×
Ad

ಟಿಕೆಟ್ ಸಿಗದವರ ಅಸಮಾಧಾನ ಸಹಜ: ಜಗದೀಶ್ ಶೆಟ್ಟರ್

Update: 2018-04-09 19:07 IST

ಹುಬ್ಬಳ್ಳಿ, ಎ. 9: ಟಿಕೆಟ್ ಸಿಗದವರ ಅಸಮಾಧಾನ ಸಹಜ. ಮೊದಲ ಪಟ್ಟಿಯಲ್ಲಿ ಟಿಕೆಟ್ ದೊರೆಯದವರಿಗೆ ಎರಡನೆ ಪಟ್ಟಿ ಬಿಡುಗಡೆಯ ಮೂಲಕ ಸಮಾಧಾನ ಪಡಿಸಲು ಪ್ರಯತ್ನಿಸಲಾಗುವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಅಭ್ಯರ್ಥಿಗಳ ಎರಡನೆ ಪಟ್ಟಿ ಬಿಡುಗಡೆ ಮಾಡಲಿದ್ದು, ಬಿಜೆಪಿ ಮಿಷನ್ 150 ಗುರು ತಲುಪಲಿದೆ ಎಂದರು.

ಜ್ಯೋತಿಷಿ ಆಗಿದ್ದು ಹೇಗೆ?: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಅವರು ಯಾವಾಗ ಜ್ಯೋತಿಷಿಯಾದರು ಗೊತ್ತಿಲ್ಲ. ಬಿಜೆಪಿ ಭವಿಷ್ಯ ಹೇಳುವ ಸಿಎಂ ಭವಿಷ್ಯವೇ ಅತಂತ್ರವಾಗಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಮೈಸೂರು ಚಾಮುಂಡೇಶ್ವರಿ, ವರುಣಾ, ಬಾದಾಮಿ, ಗಂಗಾವತಿ ಹೀಗೆ ನಾನಾ ಕ್ಷೇತ್ರಗಳನ್ನು ಹುಡುಕಿಕೊಂಡು ಓಡಾಡುತ್ತಿದ್ದಾರೆ. ಎಲ್ಲಿಯೂ ಅವರಿಗೆ ಗೆಲ್ಲುವ ಭರವಸೆ ಮೂಡುತ್ತಿಲ್ಲ. ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ ಎಂದು ಶೆಟ್ಟರ್ ಭವಿಷ್ಯ ನುಡಿದರು.

ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಪ್ರವಾಸ ಮಾಡಿದ ಬಳಿಕ ಬಿಜೆಪಿ ಶಕ್ತಿ ಮತ್ತಷ್ಟು ವೃದ್ಧಿಸಲಿದೆ. ಜೆಡಿಎಸ್, ಕಾಂಗ್ರೆಸ್ಸಿನ ‘ಬಿ’ ಟೀಂ. ಅದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉಲ್ಟಾ ಹೇಳಿದ್ದಾರೆ. ಸದನದಲ್ಲಿ ಜೆಡಿಎಸ್ ಎಂದಿಗೂ ಕಾಂಗ್ರೆಸ್ ವಿರುದ್ಧ ಮಾತನಾಡಿಲ್ಲ ಎಂದು ಶೆಟ್ಟರ್ ದೂರಿದರು

‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮದ್ಯ ಮಾರಾಟಗಾರನಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಬಿಜೆಪಿ ನೈತಿಕತೆ ಮರೆತಿದೆ. ಮದ್ಯ ಮುಕ್ತ ಆಳಂದಕ್ಕಾಗಿ ನಾನು ಹೋರಾಟ ಮಾಡಿದ್ದು, ಅಬಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದೇನೆ. ಬಿಜೆಪಿ ನಾಯಕರು ನನಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದರು. ಆದರೆ, ಇದೀಗ ಮದ್ಯ ಮಾರಾಟಗಾರ ಸುಭಾಷ ಗುತ್ತೇದಾರ್‌ಗೆ ಟಿಕೆಟ್ ನೀಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’
-ಚಂದ್ರಶೇಖರ ಹೀರೇಮಠ ಆಳಂದ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News