ಕೆಪಿಟಿಸಿಎಲ್ ಪರೀಕ್ಷೆ: ತಪ್ಪು ಕೀ ಉತ್ತರದ ವಿರುದ್ಧ ಅಭ್ಯರ್ಥಿಯಿಂದ ಹೈಕೋರ್ಟ್ ಗೆ ಮೊರೆ
ಬೆಂಗಳೂರು, ಎ.8: ರಾಜ್ಯ ವಿದ್ಯುತ್ ಪ್ರಸರಣಾ ನಿಗಮದ( ಕೆಪಿಟಿಸಿಎಲ್) ಸಹಾಯಕ ಎಂಜಿನಿಯರಿಂಗ್ ಹುದ್ದೆಗಾಗಿ ನಡೆದ ಪರೀಕ್ಷೆಯ ಕೀ ಉತ್ತರದಲ್ಲಿ ತಪ್ಪುಗಳಿದ್ದರೂ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಆರೋಪಿಸಿ ತುಮಕೂರು ಮೂಲದ ಅಭ್ಯರ್ಥಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಇ. ಸೌಮ್ಯ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ನಾರಾಯಣಸ್ವಾಮಿ, ಕೆಪಿಟಿಸಿಎಲ್ ಅಥವಾ ಅರ್ಜಿದಾರರು ನೀಡಿರುವ ಕೀ ಉತ್ತರ ಸರಿಯೇ ಎಂಬ ಬಗ್ಗೆ ವಿಷಯ ತಜ್ಞರಿಂದ ನಿರ್ಧರಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪ್ರಶ್ನೆ ನಂಬರ್ 83ಕ್ಕೆ ನೀಡಲಾಗಿರುವ ಕೀ ಉತ್ತರ ಸರಿಯಿಲ್ಲ. ಡಿ ಸರಿಯಾದ ಉತ್ತರ . ಈ ವಿಷಯದ ಬಗ್ಗೆ ಡಾ. ಅಂಬೇಡ್ಕರ್ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ ಸೂರ್ಯನಾರಾಯಣ್ ಸೇರಿದಂತೆ ಹಲವರನ್ನು ಸಂಪರ್ಕಿಸಲಾಗಿದ್ದು, ಡಿ ಸರಿಯಾದ ಉತ್ತರ ಎಂದು ತಿಳಿಸಿದ್ದಾರೆ. ಇದು ಸರಿಯಾದ ಉತ್ತರ ಆದರೆ ಆ ಹುದ್ದೆ ಪಡೆಯಲು ನಾನು ಅರ್ಹಳೆಂದು ಸೌಮ್ಯ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದನ್ನು ಪರಿಗಣಿಸದೆ ಕೆಪಿಟಿಸಿಎಲ್ ತರಾತುರಿಯಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಆದೇಶ ನೇಮಕಾತಿ ಪತ್ರ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಮತ್ತೊಂದೆಡೆ ಐಐಎಸ್‌ಸಿ ನಿರ್ವಹಣಾ ಅಧ್ಯಯನ ವಿಭಾಗದ ಪ್ರೊ.ಅಖಿಲೇಶ್ ಸಿ ಸರಿಯಾದ ಉತ್ತರ ಎಂದಿದ್ದಾರೆ. ಹಾಗಾಗೀ ಈ ಅರ್ಜಿಯನ್ನು ವಜಾಗೊಳಿಸಬೇಕೆಂದು ಕೆಪಿಟಿಸಿಎಲ್ ಪರ ವಕೀಲರು ಮನವಿ ಮಾಡಿದ್ದಾರೆ. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಕೀ ಉತ್ತರ ಮೌಲ್ಯಮಾಪನದಲ್ಲಿ ಸರಿಯಿಲ್ಲ ವಿಷಯ ತಜ್ಞರಿಂದ ನಿರ್ಧರಿಸುವಂತೆ ಆದೇಶಿಸಿ ತೀರ್ಪು ಪ್ರಕಟಿಸಿದೆ.