×
Ad

ಎ.9ರಂದು ರಿಕ್ಷಾ ಚಾಲಕರೊಂದಿಗೆ ಇಂದು ಬಿಎಸ್‌ವೈ ಸಂವಾದ

Update: 2018-04-08 22:01 IST

ಬೆಂಗಳೂರು, ಎ. 8: ಸಮಾಜದ ವಿವಿಧ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ‘ಕರುನಾಡ ಬಂಧು’ ಶೀರ್ಷಿಕೆಯಡಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಾಳೆ(ಎ.9) ವಾಯುವಿಹಾರಿಗಳು, ರಿಕ್ಷಾ ಚಾಲಕರು, ಹೈಗಾರಿಕೆಯಲ್ಲಿ ತೊಡಗಿರುವ ರೈತರೊಂದಿಗೆ ಸಂವಾದ ನಡೆಸಲಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ರವಿವಾರ ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 7ಗಂಟೆಯಿಂದ ನಗರದ ಸ್ಯಾಂಕಿಕೆರೆ ಉದ್ಯಾನವನದಲ್ಲಿ ವಾಯು ವಿಹಾರಿಗಳ ಜತೆ ಚರ್ಚಿಸಲಿದ್ದಾರೆ. ಡಾಲರ್ಸ್‌ ಕಾಲನಿಯಲ್ಲಿರುವ ತನ್ನ ನಿವಾಸದಲ್ಲಿ ರಿಕ್ಷಾ ಚಾಲಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಿದರು.

ಹೈನುಗಾರಿಕೆಯಲ್ಲಿ ತೊಡಗಿರುವ ಹಾಲು ಉತ್ಪಾದಕ ರೈತರು ಹಾಗೂ ರೈತ ಮಹಿಳೆಯರ ಜತೆ ಮಧ್ಯಾಹ್ನ 2ರಿಂದ ಸಂಜೆ 4ಗಂಟೆಯ ವರೆಗೆ ಚರ್ಚಿಸಲಿದ್ದಾರೆ ಎಂದ ಅವರು, ಎ.10ರಂದು ಗಂಗಾವತಿಯಲ್ಲಿ ಭತ್ತದ ಬೆಳೆಗಾರರು ಹಾಗೂ ಅಂದು ಮಧ್ಯಾಹ್ನ ಶಿರಹಟ್ಟಿಯಲ್ಲಿ ಲಂಬಾಣಿ ಸಮುದಾಯದ ಜತೆ ಚರ್ಚಿಸಲಿದ್ದಾರೆ ಎಂದರು.

ಬಿಜೆಪಿ ಮುಷ್ಠಿ ಧಾನ್ಯ ಅಭಿಯಾನದ ಅಂತಿಮ ದಿನವಾದ ಎ.10ರಂದು ಜಿಲ್ಲಾ ಕಚೇರಿಗಳಲ್ಲಿ ಅಭಿಯಾನದಲ್ಲಿ ಸಂಗ್ರಹಿಸಿದ ಧಾನ್ಯದಿಂದ ತಯಾರಿಸಿದ ಪ್ರಸಾದವನ್ನು ಸಾಮೂಹಿಕವಾಗಿ ಸ್ವೀಕರಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ಆತ್ಮಹತ್ಯೆ ಹಾದಿ ಹಿಡಿದಿರುವ ರೈತರಿಗೆ ಧೈರ್ಯ ತುಂಬಲಾಗುವುದು ಎಂದರು.

‘ಬರ ಪೀಡಿತ ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಆರಂಭಕ್ಕೆ ಮೊದಲೇ ಕಮಿಷನ್ ಆಸೆಗಾಗಿ ಪೈಪ್‌ಗಳನ್ನು ಖರೀದಿ ಮಾಡಲಾಗಿದೆ. ನಿಯಮಗಳನ್ನು ಗಾಳಿಗೆತೂರಿ ಗುತ್ತಿಗೆದಾರರ ಜೇಬು ತುಂಬಿಸಿ ಹಣ ಪಡೆಯಲಾಗಿದೆ. ಆದರೂ, ರಾಹುಲ್ ಗಾಂಧಿ, ಸಿದ್ದರಾಮಯ್ಯನವರನ್ನು ಪಕ್ಕದಲ್ಲಿ ಕೂರಿಸಿಕೊಂಡು ‘ನುಡಿದಂತೆ ನಡೆದ ಸರಕಾರ’ ಎಂದು ಬಣ್ಣಿಸುತ್ತಾರೆ. ದುರಾಡಳಿತ ನಡೆಸಿದ್ದ ಸಿದ್ದರಾಮಯ್ಯರಿಗೆ ಮತ ಕೇಳುವ ನೈತಿಕತೆ ಇಲ್ಲ’
-ಶೋಭಾ ಕರಂದ್ಲಾಜೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News