ಪ್ರಧಾನಿ ಮೋದಿ ಸುಳ್ಳಿನ ಶಿವಪ್ಪ: ಸಿ.ಎಂ. ಇಬ್ರಾಹೀಂ ವ್ಯಂಗ್ಯ
ಬೆಂಗಳೂರು, ಎ.8: ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಶಿವಪ್ಪ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹೀಂ ವ್ಯಂಗ್ಯವಾಡಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಜನಾಶೀರ್ವಾದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹಲವು ಭರವಸೆಗಳನ್ನು ಈಡೇರಿಸಿ, ಜನರ ಮೆಚ್ಚುಗೆ ಪಡೆದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಬೇಡಿಕೆಗಳನ್ನು ಈಡೇರಿಸದೆ, ಸುಳ್ಳುಗಳನ್ನು ಹೇಳಿಕೊಂಡು ಶಿವಪ್ಪ ಆಗಿದ್ದಾರೆ ಎಂದರು.
ಈ ದೇಶದ ಭವಿಷ್ಯ ಕರ್ನಾಟಕದ ಚುನಾವಣೆ ಮೇಲೆ ನಿಂತಿದೆ. ಹೀಗಾಗಿ, ಇಲ್ಲಿ ಬಿಜೆಪಿ ಸೋಲಿಸಿ, ದೇಶ ಮತ್ತು ಸಂವಿಧಾನವನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ, ಸಾಮಾನ್ಯ-ಬಡ ವರ್ಗದ ಜನರು ಬದುಕು ಕಷ್ಟಕರ ಆಗಲಿದೆ ಎಂದು ಹೇಳಿದರು.
ದೇಶದ ದಾರಿದ್ರ್ಯ ಹೋಗಬೇಕಾದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದ ಅವರು, ಸಂವಿಧಾನ ಬದಲಾವಣೆ ಮಾಡಬೇಕೆಂದು ಹೇಳಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.