ಪೌರಕಾರ್ಮಿಕರ ಸಮಸ್ಯೆ ನಿವಾರಿಸಲು ಕಾಂಗ್ರೆಸ್ ಬದ್ಧ : ರಾಹುಲ್‌ ಗಾಂಧಿ

Update: 2018-04-08 13:01 GMT

ಬೆಂಗಳೂರು, ಎ.8: ಪೌರ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಲು ಕಾಂಗ್ರೆಸ್ ಬದ್ಧವಾಗಿದ್ದು, ಈಗಾಗಲೆ ಪೌರಕಾರ್ಮಿಕರನ್ನು ಖಾಯಂ ಮಾಡುವುದು ಹಾಗೂ ಪೌರ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ತಿಳಿಸಿದರು.

ರವಿವಾರ ನಗರದ ಜಕ್ಕರಾಯನಕೆರೆ ಮೈದಾನದಲ್ಲಿ ಪೌರಕಾರ್ಮಿಕರ ಜತೆ ಸಂವಾದ ನಡೆಸಿದ ಅವರು, ಪೌರಕಾರ್ಮಿಕರು ಶ್ರಮ ಜೀವಿಗಳು. ಹೀಗಾಗಿ ಅವರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆದ್ಯತೆ ಮೇರೆಗೆ ಕೆಲಸ ಮಾಡಲಿದೆ. ಇದರಲ್ಲಿ ಯಾವುದೆ ಅನುಮಾನ ಬೇಡವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಜಕ್ಕರಾಯನಕೆರೆ ಮೈದಾನಕ್ಕೆ ರಾಹುಲ್ ಗಾಂಧಿ ಬರುವ ಸುದ್ದಿ ತಿಳಿದ ಸ್ಥಳೀಯರು ಮಂತ್ರಿಮಾಲ್ ಸಮೀಪದ ರಾಜೀವ್ ಗಾಂಧಿ ವೃತ್ತದಿಂದ ಮೈದಾನದವರೆಗೂ ರಸ್ತೆಯ ಎರಡೂ ಬದಿ ನಿಂತು ಕಾಯುತ್ತಿದ್ದರು. ಬೆಳಗ್ಗೆ 11.15ರ ಸುಮಾರಿಗೆ ರಾಹುಲ್‌ಗಾಂಧಿ ಆಗಮಿಸಿ ರಾಜೀವ್‌ಗಾಂಧಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

ಬಿಸಿಲಲ್ಲೆ ಕುಳಿತ ರಾಹುಲ್: ರಾಜೀವ್‌ಗಾಂಧಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ರಾಹುಲ್‌ಗಾಂಧಿ ನೇರವಾಗಿ ಜಕ್ಕರಾಯನಕೆರೆ ಮೈದಾನಕ್ಕೆ ತೆರಳಿದರು. ಈ ವೇಳೆ ಪೌರಕರ್ಮಿಕರು ಬಿಸಿಲಲ್ಲೆ ಕುಳಿತಿದ್ದನ್ನು ಕಂಡು ವೇದಿಕೆಯ ಬಳಿ ಹೋಗದೆ ಸೀದಾ ಅವರ ಬಳಿಯೆ ಹೋಗಿ ಕುಳಿತು, ಅವರ ಪ್ರಶ್ನೆಗಳನ್ನು ಆಲಿಸಿದರು.

ರಾಹುಲ್ ಗಾಂಧಿ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿಲು ಸುಮಾರು 356 ಮಂದಿ ಪೌರ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಯಿತು. ಇದರಲ್ಲಿ 15 ಮಂದಿಗೆ ರಾಹುಲ್ ಗಾಂಧಿ ರವರ ಜೊತೆ ಮಾತನಾಡಲು ಅವಕಾಶ ನೀಡಲಾಯಿತು. ಈ ವೇಳೆ ರಾಜ್ಯ ಸರಕಾರ ನಮ್ಮ ಸಮಸ್ಯೆಗಳನ್ನು ಬಗೆಹರಿಸಿದೆ. ನಮ್ಮ ಮ್ಕಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಪೌರ ಕಾರ್ಮಿಕರು ಇನ್ನೂ ಗುತ್ತಿಗೆ ಆಧಾರದಲ್ಲೇ ದುಡಿಯುತ್ತಿದ್ದಾರೆ. ಅವರ ಕೆಲಸವನ್ನು ಕಾಯಂಗೊಳಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ಗುಂಡೂರಾವ್, ಸಚಿವ ಕೆ.ಜೆ.ಜಾರ್ಜ್, ಮೇಯರ್ ಸಂಪತ್‌ರಾಜ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News