ಬಂಜಾರರ ಏಳಿಗೆಗೆ ಒತ್ತು ನೀಡಿ: ಚಿರಂಜೀವಿಸಿಂಗ್
ಬೆಂಗಳೂರು, ಎ.8: ಯೂರೋಪ್ ರಾಷ್ಟ್ರಗಳಲ್ಲಿ ರೋಮ್ ಸಮುದಾಯ ಹರಿದು ಹಂಚಿ ಹೋಗಿದೆ. ಭಾರತದಲ್ಲಿರುವ ಬಂಜಾರ ಸಮುದಾಯವೂ ಇದಕ್ಕೆ ಭಿನ್ನವಾಗಿಲ್ಲ. ಹೀಗಾಗಿ, ಆಡಳಿತರೂಢ ಸರಕಾರಗಳು ಸಮುದಾಯಯದ ಏಳಿಗೆಗೆ ಒತ್ತು ನೀಡಬೇಕೆಂದು ರಾಜ್ಯ ಸರಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ತಿಳಿಸಿದ್ದಾರೆ.
ರವಿವಾರ ನಗರದ ಇನ್ಸ್‌ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಟೆಕ್ನಾಲಜಿಸ್ಟ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಬಂಜಾರ ರೋಮಾ ಸಂಸ್ಥೆ ಹಾಗೂ ಕರ್ನಾಟಕ ಬಂಜಾರ ನೌಕರರ ಸಾಂಸ್ಕ್ರತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರೋಮ ಬಂಜಾರ ದಿನಾಚಾರಣೆ ಉದ್ಘಾಟಿಸಿ ಅವರು ಮಾತನಾಡಿದರು.
ರೋಮಾ ಸಮುದಾಯ ಹಾಗೂ ಬಂಜಾರ ಸಮುದಾಯ ತನ್ನದೆಯಾದ ಭಾಂದವ್ಯ ಹೊಂದಿದೆ. ಬಂಜಾರ ಸಮುದಾಯ ತನ್ನ ಭಾಷೆ ಸಂಸ್ಕ್ರತಿ, ಭಾಷೆ, ಪರಂಪರೆ ಮೂಲಕ ಭಾರತದಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದೆ. ತಮ್ಮ ಸಮುದಾಯದ ಅಸ್ಮಿತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಣಗಾಡುತ್ತಿದೆ. ಆಡಳಿತರೂಢ ಸರಕಾರಗಳು ಸಮುದಾಯದ ಏಳಿಗೆಗೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದರು.
ನಮ್ಮ ಸಮಕಾಲೀನ ಸಮಸ್ಯೆಗಳು ಹಾಗೂ ಮುಂದಿರುವ ಸವಾಲುಗಳನ್ನು ಎದುರಿಸಿ ಪರಂಪರೆ ಅನುಭವಿಸಿರುವ ಕಹಿಯನ್ನು ಮರೆಸುವ ನಿಟ್ಟಿನಲ್ಲಿ ಇಂದು ವಿಶ್ವ ರೋಮ ಬಂಜಾರ ದಿನಾಚರಣೆ ಆಯೋಜಿಸಲಾಗಿದೆ. ಈ ಮೂಲಕ ನಮ್ಮ ಹಿರಿಯರು ಸ್ಮರಣ ಮಾಡುವ ಮೂಲಕ ಅವರ ಹೋರಾಟಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಬಂಜಾರ ಸಮುದಾದ ತನ್ನದೇ ಆದ ವಿಶಿಷ್ಟ ಸಂಪ್ರದಾಯ, ಸಂಸ್ಕ್ರತಿ ಮೂಲಕ ಗುರುತಿಸಿಕೊಂಡಿದೆ. ಬಂಜಾರ, ರೋಮ ಸಮುದಾಯಗಳ ನಡುವೆ ಭಾಷ ಶಿಕ್ಷಣ, ಸಂಸ್ಕ್ರತಿಗಳ ರಕ್ಷಣೆಗೆ ಸೂಕ್ತ ಮಾರ್ಗದರ್ಶನಗಳ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಲೋಹಗಡ ಪುಸ್ತಕ ಹಾಗೂ ಅಂತರಾಷ್ಟ್ರೀಯ ಬಂಜಾರ ರೋಮಾ ಸಂಸ್ಥೆ (ಐಬಿಆರ್‌ಓ) ವೆಬ್ ಸೈಟ್‌ಗೆ ಚಾಲನೆ ನೀಡಲಾಯಿತು. ಈ ವೇಳೆ ಸಾಹಿತಿ ಕೆ.ವೈ.ನಾರಾಯಣ ಸ್ವಾಮಿ, ಲೋಹಗಡ ಪುಸ್ತಕದ ಮೂಲ ಲೇಖಕ ಗಗನ್‌ದೀಪ್ ಸಿಂಗ್, ಲೋಹಗಡ ಪುಸ್ತಕದ ಕನ್ನಡ ಅನುವಾದಕ ಡಾ.ಕೆ.ಪುಟ್ಟಸ್ವಾಮಿ ಸೇರಿದಂತೆ ಪ್ರಮುಖರಿದ್ದರು.