ಇಂಜಿನ್ ಇಲ್ಲದೆ 10 ಕಿ.ಮೀ. ಹಿಂದಕ್ಕೆ ಚಲಿಸಿದ ಪ್ರಯಾಣಿಕ ರೈಲು!

Update: 2018-04-08 16:28 GMT

ಭುವನೇಶ್ವರ, ಎ.8: ವಾಪಸ್ ತೆರಳಲು ಇಂಜಿನ್‌ನನ್ನು ಪ್ರತ್ಯೇಕಗೊಳಿಸಿದ್ದ ವೇಳೆ ರೈಲಿನ ಬೋಗಿಗಳು ಹತ್ತು ಕಿ.ಮೀ ದೂರದವರೆಗೆ ಸಾಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಸಂಬಲ್ಪುರ ರೈಲ್ವೇ ವಿಭಾಗದಲ್ಲಿ ನಡೆದಿದೆ.

ಶನಿವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್ ರೈಲನ್ನು ಒಡಿಶಾದ ತಿತ್ಲಗಡ್ ನಿಲ್ದಾಣದಲ್ಲಿ ಇಂಜಿನ್ ಪ್ರತ್ಯೇಕಗೊಳಿಸಲು ನಿಲ್ಲಿಸಲಾಗಿತ್ತು. ಈ ವೇಳೆ ಸ್ಕಿಡ್ ಬ್ರೇಕ್ ಹಾಕದ ಪರಿಣಾಮ ರೈಲಿನ 22 ಬೋಗಿಗಳು ಹಿಂದಕ್ಕೆ ಸುಮಾರು ಹತ್ತು ಕಿ.ಮೀ ವರೆಗೆ ಚಲಿಸಿದೆ.

ಬೋಗಿಯೊಳಗಿದ್ದ ಪ್ರಯಾಣಿಕರು ಈ ಅನಿರೀಕ್ಷಿತ ಘಟನೆಯಿಂದ ಆತಂಕಕ್ಕೊಳಗಾದರೂ ಯಾರಿಗೂ ಯಾವ ಹಾನಿಯೂ ಸಂಭವಿಸಿಲ್ಲ ಎಂದು ಪೂರ್ವ ಕರಾವಳಿ ರೈಲ್ವೇ ವಕ್ತಾರರು ತಿಳಿಸಿದ್ದಾರೆ. ರೈಲು ಇಂಜಿನನ್ನು ಒಂದು ಕಡೆಯಿಂದ ಪ್ರತ್ಯೇಕಿಸಿ ಇನ್ನೊಂದು ಕಡೆಗೆ ಅಳವಡಿಸುವ ವೇಳೆ ಈ ಘಟನೆ ನಡೆದಿದೆ. ಇಂಜಿನ್ ಇಲ್ಲದೆ ಚಲಿಸುತ್ತಿದ್ದ ಬೋಗಿಗಳನ್ನು ರೈಲ್ವೇ ಸಿಬ್ಬಂದಿ ಹಳಿಯ ಮೇಲೆ ಕಲ್ಲುಗಳನ್ನು ಇಡುವ ಮೂಲಕ ನಿಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ನಂತರ ತಿತ್ಲಗಡ್‌ನಿಂದ ಇಂಜಿನ್ ಕಳುಹಿಸಿ ಬೋಗಿಗಳನ್ನು ನಿಲ್ದಾಣಕ್ಕೆ ತರಲಾಯಿತು. ಘಟನೆಗೆ ಸಂಬಂಧಪಟ್ಟಂತೆ ಏಳು ಮಂದಿ ರೈಲ್ವೇ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News