2 ಕೋಟಿ ರೂ.ಗೆ ಟಿಕೆಟ್ ಮಾರಾಟ: ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪ

Update: 2018-04-09 14:32 GMT

ಬೆಂಗಳೂರು, ಎ.9: ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಉದ್ಯಮಿ ಉದಯ ಗರುಡಾಚಾರ್ ಅವರಿಗೆ ಟಿಕೆಟ್ ಪ್ರಕಟಿಸಿದ ಬೆನ್ನಲ್ಲೇ, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಬರೋಬ್ಬರಿ 2 ಕೋಟಿ ರೂ.ಗಳಿಗೆ ಟಿಕೆಟ್ ಮಾರಾಟ ಮಾಡಲಾಗಿದೆ ಎಂದು ದೂರಿದ್ದಾರೆ.

ಸೋಮವಾರ ನಗರದ ಕೆಆರ್ ರಸ್ತೆಯ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮಿ ಆಗಿರುವ ಉದಯ ಗರುಡಾಚಾರ್ ಅವರು ಪಕ್ಷಕ್ಕೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಅಲ್ಲದೆ, ಹಾಲಿ ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಅವರಿಗೆ ಅನುಕೂಲ ಮಾಡಲು 2 ಕೋಟಿ ರೂ. ಹಣ ಪಡೆಯಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಹಲವು ದಿನಗಳ ಹಿಂದೆಯೇ ಫೇಸ್‌ಬುಕ್‌ನಲ್ಲಿ ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕರ್ತರು ಬಿಜೆಪಿ ಟಿಕೆಟ್ ಮಾರಾಟವಾಗಿದೆ ಎಂದಿದ್ದರು. 8 ದಿನಗಳ ಹಿಂದೆಯೇ ಉದಯ್ ಗರುಡಾಚಾರ್‌ಗೆ ಟಿಕೆಟ್ ಖಚಿತವಾಗಿರುವ ಕುರಿತು ವಿಷಯ ಹೊರಬಂದಿರುವುದು ಹೇಗೆ ಎಂದು ಪ್ರಶ್ನಿಸಿದರು.

ಸಚಿವ ಕಾರಣ: ಅಕ್ರಮಗಳ ವಿರುದ್ಧ ಹೋರಾಟ ನನ್ನ ಮೊದಲ ಆದ್ಯತೆಯಾಗಿದ್ದು, ಹಲವು ಅಕ್ರಮ ಬಯಲಿಗೆಳೆದಿದ್ದೇನೆ. ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಶಾಸಕ ಆರ್.ಅಶೋಕ್ ನೇರ ಹೊಣೆಗಾರರು ಆಗಲಿದ್ದಾರೆ ಎಂದು ಆಪಾದಿಸಿದರು.

2018ರ ಚುನಾವಣೆಯಲ್ಲಿ ಚಿಕ್ಕಪೇಟೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ನಮ್ಮ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯ ಆಯ್ಕೆಗಾಗಿ ನಡೆಸಿದ ಸರ್ವೆಯಲ್ಲಿಯೂ ನನಗೆ ಮತದಾರರು ಒಲವು ತೋರಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಸರ್ವೆಯಲ್ಲೂ ಪಕ್ಷದ ಎಲ್ಲ ವರಿಷ್ಠರೂ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಎಂದು ಹೇಳಿದರು.

ಉದಯ್ ಗರುಡಾಚಾರ್ ಕಳೆದ ಬಾರಿ ಸೋತ ನಂತರ ಇದುವರೆಗೂ ಚಿಕ್ಕಪೇಟೆಗೆ ಕಾಲಿಟ್ಟಿಲ್ಲ. ಸಚಿವ ಅನಂತ್ ಕುಮಾರ್ ಭ್ರಷ್ಟಾಚಾರ ಹೊತ್ತಿರುವ ಉದ್ಯಮಿಗೆ ಸಾಥ್ ನೀಡಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ ಎಂದರು.

ಅನಂತ್ ಕುಮಾರ್‌ಗೆ ಬುದ್ಧಿವಂತ ಹೋರಾಟಗಾರರು ಬೇಕಾಗಿಲ್ಲ. ಹಾಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಪಕ್ಷ ಬಿಡಬೇಕಾ ಅಥವಾ ಇರಬೇಕಾ ಅನ್ನುವ ತೀರ್ಮಾನ ಇಂದು ನನ್ನ ಅಭಿಮಾನಿಗಳ ಜೊತೆ ಸಭೆ ಮಾಡಿ ತೀರ್ಮಾನಿಸುತ್ತೇನೆ. ರಾಜ್ಯಾಧ್ಯಾಕ್ಷರ ಜೊತೆ ಮಾತನಾಡಬೇಕಿದೆ ಎಂದು ರಮೇಶ್ ಹೇಳಿದರು.

ಅಶೋಕ್ ಅವರು ನನ್ನ ಹೋರಾಟ, ಸಂಘಟನೆ, ಅಭಿವೃದ್ಧಿಯನ್ನು ಕಂಡವರು. ಅವರು ನನಗೆ ಸಹಕಾರ ನೀಡಬೇಕಿತ್ತು. ಇಂದು ಸಂಜೆಯೊಳಗೆ ನನಗೆ ಆಗಿರುವ ಅನ್ಯಾಯ ಸರಿಪಡಿಸುವ ಆಕಾಂಕ್ಷೆ ಇದೆ ಎಂದ ಅವರು, ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News