'ಕನ್ನಡ ತಂತ್ರಾಂಶ ಅಭಿವೃದ್ಧಿ' ಅನುಷ್ಠಾನವಾಗದ ಡಾ.ಕೆ.ಚಿದಾನಂದಗೌಡ ಸಮಿತಿಯ ವರದಿ

Update: 2018-04-07 18:50 GMT

ಡಾ.ಚಂದ್ರಶೇಖರ ಕಂಬಾರರೂ ಸೇರಿದಂತೆ ಹಲವು ತಜ್ಞರನ್ನು ಸದಸ್ಯರನ್ನಾಗಿಸಿ ಡಾ.ಕೆ.ಚಿದಾನಂದಗೌಡರ ಅಧ್ಯಕ್ಷತೆಯಲ್ಲಿ ರಚಿಸಲಾದ ‘ಕನ್ನಡ ತಂತ್ರಾಂಶ ಸಲಹಾ ಸಮಿತಿ’ಯು ಶ್ರಮವಹಿಸಿ ಕಾರ್ಯನಿರ್ವಹಿಸಿ 2010ರಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ತುರ್ತಾಗಿ ಆಗಬೇಕಾದ 10 ಕೆಲಸಗಳು ಮತ್ತು ಕನ್ನಡ ಅಭಿವೃದ್ಧಿಗಾಗಿ 10 ಸಲಹೆಗಳನ್ನು ವರದಿಯು ಒಳಗೊಂಡಿತ್ತು. ವರದಿ ಸಲ್ಲಿಸಿ ವರ್ಷಗಳೇ ಕಳೆದರೂ ಶಿಫಾರಸುಗಳು ಸರಕಾರದ ಮಟ್ಟದಲ್ಲಿ ಅನುಷ್ಠಾನಗೊಳ್ಳುವ ಲಕ್ಷಣಗಳು ಕಾಣಲಿಲ್ಲ.

ಸಮಿತಿ ಅಧ್ಯಕ್ಷರಾಗಿ ದುಡಿದ ಚಿದಾನಂದಗೌಡರು ಸರಕಾರದ ಹಲವು ಇಲಾಖೆಗಳಿಗೆ ಎಡತಾಕಿ ಸಮಿತಿಯ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಬೇಕಾದ ಅನಿವಾರ್ಯತೆಯೂ ಒದಗಿತ್ತು. 2013ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅಂತರ್ಜಾಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸರಕಾರದ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಡಾ.ಕೆ.ಚಿದಾನಂದಗೌಡರು ತಮ್ಮ ಅಭಿಪ್ರಾಯಗಳನ್ನು ಹೀಗೆ ತಿಳಿಸಿದ್ದಾರೆ: ‘‘ತುರ್ತು ಜಾರಿಗೊಳ್ಳಲೇಬೇಕಾದ ಕೆಲಸಗಳನ್ನು ಶಿಫಾರಸು ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ನೆನಪಿಸುವ ಕೆಲಸ ಮಾಡಿದೆವು. ಆದರೂ, ಯಾವುದೇ ಪ್ರಯೋಜನವಾಗದೆ ಸುಖಾ ಸುಮ್ಮನೆ ಸಮಯ ಹಾಳು ಮಾಡಿಕೊಂಡೆವೇನೋ ಎನ್ನಿಸಿತು’’ ಎಂದಿದ್ದಾರೆ. ‘‘ಪ್ರಮುಖ ಅಂಶಗಳ ಪೈಕಿ ನಾಲ್ಕು ಅಂಶಗಳನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳುವಂತೆ ಸಹ ಸಲಹೆ ಮಾಡಿದ್ದೆವು. ನಮ್ಮ ಈ ಶಿಫಾರಸು ಜಾರಿ ಸಂಬಂಧ ಸರಕಾರ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಲು ರಾಜ್ಯದ ಯಾವೊಂದು ದೊಡ್ಡ ಕಂಪೆನಿಗಳೂ ಮುಂದೆ ಬರಲಿಲ್ಲ. ಕಡೆಗೆ ಹಾಸನದ ಒಂದು ಸಣ್ಣ ಸಂಸ್ಥೆ ‘ಮಾರುತಿ ತಂತ್ರಾಂಶ’ದವರು, ಶ್ರೀ ಪೂರ್ಣಚಂದ್ರ ತೇಜಸ್ವಿ ಅವರಿಂದ ಪ್ರಭಾವಿತರಾಗಿ ಯಾವುದೇ ಮುಂಗಡ ಹಣವನ್ನು ಪಡೆಯದೆ ಯೋಜನೆ ಜಾರಿಗೆ ಕೈಜೋಡಿಸಲು ಮುಂದಾದರು. ಕೆಲಸವನ್ನು ಮಾಡಿ ಕೆಲ ತಂತ್ರಾಂಶಗಳನ್ನು ಸಿದ್ಧಪಡಿಸಿದರು. ಆದರೆ, ಸರಕಾರದಿಂದ ಅವರಿಗೆ ಸೂಕ್ತ ಸಹಕಾರ ಸಿಗಲಿಲ್ಲ. ಸಾಲ ಮಾಡಿ ಯೋಜನೆ ಜಾರಿಗೆ ಶ್ರಮಿಸಿದ ಸಂಸ್ಥೆಗೆ ಸಲ್ಲಬೇಕಾದ ಹಣವನ್ನು ಪಾವತಿಸಲು ನಿರ್ಲಕ್ಷ್ಯ ವಹಿಸಿದರು. ಸರಕಾರದಲ್ಲಿನ ಅಧಿಕಾರಿಗಳು ಕನ್ನಡ ತಂತ್ರಾಂಶದ ಬಗ್ಗೆ ಈ ರೀತಿ ನಿರ್ಲಕ್ಷ ಹೊಂದಿರಬೇಕಾದರೆ ಕಂಪ್ಯೂಟರ್‌ನಲ್ಲಿ ಕನ್ನಡದ ಯಶಸ್ವಿ ಬಳಕೆ ಹೇಗೆ ಸಾಧ್ಯ?’’ ಎಂದು ಚಿದಾನಂದಗೌಡರು ಪ್ರಶ್ನಿಸಿದ್ದಾರೆ.

ಚಂದ್ರಶೇಕರ ಕಂಬಾರ

ಸರಕಾರದ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಡಾ.ಚಂದ್ರಶೇಖರ ಕಂಬಾರರು 2013ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಪತ್ರದ ವಿವರಗಳು ಹೀಗಿವೆ : ‘‘ಕನ್ನಡ ತಂತ್ರಾಂಶದ ಸಮಗ್ರ ಅಭಿವೃದ್ಧಿಗಾಗಿ ಸಮಿತಿ ನೀಡಿದ ವರದಿಯನ್ನು ಜಾರಿಗೆ ತರುವಂಥದ್ದು ಕನ್ನಡ ಉಳಿಸಿ ಬೆಳೆಸಲು ಈಗಿನ ಸರಕಾರ ಮಾಡಲೇಬೇಕಿರುವ ಅತಿ ತುರ್ತಿನ ಕಾರ್ಯ. ಈ ಬಗ್ಗೆ ನೀವು ತುರ್ತಾಗಿ ಗಮನ ಹರಿಸಿದರೆ ಒಳ್ಳೆಯದು. ಸಂಬಂಧಿತ ಅಧಿಕಾರಿಗಳು ವರದಿ ಅನುಷ್ಠಾನಕ್ಕೆ ಮನಸ್ಸು ಮಾಡುತ್ತಿಲ್ಲ. ಎಲ್ಲರೂ ಮಾಡೋಣ ಎನ್ನುತ್ತಾರೆ ವಿನಾ ಮಾಡುವುದಿಲ್ಲ. ಮಾಡುವುದಿಲ್ಲ ಎನ್ನುವುದಕ್ಕೆ ಮಾಡೋಣ ಎನ್ನುವುದೇ ಪರ್ಯಾಯ ಪದವೋ ಗೊತ್ತಿಲ್ಲ..! ಸರಕಾರ ಈಗಲಾದರೂ ಆ ಬಗ್ಗೆ ಎಚ್ಚೆತ್ತು ಚಿದಾನಂದಗೌಡ ವರದಿ ಅನುಷ್ಠಾನದ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು. ಏಕೆಂದರೆ, ತಡವಾದಷ್ಟೂ ಹಾನಿ ಹೆಚ್ಚು. ಆಮೇಲೆ ಆ ಬಗ್ಗೆ ಮರುಗಬಹುದಷ್ಟೇ ವಿನಾ ಬೇರೇನೂ ಮಾಡಲು ಸಾಧ್ಯವಿಲ್ಲ’’.

      

ಡಾ.ಕೆ.ಚಿದಾನಂದಗೌಡ                       ಪೂರ್ಣಚಂದ್ರ ತೇಜಸ್ವಿ

2014ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಿದ್ಧಗೊಂಡ ಒಂದಷ್ಟು ಯೂನಿಕೋಡ್ ಫಾಂಟ್‌ಗಳು, ಸ್ಮಾರ್ಟ್ ಫೋನ್ ಆ್ಯಪ್‌ಗಳು, ಫಾಂಟ್ ಪರಿವರ್ತಕಗಳನ್ನು ಸಾರ್ವಜನಿಕ ಬಳಕೆಗಾಗಿ ಬಿಡುಗಡೆ ಮಾಡಲಾಯಿತು. ಇದನ್ನು ಹೊರತುಪಡಿಸಿ, ವರದಿಯ ಪ್ರಮುಖ ಶಿಫಾರಸುಗಳು ಇಂದಿಗೂ ಅನುಷ್ಠಾನಗೊಳ್ಳದೆ ವರದಿಯು ಮೂಲೆಗುಂಪಾಗಿದೆ. ಇಷ್ಟಕ್ಕೂ, ಡಾ.ಕೆ.ಚಿದಾನಂದಗೌಡ ಸಮಿತಿಯ ವರದಿಯ ಶಿಫಾರಸುಗಳು ಏನು ಎಂಬುದನ್ನು ನೋಡೋಣ.

►► ತುರ್ತಾಗಿ ಆಗಬೇಕಾದ ಕೆಲಸಗಳು :

○ ಆಸ್ಕಿಯಿಂದ ಯೂನಿಕೋಡ್‌ಗೆ ಪರಿವರ್ತಕಗಳು

○ ಯೂನಿಕೋಡ್‌ನಲ್ಲಿ ಅಕ್ಷರಶೈಲಿಗಳ ತಯಾರಿಕೆ

○ ಲಿನಕ್ಸ್ ಆಧಾರಿತ ಮುಕ್ತ ಆಕರ ತಂತ್ರಾಂಶ

○ ಮೊಬೈಲ್ ಫೋನ್‌ಗಳಿಗಾಗಿ ಯೂನಿಕೋಡ್ ರೆಂಡರಿಂಗ್ ಇಂಜಿನ್

○ ಇತರ ರಾಜ್ಯ ಮತ್ತು ಪರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಲಿಕೆಗಾಗಿ ವಾಸ್ತವಸದೃಶ ವಿಶ್ವವಿದ್ಯಾನಿಲಯ (ವರ್ಚುವಲ್ ಯುನಿವರ್ಸಿಟಿ) ಸ್ಥಾಪನೆ ಮತ್ತು ಕನ್ನಡ ಕಲಿಕೆ ತಂತ್ರಾಂಶದ ತಯಾರಿಸುವುದು

○ ಕನ್ನಡ ಬ್ರೈಲ್ ಸಂಬಂಧಿತ ತಂತ್ರಾಂಶ

○ ಆಪ್ಟಿಕಲ್ ಕ್ಯಾರೆಕ್ಟರ್ ರೆಕೆಗ್ನಿಶನ್ 

○ ಕನ್ನಡದಲ್ಲಿ ಧ್ವನಿ ಸಂಸ್ಕರಣೆ

○ ಕನ್ನಡ ಕಲಿಕಾ ತಂತ್ರಾಂಶ ತಯಾರಿ ಮತ್ತು ‘ಕನ್ನಡ ಲೋಗೋ’ವನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು

○ ಅಂತರ್ಜಾಲದಲ್ಲಿ ನಿಘಂಟುಗಳನ್ನು ಸೇರಿಸುವುದು * ಪಾರಿಭಾಷಿಕ ಪದಕೋಶದ ತಯಾರಿ ಮತ್ತು ಅವುಗಳನ್ನು ಅಂತರ್ಜಾಲದಲ್ಲಿ               ಸೇರಿಸುವುದು

○  ಕನ್ನಡ ಭಾಷಾ ಸಂಸ್ಕರಣೆಯ ತಂತ್ರಾಂಶದ ತಯಾರಿ

○  ಸಾರ್ವಜನಿಕ ಕ್ಷೇತ್ರಕ್ಕೆ ಅಗತ್ಯವಾದ ತಂತ್ರಾಂಶಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವುದು

○  ಅಂತರ್ಜಾಲದಲ್ಲಿ ನಿಖರ ಮಾಹಿತಿಯನ್ನು ನೀಡುವ ಕನ್ನಡ ವಿಶ್ವಕೋಶವನ್ನು ಸ್ಥಾಪಿಸುವುದು

○   ಕನ್ನಡದ ಮೌಲಿಕ ಕೃತಿಗಳನ್ನು ಅಂತರ್ಜಾಲದಲ್ಲಿ ಇರಿಸುವುದು.

►► ಸರಕಾರಕ್ಕೆ ಸಲಹೆಗಳು:

► ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯನ್ನು ಕಡ್ಡಾಯವೆಂದು ಪ್ರಕಟಿಸುವುದು ಮತ್ತು ಕನ್ನಡದ ಎಲ್ಲ ಕೆಲಸಗಳು ಮತ್ತು ಅಂತರ್ಜಾಲ ತಾಣಗಳು ಯುನಿಕೋಡಿನಲ್ಲೇ ಇರಬೇಕೆಂದು ಸುತ್ತೋಲೆ ಹೊರಡಿಸುವುದು.

► ಕರ್ನಾಟಕ ಸರಕಾರ ವ್ಯಾಪಕವಾಗಿ ಬಳಸಿರುವ ಮತ್ತು ಬಳಸುತ್ತಿರುವ ಪದ ಸಂಸ್ಕರಣೆ ಮತ್ತು ಮುದ್ರಣ ಕಾರ್ಯಗಳಿಗಾಗಿ ಯೋಗ್ಯ ಸುಂದರ ಯೂನಿಕೋಡ್ ಅಕ್ಷರ ಶೈಲಿಗಳು ಲಭ್ಯವಿಲ್ಲವಾದುದರಿಂದ, ಪದಸಂಸ್ಕರಣೆಯಲ್ಲಿ ಅವು ಲಭ್ಯವಾಗುವ ತನಕ, ಅತ್ಯವಶ್ಯಕ ಎನಿಸಿದಲ್ಲಿ ಮಾತ್ರ, ಹಿಂದೆ ಬಳಸಲಾಗಿರುವ ಹಳೆಯ ಸುಂದರ ಅಕ್ಷರ ಶೈಲಿಗಳ ಬಳಕೆಗೆ ಸ್ವಲ್ಪ ಕಾಲ ಅವಕಾಶ ನೀಡುವುದು. ಆದರೆ, ಮೂಲ ಮಾಹಿತಿ ಮಾತ್ರ ಯೂನಿಕೋಡ್‌ನಲ್ಲೇ ಇರತಕ್ಕದ್ದು.

► ಕನ್ನಡದ ಯೂನಿಕೋಡ್ ಅಕ್ಷರ ಶೈಲಿಗಳ ಲೋಪದೋಷಗಳ ನಿವಾರಣೆಗೆ ಮತ್ತು ಸುಂದರ ಯೂನಿಕೋಡ್ ಅಕ್ಷರಶೈಲಿಗಳ ತಯಾರಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದು.

► ಕರ್ನಾಟಕ ಸರಕಾರದ ಕೆಲಸಗಳಿಗೆಲ್ಲ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶವನ್ನೇ ಬಳಸಬೇಕೆಂದು, ಮತ್ತು ವಿಶೇಷವಾದ ಕೆಲಸಕ್ಕೆ ಮುಕ್ತ ತಂತ್ರಾಂಶ ಅಲಭ್ಯವಾಗಿದ್ದಾಗ ಮಾತ್ರ, ವ್ಯಾಪಾರೀ ತಂತ್ರಾಂಶ ಬಳಸಬೇಕೆಂದು ಸುತ್ತೋಲೆ ಹೊರಡಿಸುವುದು.

► ಮೊಬೈಲ್ ಫೋನ್ ತಯಾರಕರಿಗೆ ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸಲು ನಿರ್ದೇಶಿಸುವುದು.

► ಕನ್ನಡ ತಂತ್ರಾಂಶ ಮತ್ತು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸುವುದು.

► ಯೂನಿಕೋಡ್ ಒಕ್ಕೂಟಕ್ಕೆ ಕಾಲಕಾಲಕ್ಕೆ ಸರಿಯಾಗಿ ಅಗತ್ಯವಾದ ಮಾಹಿತಿಯನ್ನು ಸಲಹಾ ಸಮಿತಿಯ ಮೂಲಕ ಒದಗಿಸುವುದು.

► ಕನ್ನಡ ತಂತ್ರಾಂಶ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸುವುದು.

►  ಓಪನ್ ಆಫೀಸ್ ಬಳಕೆಯನ್ನು ಜನಪ್ರಿಯಗೊಳಿಸಲು ಸರಕಾರಿ ಸಿಬ್ಬಂದಿಗೆ ಆಗಾಗ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.

► ಮಾಹಿತಿ ಸಿಂಧು ಯೋಜನೆಯಲ್ಲಿ ಶೈಕ್ಷಣಿಕ ಮಾಹಿತಿಗಳು ಕನ್ನಡದಲ್ಲಿಯೇ ಇರಲು ಮತ್ತು ಗಣಕ ಶಿಕ್ಷಣ ಕನ್ನಡದ ಮೂಲಕವೇ ಆಗಲು ಕ್ರಮ ಕೈಗೊಳ್ಳುವುದು.

► ಉತ್ತಮ ಕನ್ನಡ ತಂತ್ರಾಂಶ ತಯಾರಕರಿಗೆ ಪ್ರತಿ ವರ್ಷವೂ ಉನ್ನತ ಮೌಲ್ಯದ ಬಹುಮಾನಗಳನ್ನು ನೀಡುವುದು.

► ಪ್ರತಿಯೊಂದು ವಿಶ್ವವಿದ್ಯಾನಿಲಯವೂ ಪ್ರತೀ ವರ್ಷ ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಯ ಕುರಿತು ಒಂದು ವಿಶ್ವಮಟ್ಟದ ಸಮಾವೇಶವನ್ನು ನಡೆಸುವಂತೆ ಸುತ್ತೋಲೆ ಹೊರಡಿಸುವುದು, ಮತ್ತು ಅದಕ್ಕೆ ಧನಸಹಾಯ ನೀಡುವುದು.

► ಕನ್ನಡದ ವಿಶ್ವಕೋಶವು ನಿರಂತರವಾಗಿ ಅಂತರ್ಜಾಲದಲ್ಲಿ ಲಭ್ಯವಾಗಿರುವಂತೆ ವ್ಯವಸ್ಥೆ ಮಾಡುವುದು, ಮತ್ತು ಇದರ ನಿರ್ವಹಣೆಗಾಗಿ ಖಾಸಗಿ ಸಂಸ್ಥೆ ಮತ್ತು ಸರಕಾರದ ಪ್ರತಿನಿಧಿಗಳಿರುವ ಒಂದು ಆಡಳಿತ ಮಂಡಳಿಯನ್ನು ಸ್ಥಾಪಿಸುವುದು.

‘‘ಕನ್ನಡ ತಂತ್ರಾಂಶದ ಸಮಗ್ರ ಅಭಿವೃದ್ಧಿಗಾಗಿ ಸಮಿತಿ ನೀಡಿದ ವರದಿಯನ್ನು ಜಾರಿಗೆ ತರುವಂಥದ್ದು ಕನ್ನಡ ಉಳಿಸಿ ಬೆಳೆಸಲು ಈಗಿನ ಸರಕಾರ ಮಾಡಲೇಬೇಕಿರುವ ಅತಿ ತುರ್ತಿನ ಕಾರ್ಯ. ಈ ಬಗ್ಗೆ ನೀವು ತುರ್ತಾಗಿ ಗಮನ ಹರಿಸಿದರೆ ಒಳ್ಳೆಯದು. ಸಂಬಂಧಿತ ಅಧಿಕಾರಿಗಳು ವರದಿ ಅನುಷ್ಠಾನಕ್ಕೆ ಮನಸ್ಸು ಮಾಡುತ್ತಿಲ್ಲ. ಎಲ್ಲರೂ ಮಾಡೋಣ ಎನ್ನುತ್ತಾರೆ ವಿನಾ ಮಾಡುವುದಿಲ್ಲ. ಮಾಡುವುದಿಲ್ಲ ಎನ್ನುವುದಕ್ಕೆ ಮಾಡೋಣ ಎನ್ನುವುದೇ ಪರ್ಯಾಯ ಪದವೋ ಗೊತ್ತಿಲ್ಲ..! ಸರಕಾರ ಈಗಲಾದರೂ ಆ ಬಗ್ಗೆ ಎಚ್ಚೆತ್ತು ಚಿದಾನಂದಗೌಡ ವರದಿ ಅನುಷ್ಠಾನದ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು. ಏಕೆಂದರೆ, ತಡವಾದಷ್ಟೂ ಹಾನಿ ಹೆಚ್ಚು. ಆಮೇಲೆ ಆ ಬಗ್ಗೆ ಮರುಗಬಹುದಷ್ಟೇ ವಿನಾ ಬೇರೇನೂ ಮಾಡಲು ಸಾಧ್ಯವಿಲ್ಲ’’.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News