ಹುಷಾರ್.. ಆರೋಗ್ಯ ಜಾಹೀರಾತುಗಳು ದಾರಿತಪ್ಪಿಸುತ್ತಿವೆ!

Update: 2018-04-09 06:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.9: ಜನಸಾಮಾನ್ಯರಿಗೆ ತಪ್ಪುಮಾಹಿತಿ ನೀಡಿ ದಾರಿತಪ್ಪಿಸುವ ಜಾಹೀರಾತುಗಳ ಪೈಕಿ ಮೂರನೇ ಒಂದರಷ್ಟು ಜಾಹೀರಾತುಗಳು ಆರೋಗ್ಯ ವಲಯಕ್ಕೆ ಸಂಬಂಧಿಸಿದವುಗಳು ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯದ ದೂರು ವಿಭಾಗದಲ್ಲಿ ಇಂಥ ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ 6,820 ದೂರುಗಳು ದಾಖಲಾಗಿವೆ. ಈ ಪೈಕಿ ಗರಿಷ್ಠ ದೂರುಗಳು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದವು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

"ಬಹುತೇಕ ಆರೋಗ್ಯ ಕ್ಷೇತ್ರದ ಉತ್ಪನ್ನಗಳ ಬಗೆಗಿನ ಜಾಹೀರಾತುಗಳು ತಪ್ಪುಮಾಹಿತಿ ಒಳಗೊಂಡಿರುವಂಥವು. ಗಿಡಮೂಲಿಕೆ ಔಷಧಿಗಳು ಮಧುಮೇಹ, ಮೂತ್ರಪಿಂಡ ಕಲ್ಲು, ಅಲರ್ಜಿ ಮತ್ತಿತರ ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂಬಂಥ ಜಾಹೀರಾತುಗಳು" ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಂತೆಯೇ ಸೌಂದರ್ಯ ಸಾಧನಗಳು, ಉತ್ಪನ್ನದ ಪರಿಣಾಮಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡುತ್ತವೆ. ಕೇಶತೈಲ, ಸೌಂದರ್ಯ ಸಾಧನಗಳಲ್ಲಿ ಇಂಥ ವರ್ಣನೆ ಸಾಮಾನ್ಯ. ಕೆಲ ಕೇಶತೈಲಗಳಂತೂ ಬೊಕ್ಕತಲೆ ಸಮಸ್ಯೆ ನಿವಾರಿಸುತ್ತವೆ ಎಂಬ ಜಾಹೀರಾತು ನೀಡುತ್ತಿವೆ ಎಂದು ಹೇಳಿದ್ದಾರೆ.

ಆರೋಗ್ಯ ಕ್ಷೇತ್ರದ ಉತ್ಪನ್ನಗಳ ಬಗೆಗಿನ 2,070 ದೂರುಗಳ ಪೈಕಿ 133 ತಿರಸ್ಕೃತವಾಗಿವೆ. 799ನ್ನು ಬಗೆಹರಿಸಲಾಗಿದ್ದು, 445 ಪ್ರಕರಣಗಳ ಬಗ್ಗೆ ಭಾರತದ ಜಾಹೀರಾತು ಗುಣಮಟ್ಟ ಮಂಡಳಿಯಲ್ಲಿ ವಿಚಾರಣೆ ನಡೆಯುತ್ತಿದೆ. 693 ಪ್ರಕರಣಗಳನ್ನು ನಿಯಂತ್ರಣ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂದು ವಿವರಿಸಿದ್ದಾರೆ. ನಿಯಂತ್ರಣ ಸಂಸ್ಥೆಗಳ ನಿಷ್ಕಾಳಜಿಯೇ ಇಂಥ ಸುಳ್ಳು ಜಾಹೀರಾತುಗಳು ಹೆಚ್ಚಲು ಕಾರಣ ಎಂದು ಗ್ರಾಹಕ ಹಕ್ಕು ಪ್ರತಿಪಾದಕರು ಆಪಾದಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News