ಬೆಂಗಳೂರು: ಕೇಂದ್ರದ ದಲಿತ ವಿರೋಧಿ ನೀತಿ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

Update: 2018-04-09 15:40 GMT

ಬೆಂಗಳೂರು, ಎ. 9: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ(ಎಸ್ಸಿ-ಎಸ್ಟಿ)ದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ನಿಷ್ಕ್ರಿಯಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ಇಲ್ಲಿನ ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಏರ್ಪಡಿಸಿದ್ದ ಪ್ರತಿಭಟನೆ ನೇತೃತ್ವ ವಹಿಸಿದ್ದ ಒಕ್ಕೂಟದ ಸಂಚಾಲಕ ಶ್ರೀಧರ ಕಲಿವೀರ ಮಾತನಾಡಿ, ಕೇಂದ್ರ ಸರಕಾರದ ವಿರುದ್ಧ ಶೀಘ್ರದಲ್ಲೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎಚ್ಚರಿಕೆ ಸಮಾವೇಶವನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುಪ್ರೀಂ ಮತ್ತು ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳಲ್ಲಿ ಪರಿಶಿಷ್ಟರು ಮತ್ತು ಹಿಂ.ವರ್ಗದವರಿಗೆ ಮೀಸಲಾತಿ ಕಲ್ಪಿಸಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಊರ್ಜಿತಗೊಳಿಸಿ, ದಲಿತರಿಗೆ ರಕ್ಷಣೆ ಕಲ್ಪಿಸಲು ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕರ್ತವ್ಯ ಲೋಪವೆಸಗಿದ ಕೇಂದ್ರ ಕಾನೂನು ಇಲಾಖೆ ಕಾರ್ಯದರ್ಶಿ ಮತ್ತು ಸರಕಾರಿ ವಕೀಲರನ್ನು ಕೂಡಲೇ ಅಮಾನತು ಮಾಡಬೇಕು. ಅಲ್ಲದೆ, ದಲಿತ ವಿರೋಧಿ ಕೇಂದ್ರ ಕಾನೂನು ಸಚಿವ ಹಾಗೂ ಪ್ರಧಾನಿಯವರನ್ನು ವಜಾ ಮಾಡಬೇಕು. ಪುನರ್ ಪರಿಶೀಲನಾ ಅರ್ಜಿ ಪರ ವಕಾವತ್ತು ವಹಿಸಲು ಸಾಮಾಜಿಕ ನ್ಯಾಯದಲ್ಲಿ ಪರಿಣಿತ ಮತ್ತು ಬದ್ಧತೆಯುಳ್ಳ ವಕೀಲರನ್ನು ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.

ಭಾರತ್ ಬಂದ್ ವೇಳೆ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರಕಾರ ತಲಾ 1ಕೋಟಿ ರೂ.ಪರಿಹಾರ ನೀಡಬೇಕು. ಹಿಂಸೆ ಮತ್ತು ಗಲಭೆಗೆ ಕಾರಣರಾದ ಸಮಾಜ ವಿರೋಧಿ ಶಕ್ತಿಗಳಿಗೆ ಶಿಕ್ಷೆ ವಿಧಿಸಬೇಕು. ಜತೆಗೆ ಪರಿಶಿಷ್ಟರ ಭಡ್ತಿ ಮೀಸಲಾತಿ ಸಂರಕ್ಷಣೆಗೆ ಕೇಂದ್ರ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ವಿವಿಧ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ದಲಿತ ಮುಖಂಡರಾದ ಅಣ್ಣಯ್ಯ, ಎಂ.ಜಯಣ್ಣ, ಚನ್ನಕೃಷ್ಣಪ್ಪ, ಎಂ. ಸೋಮಶೇಖರ್, ಎಂ.ಗುರುಮೂರ್ತಿ, ಮುನಿಆಂಜಿನಪ್ಪ, ಮರಿಯಪ್ಪ ಸೆೀರಿ ಹಲವು ನಾಯಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News