ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: 1080 ಲೀ.ಮದ್ಯ, ಅಪಾರ ನಗದು, ವಾಹನಗಳು ವಶ
ಬೆಂಗಳೂರು, ಎ. 8: ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ 24 ಗಂಟೆಗಳಲ್ಲಿ ಸ್ಪಾಟಿಕ್ ಸರ್ವೆಲೆನ್ಸ್ ತಂಡಗಳು, 60ಲಕ್ಷ ರೂ.ನಗದು, 1 ವಾಹನ ಹಾಗೂ 4.5ಲೀ.ಮದ್ಯ ಸೇರಿದಂತೆ 1 ಕೋಟಿ ರೂ.ಗಳಿಗೂ ಅಧಿಕ ವೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಫ್ಲೈಯಿಂಗ್ ಸ್ಕ್ವಾಡ್‌ಗಳು ವಿವಿಧೆಡೆ ಕಾರ್ಯಾಚರಣೆ ನಡೆಸಿ 7.48ಲಕ್ಷ ರೂ. ನಗದು, 300 ವಿಧದ ಡಸ್ಟ್‌ಬಿನ್, ಬಕೆಟ್, 1 ಸಾವಿರ ಕಾರ್ಟನ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ಲಂಚ್ ಬಾಕ್ಸ್‌ಗಳು, 50 ಲೀ.ಗೂ ಹೆಚ್ಚು ಮದ್ಯದ ಬಾಟಲ್ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆಯಡಿ 32 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದ್ದು, ಒಟ್ಟಾರೆಯಾಗಿ ಫ್ಲೈಯಿಂಗ್ ಸ್ಕ್ವಾಡ್‌ಗಳು 175 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದೆ. ಇದರ ಜೊತೆಗೆ ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 559 ಪ್ರಕರಣಗಳನ್ನು ದಾಖಲಿಸಿ 137 ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೀರೆ-ಲ್ಯಾಪ್‌ಟಾಪ್ ವಶ: ವಿವಿಧೆಡೆಗಳಲ್ಲಿ ಪೊಲೀಸ್ ಅಧಿಕಾರಿಗಳು 7ಲಕ್ಷ ರೂ.ನಗದು, 10ಸೀರೆ, 160ಲ್ಯಾಪ್‌ಟಾಪ್, 485 ಲೀ.ಮದ್ಯ ವಶಪಡಿಸಿಕೊಳ್ಳಲಾಗಿದೆ. ಒಟ್ಟು 4.55 ಕೋಟಿ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಜೀವ್ ಕುಮಾರ್ ವಿವರ ನೀಡಿದ್ದಾರೆ.
1080 ಲೀ.ಮದ್ಯ ವಶ: ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳು 4.62 ಲಕ್ಷ ರೂ.ಮೊತ್ತದ 1080 ಲೀ.ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ 116 ಪ್ರಕರಣ ದಾಖಲು ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆ 40 ಕೋಟಿ ರೂ.ಗಳಿಗೂ ಅಧಿಕ ಮೊತ್ತದ 9,257 ಲೀ.ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಮದ್ಯ ಪರವಾನಗೆ ಉಲ್ಲಂಘಿಸಿದ ಆರೋಪದ ಮೇಲೆ 559 ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.