ಕರ್ನಾಟಕದಲ್ಲಿರುವ ತೆಲುಗು ಪ್ರಜೆಗಳೇ ಬಿಜೆಪಿಗೆ ಮತ ಹಾಕಬೇಡಿ: ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ

Update: 2018-04-09 14:42 GMT

ಬೆಂಗಳೂರು, ಎ. 9: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಏರತೊಡಗಿದೆ. ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆಗೆ ರಾಜಕೀಯ ಪಕ್ಷಗಳು ಕಸರತ್ತು ನಡೆಸಿರುವ ಬೆನ್ನಲ್ಲೆ ‘ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಡಿ’ ಎಂದು ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ ಕರೆ ನೀಡಿದ್ದಾರೆ.

ಸೋಮವಾರ ಇಲ್ಲಿನ ವೈಟ್‌ಫೀಲ್ಡ್‌ನಲ್ಲಿ ಗೆಳೆಯರೊಬ್ಬರು ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶಕ್ಕೆ ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಹೀಗಾಗಿ ಕರ್ನಾಟಕದಲ್ಲಿ ನೆಲೆಸಿರುವ ತೆಲುಗು ಭಾಷಿಕ ಪ್ರಜೆಗಳು ಬಿಜೆಪಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ ಆಂಧ್ರದ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಅನುದಾನ, ಕಡಪ ಸ್ಟೀಲ್ ಬ್ರಿಡ್ಜ್, ವೈಜಾಕ್ ರೈಲ್ವೆ ಜೋನ್ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ನೆರವೇರಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ವಾಗ್ದಾನ ನೀಡಿದ್ದರು. ಆದರೆ, ಅವರು ನೀಡಿದ್ದ ಯಾವೊಂದು ಭರವಸೆ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಆಂಧ್ರ ಪ್ರದೇಶಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಕಾರಣ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಎನ್‌ಡಿಎ ಒಕ್ಕೂಟದಿಂದ ಹೊರ ಬಂದಿದೆ. ಬಿಜೆಪಿ ಪಕ್ಷವನ್ನು ನಂಬಿ ಮೋಸ ಹೋದಂತೆ ಯಾರೂ ಮೋಸ ಹೋಗಬಾರದು ಎಂದು ಅವರು ಟೀಕಿಸಿದರು.

‘ಬಿಜೆಪಿಗೆ ಮತ ನೀಡಬೇಡಿ ಎಂದು ಹೇಳೋದಕ್ಕೆ ಅವರು ಯಾರು? ಯಾರೋ ಬಂದು ನಾನ್‌ಸೆನ್ಸ್ ರೀತಿ ಮಾತನಾಡುವುದು ಸರಿಯಲ್ಲ. ರಾಜ್ಯದ ಜನತೆ ಇದಕ್ಕೆ ಬೆಂಬಲ ನೀಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ’
-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News