ಇಂದಿನ ಮಕ್ಕಳು ಮತ್ತು ಸ್ಮಾರ್ಟ್ ಫೋನ್...

Update: 2018-04-09 07:51 GMT

ಮೊದಲೆಲ್ಲಾ ಬೇಸಿಗೆ ರಜೆ ಬಂತೆಂದರೆ ಸಾಕು ಊರಿನ ಮಕ್ಕಳೆಲ್ಲಾ ಸೇರಿ ಶಾಲಾ ಮೈದಾನದಲ್ಲಿ ಅಥವಾ ಊರಿನ ಯಾವುದೇ ಮೈದಾನಗಳಲ್ಲಿ ಬಿಸಿಲು-ಮಳೆ ಎನ್ನದೆ ಆಟಗಳನ್ನು ಆಡುತ್ತಿದ್ದರು. ಆದರೆ ಈಗಿನ ಮಕ್ಕಳು ಟಿ.ವಿ ಮತ್ತು ಕಂಪ್ಯೂಟರ್ ಗೇಮ್ ಅದರಲ್ಲೂ ಅದಕ್ಕಿಂತ ಹೆಚ್ಚಾಗಿ ಮೊಬೈಲ್ ಫೋನ್ ಗಳಲ್ಲಿ ಮಗ್ನರಾಗುತ್ತಾರೆ.

ನಾವೆಲ್ಲಾ ಸಣ್ಣ ಪ್ರಾಯದಲ್ಲಿ ಶಾಲೆ ಬಿಟ್ಟು ಮನೆಗೆ ಬಂದ ಮೇಲೆ ಒಂದಿಷ್ಟು ಏನಾದರೂ ಹೊಟ್ಟೆಗೆ ಹಾಕಿ ಬ್ಯಾಟ್ ಹಿಡಿದು ಮೈದಾನ ಸೇರುತ್ತಿದ್ದೆವು. ಕತ್ತಲಾಗೋ ತನಕ ಮೈದಾನಲ್ಲಿ ಕ್ರಿಕೆಟ್, ಕಬಡ್ಡಿ, ಕುಟ್ಟಿ ದೊಣ್ಣೆ, ಲಗೋರಿ, ವಾಹನಗಳ ಟಯರುಗಳಲ್ಲಿ ಆಟ ಆಡೋದು ಹೀಗೆ ಸೂರ್ಯ ಮುಳುಗೋ ಹೊತ್ತಿಗೆ ಮನೆ ಕಡೆ ಮುಖ ಮಾಡುತ್ತಿದ್ದೆವು. ನಮ್ಮ ತಂದೆಯವರ ಕಾಲದಲ್ಲಿ ಶಾಲೆ ಬಿಟ್ಟು ಬಂದ ಮೇಲೆ ತೋಟಕ್ಕೆ ಹೋಗಿ ದನಗಳಿಗೆ ಹುಲ್ಲು ತಂದು ಹಾಕದಿದ್ದರೆ ಊಟವನ್ನೂ ನೀಡುತ್ತಿರಲಿಲ್ಲವಂತೆ.

ಆದರೆ ಇಂದಿನ ಕಾಲದ ಮಕ್ಕಳು ಶಾಲಾ ವಾಹನದಲ್ಲಿ ಶಾಲೆಗೇ ಹೋದರೆ ಮತ್ತೆ ಅದೇ ವಾಹದಲ್ಲಿ ಸಾಯಂಕಾಲ ಮನೆ ಸೇರುತ್ತಾರೆ. ಮನೆಗೆ ಬಂದು ಸ್ಮಾರ್ಟ್ ಫೋನ್ ನಲ್ಲಿ ಗೇಮ್ಸ್, ಚಾಟಿಂಗ್ಸ್, ಫೇಸ್ಬುಕ್ ಅಂತ ಮಗ್ನರಾಗುತ್ತಾರೆ. ಇಂದಿನ ಮಕ್ಕಳ ದೇಹಕ್ಕೆ ಬಿಸಿಲೇ ಬೀಳುವುದಿಲ್ಲ. ಮೊದಲೆಲ್ಲಾ ಹೆತ್ತವರು ಮಕ್ಕಳು ಮನೆಯ ಒಳಗೆ ಬರುವಂತೆ ಗದರಿಸುತ್ತಿದ್ದರೆ, ಇಂದು ಹೆತ್ತವರು ಮಕ್ಕಳು ಸ್ಮಾರ್ಟ್ ಫೋನ್ ಬಿಟ್ಟು ಮನೆಯ ಹೊರಗೆ ಹೋಗಲು ಗದರಿಸುವಂತಾಗಿದೆ.

ಇನ್ನೂ ಶಾಲಾ ಮಟ್ಟಿಲು ಹತ್ತದ ಮಕ್ಕಳು ಸ್ಮಾರ್ಟ್ ಫೋನ್‌ಗಳನ್ನು ಸ್ಮಾರ್ಟ್ ಆಗಿ ಬಳಸುತ್ತಾರೆ. ಇದು ಖುಷಿಯ ವಿಷಯವೇ. ಆದರೆ, ಆತಂಕ ಹುಟ್ಟಿಸುವ ಸಂಗತಿ ಇನ್ನೊಂದಿದೆ. ಸ್ಮಾರ್ಟ್ ಫೋನ್‌ಗಳ ಜಗತ್ತನ್ನು ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಇದೇ ಮಕ್ಕಳು ಸಾಕಷ್ಟು ವಿಷಯದಲ್ಲಿ ಡಲ್ ಆಗಿಬಿಡುತ್ತಾರೆ. ಅದರಲ್ಲೂ ಭಾವನಾತ್ಮಕ ವಿಷಯಗಳನ್ನು ಅರ್ಥ ಮಾಡಿಕೊಳ್ಳಲಾಗದೆ ಬರಿದೆ ಯಂತ್ರಗಳಂತಾಗಿ ಬಿಡುತ್ತಾರೆ.

ಸ್ಮಾರ್ಟ್ ಫೋನ್‌ಗಳು ಮಾತ್ರವಲ್ಲ ಟೀವಿ, ಟ್ಯಾಬ್ಲೆಟ್‌ಗಳು ಸಾಮಾಜಿಕ ಸಂವಹನದ ಕುಶಲತೆಯನ್ನು ನಾಶ ಮಾಡಿ ಭಾವನೆಗಳನ್ನು ಬರಿದು ಮಾಡುತ್ತವೆ ಎನ್ನುವುದು ಇತ್ತೀಚೆಗೆ ಸಂಶೋಧನೆಯೊಂದರಲ್ಲಿ ಕಂಡುಕೊಂಡ ಸತ್ಯ. ಮಕ್ಕಳು ಇತರರ ಜತೆ ಬೆರೆಯದೆ ಕೇವಲ ಡಿಜಿಟಲ್ ಲೋಕದಲ್ಲಿ ಕಳೆದುಹೋಗುವುದೇ ಇದಕ್ಕೆ ಕಾರಣ ಎನ್ನುತ್ತದೆ ಸಂಶೋಧನೆ. ಮಕ್ಕಳು ಡಿಜಿಟಲ್ ಪ್ರಪಂಚದಲ್ಲಿ ಮುಳುಗಿ ಇನ್ನೊಬ್ಬರ ಭಾವನೆಗಳ ಅರಿಯುವ ಸೂಕ್ಷ್ಮ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ. ಸ್ಕ್ರೀನ್ ಜತೆಗಿನ ನೇರ ಮುಖಾಮುಖಿ ಸಾಮಾಜಿಕ ಸಂವಹನದ ಎಲ್ಲ ಸಾಧ್ಯತೆಗಳನ್ನು ಮುಚ್ಚಿಹಾಕುತ್ತದೆ. ಪರಸ್ಪರ ನೇರ ಮಾತು ಮತ್ತು ಮುಖ ಕೊಟ್ಟು ಮಾತನಾಡುವ ಶಕ್ತಿಯನ್ನೂ ಉಡುಗಿಸುತ್ತದೆ. ಮಕ್ಕಳು ಭಾವನಾತ್ಮಕವಾಗಿ ಡಲ್ ಆಗಿಬಿಡುತ್ತಾರೆ.

ಸ್ಮಾರ್ಟ್ ಫೋನ್ ಆಪರೇಟ್ ಮಾಡುವ ನಿಮ್ಮ ಮಗು ವೇಗವಾಗಿ ಬೆಳೆಯುತ್ತಿದೆ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಮಗುವಿನ ಆರೋಗ್ಯದ ಮೇಲೆ ಸ್ಮಾರ್ಟ್ ಫೋನ್ ಪ್ರತಿಕೂಲ ಪರಿಣಾಮ ಬೀರುತ್ತದೆ. ಅತಿ ಹೆಚ್ಚು ಟಿವಿ ನೋಡುವ ಮಕ್ಕಳು ಬೊಜ್ಜಿನಿಂದ ಬಳಲುತ್ತಾರೆ. ಹಾಗೆ ಸ್ಮಾರ್ಟ್ ಫೋನ್ ಬಳಸುವ ಮಕ್ಕಳಿಗೂ ಈ ಸಮಸ್ಯೆ ಎದುರಾಗಲಿದೆ. ಹೊರಾಂಗಣ ಆಟ ಬಿಟ್ಟು ಮಕ್ಕಳು ಕುಳಿತಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಬಳಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಲಿವೆ.

ಸ್ಮಾರ್ಟ್ ಫೋನ್ ಬಳಕೆಯಿಂದ ವಿದ್ಯಾರ್ಥಿಗಳಿಗೆ ಕೆಲವೊಂದು ಉಪಯೋಗಗಳಿವೆ. ಅವುಗಳನ್ನು ಎಷ್ಟು ಬೇಕೋ ಅಷ್ಟೇ ಬಳಕೆ ಮಾಡಿ ಅದರ ಸದುಪಯೋಗ ಪಡಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಬಳಸಿ ಗೂಗಲ್ ನಲ್ಲಿ ತಮಗೆ ಬೇಕಾದ ಪ್ರಾಜೆಕ್ಟ್ ಗಳ ವಿವರಗಳನ್ನು, ವೈಯಕ್ತಿಕ ವಿಕಸನದ ಬಗ್ಗೆ ಬೇಕಾದ ಮಾಹಿತಿಗಳನ್ನು, ಶಾಲಾ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಷಣ, ಪ್ರಬಂಧ ಮುಂತಾದವುಗಳ ಪೂರಕ ಮಾಹಿತಿಗಳನ್ನ ಸ್ಮಾರ್ಟ್ ಫೋನ್ ಮೂಲಕ ಪಡೆದುಕೊಳ್ಳಬಹುದು.

ನನ್ನ  ಸಹೋದರಿಯ ಮಗ ಮೊಹಮ್ಮದ್ ಕೈಸರ್ ಮೊದಲನೇ ಇಂಜಿನಿಯರ್ ವಿದ್ಯಾರ್ಥಿ. ಸ್ಮಾರ್ಟ್ ಫೋನ್ ಬಳಸಿ ಅದರಲ್ಲಿರುವ ಆ್ಯಪ್ ಮೂಲಕ ಸಾಮಾನ್ಯ ಜ್ಞಾನ (general knowledge) ಪರೀಕ್ಷೆಯಲ್ಲಿ ಗೆದ್ದು ಸುಮಾರು 69,000 ಮೌಲ್ಯದ ಐಫೋನ್ ಬಹುಮಾನವನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಇದು ಸ್ಮಾರ್ಟ್ ಇರುವವರಿಗೆ ಸ್ಮಾರ್ಟ್ ಫೋನ್ ಬಳಕೆಯ ಉಪಯೋಗದ ಬಗ್ಗೆ ತಿಳಿ ಹೇಳುತ್ತದೆ.

ಮಕ್ಕಳೊಂದಿಗೆ ಮುಖಾಮುಖಿ ಸಂವಹನ ಮಾಡದೆ ಹೋದರೆ ಸಾಮಾಜಿಕ ಬದುಕಿನ ಅತ್ಯಂತ ಪ್ರಮುಖಾಂಶವಾದ ಸಾಮಾಜಿಕ ಕೌಶಲ್ಯವನ್ನು ಕಳೆದುಕೊಳ್ಳುವುದೇ ಇಲ್ಲಿರುವ ಕಾರಣ ಎಂದು ತಜ್ಞರು ಹೇಳುತ್ತಾರೆ. ಮೊಬೈಲ್, ಟಿವಿ.. ಏನೇ ಇರಲಿ. ಅದರ ಬಳಕೆಯೂ ಬೇಕು. ಆದರೆ, ಅದರಲ್ಲೇ ಕಳೆದುಹೋಗಿ ಸಾಮಾಜಿಕ ಸಂವಹನವನ್ನು ಕಳೆದುಕೊಳ್ಳುವುದು ಮಕ್ಕಳ ಆರೋಗ್ಯ, ವೈಯಕ್ತಿಕ ವಿಕಸನದ ಜೊತೆಗೆ ಆರೋಗ್ಯಕರ ಸಮಾಜಕ್ಕೂ ಮಾರಕ ಅನ್ನೋ ಸತ್ಯವನ್ನು ಮಕ್ಕಳು ಮತ್ತು ಅದಕ್ಕಿಂತಲೂ ಮುಖ್ಯವಾಗಿ ಹೆತ್ತವರು ಅರಿಯಬೇಕಾಗಿದೆ.

Writer - ಮನ್ಸೂರ್ ಅಹ್ಮದ್ ಸಾಮಣಿಗೆ

contributor

Editor - ಮನ್ಸೂರ್ ಅಹ್ಮದ್ ಸಾಮಣಿಗೆ

contributor

Similar News