ಸುಳ್ಳು ಸುದ್ದಿಯನ್ನು ನಂಬಿ ಮಾಜಿ ಮುಖ್ಯ ಚುನಾವಣಾ ಆಯುಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

Update: 2018-04-08 10:51 GMT

ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರು ನಿಧನರಾಗಿದ್ದಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಈ ಸುದ್ದಿ ಸುಳ್ಳು ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದರೂ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹಾಗು ಜಿತೇಂದ್ರ ಸಿಂಗ್ ಸೇಶನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಗೆಪಾಟಲಿಗೀಡಾಗಿದ್ದಾರೆ.

“ಎಪ್ರಿಲ್ 6ರಂದು ಟಿ.ಎನ್. ಶೇಷನ್ ನಿಧನರಾಗಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಅವರ ಪತ್ನಿ ನಿಧನರಾಗಿದ್ದರು. ಅವರಿಗೆ ಮಕ್ಕಳಿಲ್ಲ” ಎಂದು ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ನ ಮೇಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ‘ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದು, ನಂತರ ಇದನ್ನು ಡಿಲಿಟ್ ಮಾಡಲಾಗಿದೆ.

ಮಾರ್ಚ್ 31ರಂದು ಟಿ.ಎನ್. ಶೇಷನ್ ರ ಪತ್ನಿ ಜಯಲಕ್ಷ್ಮೀ ಶೇಷನ್ ನಿಧನರಾಗಿದ್ದರು. ಮರುದಿನ ಶೇಷನ್ ಕೂಡ ನಿಧರಾಗಿದ್ದಾರೆ ಎನ್ನುವು ವದಂತಿಯೊಂದು ಅದಾಗಲೇ ಹಬ್ಬತೊಡಗಿತ್ತು. ಈ ಬಗ್ಗೆ ಶೇಷನ್ ಅವರ ಮನೆಗೆ ‘ಬೂಮ್ ಲೈವ್’ ಕರೆ ಮಾಡಿದ್ದು, ಶೇಷನ್ ನಿಧನದ ಸುದ್ದಿ ಸುಳ್ಳು ಎಂದು ಸಂಬಂಧಿಕರೊಬ್ಬರು ಖಚಿತಪಡಿಸಿದ್ದಾರೆ.

ಡಿಎನ್ ಎ ಸೇರಿದಂತೆ ಹಲವು ಮಾಧ್ಯಮಗಳು ಶೇಷನ್ ನಿಧನದ ಸುದ್ದಿ ಸುಳ್ಳು ಎಂದು ವರದಿ ಮಾಡಿದ್ದರೂ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಹಾಗು ಮತ್ತೊಬ್ಬ ಕೇಂದರ ಸಚಿವ ಜಿತೇಂದ್ರ ಸಿಂಗ್ ಸುಳ್ಳು ಸುದ್ದಿಯನ್ನು ನಂಬಿ ಟ್ವೀಟ್ ಮಾಡಿರುವುದು ವಿಪರ್ಯಾಸವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News