ದಲಿತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು:ಲಯನ್ ಬಾಲಕೃಷ್ಣ
ಬೆಂಗಳೂರು, ಎ.8: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಂತೆ ದಲಿತರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಹಾಗೂ ರಾಜಕೀಯ ಕ್ಷೇತ್ರ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮದೆ ಆದ ಹೆಜ್ಜೆ ಗುರುತನ್ನು ಮೂಡಿಸಬೇಕೆಂದು ದಲಿತ ಸಂರಕ್ಷ ಸಮಿತಿ ರಾಜ್ಯಾಧ್ಯಕ್ಷ ಲಯನ್ ಕೆ.ವಿ.ಬಾಲಕೃಷ್ಣ ಹೇಳಿದ್ದಾರೆ.
ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಡಿಎಸ್‌ಎಸ್ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೆ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಜನಾಂಗದವರು ಮೇಲ್ಜಾತಿಯವರ ಹಿಂದೆ ಹೋಗುವ ಬದಲು ತಾವೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಪ್ರಜಾಪ್ರತಿನಿಧಿಗಳಾಗಬೇಕು. ಅಂದಾಗ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದು ಹೇಳಿದರು.
ಕೇಂದ್ರ ಸರಕಾರ ಪರಿಶಿಷ್ಟರನ್ನು ತಮ್ಮ ಹಿಡಿತದಲ್ಲಿಯಿಟ್ಟುಕೊಳ್ಳುವುದಕ್ಕಾಗಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಮರು ಪರಿಶೀಲಿಸಲು ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಆದರೆ, ನಾವುಗಳು ಇಂತಹ ಅರ್ಜಿಗಳನ್ನು ಕೋರ್ಟ್‌ಗೆ ಹಾಕದಂತೆ ತಡೆಯಬೇಕು. ಹಾಗೊಂದು ಬಾರಿ ದಲಿತರ ಮೇಲೆ ಹಲ್ಲೆ, ಅತ್ಯಾಚಾರಗಳು ನಡೆದರೆ ಉಗ್ರ ಹೋರಾಟ ನಡೆಸಿ ನ್ಯಾಯಪಡೆಯಬೇಕೆಂದು ತಿಳಿಸಿದರು.
ದಲಿತರನ್ನು ಕಸ ಗುಡಿಸುವವರು, ಶೌಚ ಸ್ವಚ್ಛಗೊಳಿಸುವವರು ಎಂದು ಕೀಳಾಗಿ ಕಾಣುತ್ತಾರೆ. ಆದರೆ, ನಾನು ಇಂತಹ ಮನೋಭಾವನೆಯೇ ಬದಲಾಗಲೆಂದೇ ಇಂದು ಸ್ಟಾರ್ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ ಎಂದು ಹೇಳಿದರು.
ಅಂಬೇಡ್ಕರ್ ಅವರನ್ನು ಈ ದೇಶದಲ್ಲಿ ಜಾತಿಗೆ ಮೀಸಲುಗೊಳಿಸಿದ್ದರೇ ವಿದೇಶದಲ್ಲಿ ಅಂಬೇಡ್ಕರ್ ಅವರನ್ನು ಜ್ಞಾನವಂತ, ಬುದ್ಧಿವಂತ ಎಂದು ಗುರುತಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕೂಟ ನೌಕರರ ಅಧ್ಯಕ್ಷ ಮಲ್ಲೇಶ್, ಶಿವಶಂಕರ್, ರಾಜೇಶ್ ಮಾಸ್ಟರ್ ಉಪಸ್ಥಿತರಿದ್ದರು.