ಪಾಲಿಕೆ ಸದಸ್ಯೆ ಪತಿಯಿಂದ ಹಲ್ಲೆ: ಆರೋಪ
Update: 2018-04-09 23:52 IST
ಬೆಂಗಳೂರು, ಎ.9: ಬಿಬಿಎಂಪಿ ಸದಸ್ಯೆ ಶಿಲ್ಪಾ ಪತಿ ಅಭಿಲಾಷ್ ರೆಡ್ಡಿ ವ್ಯಕ್ತಿಯೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜೀವನ್‌ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.
ನಗರದ ನ್ಯೂ ತಿಪ್ಪಸಂದ್ರದ ಬಿಬಿಎಂಪಿ ಕಾಂಗ್ರೆಸ್ ಸದಸ್ಯೆ ಶಿಲ್ಪಾ ಪತಿ ಅಭಿಲಾಷ್ ರೆಡ್ಡಿ ಅವರು ವಿಜಯಕುಮಾರ್ ಎಂಬುವರ ಮೇಲೆ ರವಿವಾರ ರಾತ್ರಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ವಿಜಯಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಜೀವನ್‌ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಳೆಯ ದ್ವೇಷದ ಹಿನ್ನೆಲೆ ಇಬ್ಬರ ಮಧ್ಯೆ ಜಗಳ ನಡೆದು ಅದು ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ. ತಮ್ಮ ಬೆಂಬಲಿಗರ ಜೊತೆ ಅಭಿಲಾಷ್ ರೆಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.