೀ ಪೂರ್ವದ ಸಾತ್‌ರಸ್ತೆ ಮತ್ತು ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನ ಮತ್ತು ಶ್ರೀ ನಾರಾಯಣ ಗುರುಗಳ ಪರಮ ಭಕ್ತರಾಗಿದ್ದ ಸಾಲ್ಯಾನ್ ಸ್ವರ್ಗಸ್ಥ ಶ್ರೀ ನಿರಂಜನ ಸ್ವಾಮಿ ಅವರ ಆಪ್ತರಾಗಿದ್ದು, ಅವಿರತ ಪರಿಶ್ರಮದಿಂದ ಉದ್ಯಮವನ್ನು ನಡೆಸಿ ಶೈಕ್ಷಣಿಕ ಸೇವೆಗೆ ಅಪಾರ ಒತ್ತು ನೀಡಿದ್ದರು.

ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬೈ) ಲಿಮಿಟೆಡ್ ನ ಹಿರಿಯ ನಿರ್ದೇಶಕಿ ಪುಷ್ಪಲತಾ ಎನ್.ಸಾಲ್ಯಾನ್, ಸುಪುತ್ರರಾದ ಸೂರಜ್, ಸುದೇಶ್, ಶರತ್ ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ರವಿವಾರ ಪೂರ್ವಾಹ್ನ 10 ಗಂಟೆಗೆ ಮರೇನ್‌ಲೈನ್ಸ್ ಪೂರ್ವದ ಚಂದನ್‌ವಾಡಿ ಅಲ್ಲಿನ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಾಲ್ಯಾನ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬೈ ಅಧ್ಯಕ್ಷ ನಿತ್ಯಾನಂದ ಡಿ.ಕೋ ಟ್ಯಾನ್ ಮತ್ತು ಸರ್ವ  ಪದಾಧಿಕಾರಿಗಳು, ಸದಸ್ಯರು, ನಿಕಟ ಪೂರ್ವಾಧ್ಯಕ್ಷ ಎಲ್.ವಿ.ಅವಿೂನ್, ಭಾರತ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ನ್ಯಾ ರೋಹಿಣಿ ಜೆ.ಸಾಲಿಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮುಲ್ಕಿ, ನಿರ್ದೇಶಕ ಮಂಡಳಿ, ಸೂರು ಸಿ.ಕರ್ಕೇರ, ಕೆ. ಭೋಜರಾಜ್, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ , ಬ್ಯಾಂಕ್‌ನ ಮಾಜಿ ನಿರ್ದೇಶಕ ಜಗನ್ನಾಥ್ ವಿ.ಕೋಟ್ಯಾನ್, ಕಡಂದಲೆ ಸುರೇಶ್ ಎಸ್.ಭಂಡಾರಿ, ಸತ್ಯಾ ಕೋಟ್ಯಾನ್ ಬೊಯಿಸರ್ ಸೇರಿದಂತೆ ನಗರದಲ್ಲಿನ ಅನೇಕಾನೇಕ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News