ಸೌಹಾರ್ದ-ದ್ವೇಷದ ನಡುವೆ ಕರ್ನಾಟಕದ ಚುನಾವಣೆ : ರಾಹುಲ್ ಗಾಂಧಿ
ಬೆಂಗಳೂರು, ಎ.8: ಈ ಬಾರಿಯ ಚುನಾವಣೆ ಸೌಹಾರ್ದ ಮತ್ತು ದ್ವೇಷ ಬಿತ್ತುವ ವಿಚಾರಗಳ ಆಧಾರದ ಮೇಲೆ ನಡೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಹೇಳಿದರು.
ರವಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ, ಜನಾಶೀರ್ವಾದ ಯಾತ್ರೆಯ ಅಂಗವಾಗಿ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರ ನಾಗಪುರದ ಆರೆಸ್ಸೆಸ್ ಅವರ ಸಂಘರ್ಷ, ದ್ವೇಷ ಬಿತ್ತುವ ಸಿದ್ದಾಂತದ ವಿರುದ್ಧ ನಾವು, ಸಮಾಜ ಜೋಡಣೆ, ಸೌಹಾರ್ದ ವಿಚಾರಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಹೀಗಾಗಿ, ಈ ಬಾರಿಯ ಚುನಾವಣೆ ವಿಚಾರಧಾರೆಗಳ ಮೇಲೆ ನಿಂತಿದೆ ಎಂದು ಹೇಳಿದರು.
ಬಸವಣ್ಣನ ವಿಚಾರಧಾರೆ ರಾಜ್ಯದ ಮೂಲೆ ಮೂಲೆ ತಲುಪಿದೆ. ರಾಜ್ಯದ ಕಾಂಗ್ರೆಸ್ ಸರಕಾರವು ಬಸವಣ್ಣ ಸಿದ್ದಾಂತದಂತೆ ನುಡಿದಂತೆ ನಡಿದಿದೆ.ಇನ್ನು, ರಾಜ್ಯದ ಜನತೆಯಲ್ಲಿ ಒಗ್ಗೂಡಿ ಬಾಳುವ ವಾತಾವರಣ ಗಟ್ಟಿಯಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಕಳೆದ ಮೂರು ತಿಂಗಳಿನಿಂದ ಕರ್ನಾಟಕದ ಎಲ್ಲೆಡೆ ಜನಾಶೀರ್ವಾದ ಯಾತ್ರೆ ನಡೆಸಿದ್ದು, ಕಾಂಗ್ರೆಸ್‌ಗೆ ಮತ್ತೊಮ್ಮೆ ಅಧಿಕಾರ ನೀಡಲು ಜನರು ಬಯಸಿದ್ದಾರೆ ಎಂದ ಅವರು, ಭ್ರಷ್ಟಾಚಾರ ಆರೋಪದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಕದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನಮ್ಮ ಸರಕಾರದ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದ ಎಂದರು.
ವಿಶ್ವದೆಲ್ಲೆಡೆ ಬೆಂಗಳೂರು ಹೆಸರು ಚಿರಪರಿಚಿತ. ಉದ್ಯೋಗ ಸಷ್ಟಿಯಲ್ಲೂ ಬೆಂಗಳೂರು ಮುಂದಿದೆ. ಕೆಂಪೇಗೌಡರು ಈ ನಗರವನ್ನು ಕಟ್ಟಿದರು.ಅಲ್ಲದೆ, ಅಮೆರಿಕ ದೇಶಕ್ಕೆ ಭಾರತ ಪೈಪೋಟಿ ನೀಡಲು ಬೆಂಗಳೂರಿನಂತಹ ಬೃಹತ್ ನಗರವೇ ಕಾರಣ ಎಂದ ಅವರು, ಇಲ್ಲಿನ ಜನರು ರಾಜಕೀಯವಾಗಿ ಅರಿವು ಹೊಂದಿದ್ದು, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತಾರೆ ಎಂದು ಹೇಳಿದರು.
ಪೆಟ್ರೋಲ್ ದರ ಜಗತ್ತಿನ ಎಲ್ಲೆಡೆ ಕಡಿಮೆ ಇದ್ದರೂ, ಭಾರತದಲ್ಲಿ ಮಾತ್ರ ಅಧಿಕವಾಗಿರುವ ಕಾರಣಗಳನ್ನು ಪ್ರಧಾನಿ ನರೇಂದ್ರ ಮೋದಿ ಹೇಳಬೇಕು.ಅದೇ ರೀತಿ, ಬ್ಯಾಂಕ್‌ಗಳನ್ನು ಲೂಟಿ ಮಾಡಿದ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಹಗರಣ ಬಗ್ಗೆಯೋ ಅವರು ಹೇಳಬೇಕು ಎಂದು ರಾಹುಲ್ ಸವಾಲು ಹಾಕಿದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಡಿ.ಕೆ.ಶಿವಕುಮಾರ್,ರೋಷನ್ ಬೇಗ್ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
‘ಸೂರ್ಯ, ಚಂದ್ರ ಹುಟ್ಟುವುದು ಎಷ್ಟು ಸತ್ಯವೊ, ಕರ್ನಾಟಕದಲ್ಲಿ ಕಾಂಗ್ರೆಸ್ ಬರುವುದು ಅಷ್ಷೇ ಸತ್ಯ.ರಾಜ್ಯ ಸರಕಾರದ ಜನಪ್ರೀಯ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಮತ್ತೊಮ್ಮೆ ನಮ್ಮನ್ನು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದೇವೆ’
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ, ಅಧ್ಯಕ್ಷ
‘ಕರ್ನಾಟಕದ ಜನರ ಎಲ್ಲ ಬೇಡಿಕೆಗಳನ್ನು ನಾವು ಈಡೇರಿಸಲು ಬದ್ಧವಾಗಿದ್ದು, ಮತ್ತೊಮ್ಮೆ ಕರ್ನಾಟಕದಲ್ಲಿ ಕಾಂಗ್ರೆಸ್ ಖಚಿತ’
-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ,
‘ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅನಂತ, ಅನಂತ ಸುಳ್ಳುಗಳನ್ನು ಹೇಳುತ್ತಾರೆ.ಇನ್ನು, ಪ್ರಧಾನಿ ಮೋದಿ ಇದಕ್ಕಿಂತ ಹೆಚ್ಚಿನ ಸುಳ್ಳು ಹೇಳುತ್ತಾರೆ. ಸತ್ಯದ ಬಗ್ಗೆ ಚರ್ಚೆ ನಡೆಸಲು ಮೋದಿ ಮುಂದಾಗಲಿ’
-ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್ ಮುಖಂಡ