×
Ad

ಕೋಮುವಾದಿಗಳ ಸರ್ವಾಧಿಕಾರಕ್ಕೆ ಕಡಿವಾಣ ಹಾಕಬೇಕು: ಪ್ರಕಾಶ್ ರೈ

Update: 2018-04-09 21:27 IST

ಬೆಂಗಳೂರು, ಎ.9: ಕೋಮುವಾದಿಗಳು ಸರ್ವಾಧಿಕಾರಿಗಳಾಗುತ್ತೇವೆ ಎಂದು ಓಡಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ಮೂಲಕ ಭಾರತವನ್ನು ಸೌಹಾರ್ದಯುತ, ಪ್ರೀತಿಯುತ ದೇಶವನ್ನಾಗಿ ಮಾಡಬೇಕು ಎಂದು ಚಿತ್ರನಟ ಹೋರಾಟಗಾರ ಪ್ರಕಾಶ್ ರೈ ತಿಳಿಸಿದ್ದಾರೆ.

ಸೋಮವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಿರಿಯ ಸ್ವಾತಂತ್ರ ಸೇನಾನಿ ಎಚ್.ಎಸ್. ದೊರೆಸ್ವಾಮಿ ಜನ್ಮ ಶತಾಬ್ದಿ ಆಚರಣಾ ಸಮಿತಿ ಆಯೋಜಿಸಿದ್ದ ’ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊರೆಸ್ವಾಮಿಯವರು ಸ್ವಾತಂತ್ರಕ್ಕಾಗಿ ಹೋರಾಡಿದವರು. ಅಲ್ಲದೆ, ಸ್ವಾಂತಂತ್ರಾನಂತರದ ರಾಜಕೀಯ ಮೇಲಾಟಗಳ ವಿರುದ್ಧವೂ ಹೋರಾಟ ನಡೆಸಿದವರು. ಜನರ ಪರವಾಗಿ ನಿರಂತರ ಹೋರಾಟ ನಡೆಸುತ್ತಾ ಬಂದ ಅವರು ಒಂದು ರೀತಿಯಲ್ಲಿ ಮುಳ್ಳಿನ ತೋಟದ ಕನಸುಗಾರನಂತೆ ಕಾಣುತ್ತಾರೆ. ಅವರ ಕನಸನ್ನು ನನಸು ಮಾಡಿ, ಪ್ರೀತಿಸುವ ದಿನವನ್ನಾಗಿ ಮಾಡಲು ಕೋಮುವಾದಿ ಸರ್ವಾಧಿಕಾರಕ್ಕೆ ಕಡಿವಾಣ ಹಾಕಿ, ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ನಾನು ದೊರೆಸ್ವಾಮಿಯವರೊಂದಿಗೆ ಒಡನಾಟ ಮಾಡಿಲ್ಲ. ಆದರೆ, ಅವರಿಂದ ಸ್ಫೂರ್ತಿಗೊಂಡ ಏಕಲವ್ಯ. ಅವರು ಹೇಗಿರಬೇಕೆಂದು ಹೇಳದೆ ಬದುಕಿ ತೋರಿಸಿದವರು. ಇಂದು ಮೋಸ, ತಪ್ಪುಗಳನ್ನು ಮಾಡುವವರು ಬದುಕುತ್ತಿದ್ದಾರೆ. ಆದರೆ, ಸತ್ಯವಂತರು ಬದುಕು ನಡೆಸಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಾಲಘಟ್ಟದಲ್ಲೂ ತಮ್ಮ ಹೋರಾಟ ಮುಂದುವರೆಸಿಕೊಂಡು ಹೋಗುತ್ತಾ ಇತರರಿಗೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.

ಬಂಡೀಪುರಕ್ಕೆ ಹೋಗಿದ್ದಾಗ ದೊಡ್ಡ ಸಂಪಿಗೆ ಮರ ನೋಡಿದ್ದೆ. ಆ ಮರ ತನ್ನ ಬದುಕಿನಲ್ಲಿ ಎಷ್ಟೆಲ್ಲಾ ವಸಂತ, ಮಳೆಯನ್ನು ನೋಡಿದೆ. ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿದೆ ಎಂಬ ಯೋಚನಾ ಲಹರಿಗೆ ಜಾರಿದ್ದೆ. ಮರದ ಕೆಳಗೆ ಹೋದರೆ ತಾಯಿಯ ಮಡಿಲಿನಂತಹ ಸಾಂತ್ವನ ಸಿಗುತ್ತದೆ. ನಂಬಿಕೆ, ವಿಶ್ವಾಸ ಸಿಗುತ್ತದೆ. ಅದೇ ರೀತಿ ದೊರೆಸ್ವಾಮಿ ಎಂದು ಬಣ್ಣಿಸಿದರು.

ಪರ್ತಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ಗಾಂಧಿವಾದಿಗಳನ್ನು ಅಪಹಾಸ್ಯ ಮಾಡುತ್ತಾರೆ. ಆದರೆ, ದೊರೆಸ್ವಾಮಿಯವರನ್ನು ನೋಡಿದರೆ ಗಾಂಧಿ ಅಂಬೇಡ್ಕರ್ ಇಬ್ಬರ ಸಮ್ಮಿಲನ ಎಂದು ತೋರುತ್ತದೆ. ಅವರು ಚಳವಳಿಗಳನ್ನು ಭಿನ್ನವಾಗಿ ನೋಡದೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಏಕೈಕ ಧ್ಯೇಯದಿಂದ ಸ್ಪಂದಿಸಿ ಚಳವಳಿಗಾರರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ಈ ವೇಳೆ ಲಲಿತಮ್ಮ ಎಚ್.ಎಸ್.ದೊರೆಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಚರಣಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಪರ್ತಕರ್ತೆ ಡಾ. ವಿಜಯಾ, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ರವಿಕೃಷ್ಣಾ ರೆಡ್ಡಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸಮುದ್ರ, ಶಿಖರ, ಜೀವನದಿ ಮುಂದೆ ನಿಂತರೆ ನನಗೆ ಮಾತು ಬರುವುದಿಲ್ಲ. ದೊರೆಸ್ವಾಮಿ ಅವರ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ಅವರ ವಯಸ್ಸಿನ ಅರ್ಧದಷ್ಟು ವಯಸ್ಸಾಗಿಲ್ಲ.
-ಪ್ರಕಾಶ್ ರೈ, ಬಹುಭಾಷಾ ನಟ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News