×
Ad

ದೇಶ ಹಾಗೂ ಸಮುದಾಯ ಕದಡಿದ ನೀರಿನಂತಾಗಿದೆ: ಚಿಂತಕ ಕೋಟಿಗಾನಹಳ್ಳಿ ರಾಮಯ್ಯ

Update: 2018-04-09 19:10 IST

ಬೆಂಗಳೂರು, ಎ.9: ದೇಶ ಹಾಗೂ ಸಮುದಾಯ ಕದಡಿದ ನೀರಿನಂತಾಗಿದೆ. ಇದಕ್ಕೆ ಇಂದಿನ ಜಾಗತೀಕರಣ, ಧಾರ್ಮಿಕ ಸಂರಚನೆ ಹಾಗೂ ರಾಜಕೀಯ ಕಾರಣಗಳು ಇರಬಹುದು ಎಂದು ಸಂಸ್ಕೃತಿ ಚಿಂತಕ ಕೆಟಿಗಾನಹಳ್ಳಿ ರಾಮಯ್ಯ ಹೇಳಿದರು.

ನ್ಯಾಷನಲ್ ಕಾಲೇಜಿನಲ್ಲಿ ಸೋಮವಾರ ನಡೆದ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅಸ್ಮಿತೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಶ ಹಾಗೂ ಸಮುದಾಯ ಕದಡಿದ ನೀರಿನಂತಾಗಿದೆ. ಇದಕ್ಕೆ ಇಂದಿನ ಜಾಗತೀಕರಣ, ಧಾರ್ಮಿಕ ಸಂರಚನೆ ಹಾಗೂ ರಾಜಕೀಯ ಕಾರಣಗಳು ಇರಬಹುದು. ನಮ್ಮದು ಗುರುತು ರಾಜಕಾರಣದ ಅಕ್ಷರಸ್ಥ ತಲೆಮಾರು. ಈ ದಿನಗಳಲ್ಲಿ ಅಸ್ಪಶ್ಯೇತರ ನೆಲೆಗಳು ಬೀಜಸತ್ವ ಕಳೆದುಕೊಂಡಿವೆ ಎಂದು ಹೇಳಿದರು.

ಪದಗಳ ವ್ಯತ್ಯಾಸವನ್ನು ಜಾಣ್ಮೆಯಿಂದ ರಾಜಕೀಯಕ್ಕೆ ಬಳಸಲಾಗುತ್ತಿದೆ. ಆದಿವಾಸಿ ಎನ್ನುವ ಪದದಲ್ಲಿ ಇರುವ ತೂಕ ವನವಾಸಿ ಎಂದು ಹೇಳುವುದರಲ್ಲಿ ಇಲ್ಲ. ಆರ್‌ಎಸ್‌ಎಸ್ ವಿಚಾರಧಾರೆಯಲ್ಲಿ ವನವಾಸಿ ಎಂಬ ಪದ ಹುಟ್ಟಿಕೊಂಡಿದೆ. ಕಾಡಿನಲ್ಲಿ ವಾಸಿಸುವುದಕ್ಕೂ ಕಾಡಿನಲ್ಲಿಯೇ ಅನಾದಿ ಕಾಲದಿಂದ ಇರುವುದಕ್ಕೂ ವ್ಯತ್ಯಾಸ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಇದರಂತೆಯೇ ಎಡೆಸ್ನಾನ ಹಾಗೂ ಮಡೆಸ್ನಾನ ಪದಗಳ ಬಳಕೆಯನ್ನೂ ನಾವು ಗಮನಿಸಬಹುದು. ಎರಡೂ ಪದಗಳಲ್ಲಿ ತಾತ್ವಿಕ ಹಾಗೂ ರಾಜಕೀಯ ಬದಲಾವಣೆಗಳು ಇವೆ. ಶೈಕ್ಷಣಿಕ ಶಿಸ್ತುಗಳಲ್ಲಿ ಈ ರೀತಿಯ ಆಳವಾದ ವಿಚಾರಧಾರೆಗಳನ್ನು ಕಲಿಸುತ್ತಿಲ್ಲ. ವಿದ್ಯಾರ್ಥಿಗಳು ನಿಂತ ನೀರಂತೆ ಇರುವ ಪಠ್ಯಗಳಿಂದ ಹನುಮಂತನಂತೆ ದಾಟಿ ಆಚೆ ಬರಬೇಕು. ಇಲ್ಲದಿದ್ದರೆ ರಂದ್ರವನ್ನಾದರೂ ಕೊರೆಯಬೇಕು ಎಂದು ಹೇಳಿದರು.

ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಜಿ.ಡಿ ಚಿತ್ತಣ್ಣ, ಕರ್ನಾಟಕದಲ್ಲಿ 179ಕ್ಕೂ ಹೆಚ್ಚು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಭಾಷೆ ನಶಿಸಿದರೆ ಅದರೊಂದಿಗೆ ಆ ಜನಾಂಗದ ಸಂಸ್ಕೃತಿ ಕೂಡ ನಾಶವಾಗುತ್ತದೆ. ಹೀಗಾಗಿ, ಭಾಷೆ ಸಂಸ್ಕೃತಿ ಉಳಿಸುವಲ್ಲಿ ಯುವಕರು ಚಿಂತಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಕೊರಗ ಭಾಷೆ ನಶಿಸುವ ಹಂತದಲ್ಲಿದೆ. ಯುವ ಜನರು ಈ ರೀತಿಯ ಚಿಂತನೆಗಳನ್ನು ತಲೆಗೆ ಹಚ್ಚಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ವಿಚಾರ ಸಂಕಿರಣದಲ್ಲಿ ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷರಾದ ಬಂಜಗೆರೆ ಜಯಪ್ರಕಾಶ್ ಅವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News