ಚುನಾವಣೆ ಪ್ರಕ್ರಿಯೆಯಲ್ಲಿ ಮಂಗಳಮುಖಿಯರ ‘ಸೆಲೆಬ್ರಿಟಿ’ ಪಾತ್ರ

Update: 2018-04-09 06:21 GMT

ಮಂಗಳೂರು, ಎ.8: ರಾಜ್ಯ ವಿಧಾನ ಸಭೆಗೆ ಮೇ 12ರಂದು ನಡೆ ಯುವ ಚುನಾವಣೆಯಲ್ಲಿ ಶೇ.100 ಮತದಾನ ನಡೆಯಬೇಕು ಎಂಬ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ‘ಸ್ವೀಪ್’ (ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ) ಅಧಿಕಾರಿಗಳು ಮಂಗಳಮುಖಿಯರನ್ನೇ ‘ಸೆಲೆಬ್ರಿಟಿ’ಗಳಾಗಿ ಬಳಸಿಕೊಂಡಿದ್ದಾರೆ. ಅದಕ್ಕೆ ಪೂರಕ ಎಂಬಂತೆ ನಗರದ ವಿವಿಧ ಕಡೆ ‘ನಾವೂ ಮತ ಚಲಾ ಯಿಸುತ್ತೇವೆ... ನೀವು?’ ಎಂಬ ಒಕ್ಕಣೆಯುಳ್ಳ ಹೋರ್ಡಿಂಗ್ಸ್ ಅನ್ನು ಅಳವಡಿಸಿದ್ದಾರೆ. ಈಗಾಗಲೆ ‘ಸ್ವೀಪ್’ ರಕ್ತದಾನ, ಕವಿಗೋಷ್ಠಿ, ಜಲಥಾನ್, ಮಾನವ ಸರಪಳಿ ಇತ್ಯಾದಿ ಮೂಲಕ ಮತದಾರರನ್ನು ಮತಗಟ್ಟೆಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂಬುದೇ ಇದರ ಉದ್ದೇಶವಾಗಿದೆ. ಮತದಾನ ಪ್ರಕ್ರಿಯೆಯಿಂದ ದೂರ ಸರಿದರೆ ಶೇಕಡಾವಾರು ಮತದಾನದಲ್ಲಿ ಇಳಿಮುಖವಾಗಲಿದೆ. ಇದು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಇದನ್ನು ತಪ್ಪಿಸಲು ‘ಸ್ವೀಪ್’ ಮತ ದಾನ ಪ್ರಕ್ರಿಯೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊ ಳ್ಳಲು ವಿನೂತನ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಮಂಗಳಮುಖಿಯರನ್ನೂ ಸೆಲೆಬ್ರಿಟಿಗಳನ್ನಾಗಿ ಬಳಸಿದೆ.

ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದರೊಂದಿಗೆ ಸಮಾಜ ಅವರ ಬಗ್ಗೆ ತಾಳಿದ ನಿಲುವುಗಳನ್ನು ದೂರ ಮಾಡಲು ಕೂಡ ಈ ಪ್ರಕ್ರಿಯೆ ಸಹಾಯ ಮಾಡಲಿದೆ ಎಂಬ ಅಭಿಪ್ರಾಯವೂ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಮಂಗಳ ಮುಖಿಯರೂ ಕೂಡ ಮತದಾನ ತಮ್ಮ ಹಕ್ಕು ಎಂದು ಭಾವಿಸಿ ಕೊಂಡು ಹುಮ್ಮಸ್ಸಿನಿಂದ ಚುನಾವಣೆಯಲ್ಲಿ ಪಾಲ್ಗೊಳ್ಳುವಾಗ ತಾವು ಯಾಕೆ ದೂರ ಸರಿಯಬೇಕು ಎಂಬ ನಿಟ್ಟಿನಲ್ಲಿ ಸಾಮಾನ್ಯ ಮತದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡರೆ ಶೇ.100 ಮತದಾನದ ದಾಖಲೆಯನ್ನು ಸುಲಭವಾಗಿ ಸಾಧಿಸಬಹುದು ಎಂಬ ಲೆಕ್ಕಾಚಾರ ‘ಸ್ವೀಪ್’ನದ್ದಾಗಿದೆ.

ಈ ಮಧ್ಯೆ ಮಂಗಳಮುಖಿಯರು ಕೂಡ ತಮ್ಮನ್ನು ‘ಸೆಲೆಬ್ರಿಟಿ’ಗಳಾಗಿ ಬಳಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಮಂಗಳಮುಖಿಯರೊಬ್ಬರು ‘ನಮ್ಮನ್ನು ಸಮಾಜ ಗೌರವಿಸುವುದಕ್ಕೆ ಈ ಪ್ರಕ್ರಿಯೆ ಸಾಕ್ಷಿಯಾಗಿದೆ. ಆದರೆ, ನಮ್ಮನ್ನು ಕೇವಲ ಬಳಸಿ ಕೈ ಬಿಡಬಾರದು. ಆಗ ಮಾತ್ರ ನಮ್ಮ ಬದುಕನ್ನು ನಮಗೆ ಕಟ್ಟಲು ಸಾಧ್ಯ’ ಎಂದಿದ್ದಾರೆ.

‘ಸಮಾಜ ನಮ್ಮನ್ನು ಅನುಕಂಪದಿಂದ ನೋಡುವ ಕಾಲ ಸರಿಯ ನಮ್ಮ ಬೇಡಿಕೆಗಳನ್ನೂ ಈಡೇ ರಿಸಬೇಕು. ಮುಖ್ಯವಾಗಿ ಮಂಗಳೂರಿನಲ್ಲಿ ಮಂಗಳಮುಖಿಯರಿಗೆ ವಸತಿ ವ್ಯವಸ್ಥೆಯೊಂದಿಗೆ ಕಾಲನಿಯೊಂದನ್ನು ನಿರ್ಮಿಸಬೇಕಿದೆ. ಅದಕ್ಕೆ ಪೂರಕವಾಗಿ ನಮಗೆ ಭಿಕ್ಷಾಟನೆ ತಪ್ಪಬೇಕು. ಮೈ ಮುರಿದು ದುಡಿದು ಸಹಜ ಬದುಕು ಸಾಗಿಸಬೇಕು. ‘ನಮ್ಮವರು’ ಎಂದು ಸಮಾಜ ನಮ್ಮನ್ನು ಸ್ವೀಕರಿಸುವ ವಾತಾವರಣ ಸೃಷ್ಟಿಯಾಗಬೇಕು. ಸೆಲೆಬ್ರಿಟಿಗಳಾಗುವ ನಾವಿಂದು ಮುಖ್ಯವಾಹಿನಿಗೆ ಬರಬೇಕು. ಅದಕ್ಕೆ ಸಮಾಜದ ಸರ್ವರ ಸಹಕಾರ ಬೇಕಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮಂಗಳಮುಖಿಯರು ಒಂದೇ ಕಡೆ ನೆಲೆಸುವುದು ಅಪರೂಪ. ಹದಿಹರೆಯಕ್ಕೆ ಕಾಲಿಡುತ್ತಲೇ ಮನೆಯವರಿಂದ ದೂರ ಸರಿದು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ನೆಲೆಸುವ ಇವರು ಆಗಾಗ ಊರು ಬದಲಾಯಿಸುವುದು ಸಹಜವಾಗಿದೆ. ಹಾಗಾಗಿ ಮಂಗಳಮುಖಿಯರಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಶನ ಕಾರ್ಡ್ ಇತ್ಯಾದಿ ನೀಡಲು ಸಮಸ್ಯೆಯಾಗುತ್ತಿದೆ. ಇದನ್ನು ಮನಗಂಡಿರುವ ಮಂಗಳಮುಖಿಯರು ಇದೀಗ ಸಂಘ ಟಿತರಾಗಿ ವಸತಿ ವ್ಯವಸ್ಥೆಯ ಬೇಡಿಕೆಯಿಟ್ಟಿರುವುದು ಕೂಡ ಹೊಸ ಬೆಳವಣಿಗೆಯಾಗಿದೆ. ಹೀಗೆ ಒಂದೇ ಕಡೆ ನೆಲೆಸಿದರೆ ಆಧಾರ್ ಸಹಿತ ಎಲ್ಲಾ ಕಾರ್ಡ್‌ಗಳು, ಮತದಾನದ ಗುರುತಿನ ಚೀಟಿಯನ್ನು ಪಡೆದು ಸರಕಾರದ ವಿವಿಧ ಸೌಲಭ್ಯವನ್ನೂ ಪಡೆದುಕೊಳ್ಳಲು ಸಾಧ್ಯವಿದೆ.

ದ.ಕ. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮಂಗಳಮುಖಿಯರಿದ್ದಾರೆ. ಇವರನ್ನು ಲಿಂಗತ್ವ ಅಲ್ಪಸಂಖ್ಯಾತರು, ಲೈಂಗಿಕ ಅಲ್ಪ ಸಂಖ್ಯಾತರು, ವಿಶಿಷ್ಟ ಲೈಂಗಿಕ ಅಲ್ಪ ಸಂಖ್ಯಾತರು, ಹಿಜಡಾಗಳು, ನವ ಸಹಜ ಸಮು ದಾಯದವರು ಎಂದೆಲ್ಲಾ ಕರೆಯಲಾಗುತ್ತದೆ. ಇವ ರಲ್ಲಿ ದ.ಕ.ಜಿಲ್ಲೆಯ ಮೂಲವಲ್ಲದೆ ಬೇರೆ ಬೇರೆ ಕಡೆ ಯಿಂದಲೂ ಬಂದು ನೆಲೆಸಿದವರಿದ್ದಾರೆ. ಆ ಪೈಕಿ ಕಳೆದ 6 ತಿಂಗಳಿನಿಂದ ಒಂದೇ ಕಡೆ ನೆಲೆಸಿರುವ ಮತ್ತು ಮತದಾನಕ್ಕೆ ಅರ್ಹತೆ ಪಡೆದ 153 ಮಂಗಳಮುಖಿ ಯರನ್ನು ಗುರುತಿಸಲಾಗಿದೆ. ಅವರಿಗೆ ಮತದಾರರ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ನಡೆದಿದೆ.

ಸುಧಾಕರ, ಸ್ವೀಪ್ ಅಧಿಕಾರಿ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News