ಕಣ್ಣಿನ ಬಗ್ಗೆ ನಿಮಗೆ ತಿಳಿದಿರಲೇಬೇಕಾದ ವಿಷಯಗಳಿಲ್ಲಿವೆ

Update: 2018-04-10 12:48 GMT

ಜೀವನದಲ್ಲಿ ಒಂದು ಹಂತದ ನಂತರ ಯಾವುದೇ ಸಮಸ್ಯೆಯ ಲಕ್ಷಣಗಳಿಲ್ಲದಿದ್ದರೂ ನಿಯಮಿತವಾಗಿ ನೇತ್ರವೈದ್ಯರ ಬಳಿ ತೆರಳಿ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಒಳ್ಳೆಯ ಸಮತೋಲನದಿಂದ ಕೂಡಿದ, ಆರೋಗ್ಯಪೂರ್ಣ ಆಹಾರವು ಕಣ್ಣುಗಳ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯವಾಗಿದೆ. ಆಹಾರವು ಸಾಕಷ್ಟು ವಿಟಾಮಿನ್‌ಗಳು ಮತ್ತು ಖನಿಜಗಳಿಂದ ಕೂಡಿದ್ದರೆ ಗಂಭೀರ ದೃಷ್ಟಿ ಸಮಸ್ಯೆಗಳಿಂದ ಪಾರಾಗಬಹುದು.

ಆಹಾರದಲ್ಲಿರುವ ಉತ್ಕರ್ಷಣ ನಿರೋಧಕಗಳು ನಮ್ಮ ಆರೋಗ್ಯದ ಮೇಲೆ ಹಲವಾರು ರೀತಿಗಳಲ್ಲಿ ದುಷ್ಪರಿಣಾಮಗಳನ್ನು ಬೀರುವ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ನಿರ್ಮೂಲಿಸುವಲ್ಲಿ ನೆರವಾಗುತ್ತವೆ. ಕಣ್ಣುಗಳು ಆರೋಗ್ಯಯುತವಾಗಿರಲು ಲುಟೀನ್, ವಿಟಾಮಿನ್ ಎ,ಸಿ ಮತ್ತು ಇ, ಬೀಟಾ ಕ್ಯಾರೊಟಿನ್, ಒಮೆಗಾ-3 ಫ್ಯಾಟಿ ಆ್ಯಸಿಡ್ ಮತ್ತು ಸತುವುಗಳಂತಹ ವಿವಿಧ ಉತ್ಕರ್ಷಣ ನಿರೋಧಕಗಳು ಅಗತ್ಯವಾಗಿವೆ. ನಿಮ್ಮ ಕಣ್ಣುಗಳ ಬಗ್ಗೆ ನಿಮಗೆ ತಿಳಿದಿರಲೇಬೇಕಾದ ಮಹತ್ವದ ಮಾಹಿತಿಗಳು ಇಲ್ಲಿವೆ...

► ಕಂಪ್ಯೂಟರ್ ಬಳಕೆಯಿಂದ ಕಣ್ಣುಗಳಿಗೆ ಹಾನಿಯಿಲ್ಲ

ಕಂಪ್ಯೂಟರ್‌ಗಳ ಬಳಕೆಯಿಂದ ವಾಸ್ತವದಲ್ಲಿ ಕಣ್ಣುಗಳಿಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಆದರೂ ಗಂಟೆಗಟ್ಟಲೆ ನಿರಂತರವಾಗಿ ಕಂಪ್ಯೂಟರ್ ಪರದೆಯ ವೀಕ್ಷಣೆಯು ಕಣ್ಣುಗಳಿಗೆ ಸುಸ್ತನ್ನುಂಟು ಮಾಡುತ್ತದೆ ಮತ್ತು ದೃಷ್ಟಿಯನ್ನು ತಾತ್ಕಾಲಿಕವಾಗಿ ಮಸುಕುಗೊಳಿ ಸುತ್ತದೆ. ಆಗಾಗ್ಗೆ ಕಂಪ್ಯೂಟರ್ ಪರದೆಯ ವೀಕ್ಷಣೆಯಿಂದ ಬಿಡುಗಡೆ ಪಡೆಯುವುದು ಒಳ್ಳೆಯದು. ಪ್ರತಿ 20 ನಿಮಿಷಗಳಿಗೊಮ್ಮೆ ದೃಷ್ಟಿಯನ್ನು ಕಂಪ್ಯೂಟರ್ ಪರದೆಯಿಂದ ಹೊರಳಿಸಿ 2-5 ನಿಮಿಷಗಳ ಕಾಲ ದೂರಕ್ಕೆ ಹಾಯಿಸಬೇಕು ಮತ್ತು ಕಣ್ಣುಗಳನ್ನು ತೇವಗೊಳಿಸಲು ಆಗಾಗ್ಗೆ ಮುಚ್ಚುತ್ತಿರಬೇಕು ಎನ್ನುವುದು ವೈದ್ಯರ ಶಿಫಾರಸು.

► ಕನ್ನಡಕ ಧಾರಣೆಯಿಂದ ಕಣ್ಣುಗಳು ದುರ್ಬಲಗೊಳ್ಳುವುದಿಲ್ಲ

ಕನ್ನಡಕಗಳನ್ನು ಧರಿಸುವುದರಿಂದ ಕಣ್ಣುಗಳು ದುರ್ಬಲಗೊಳ್ಳುತ್ತವೆ ಎನ್ನುವುದು ಒಂದು ಮಿಥ್ಯೆ. ಕನ್ನಡಕಗಳನ್ನು ಧರಿಸುವುದರಿಂದ ಆಗುವ ಒಂದೇ ಪರಿಣಾಮವೆಂದರೆ ನೀವು ಚೆನ್ನಾಗಿ ವೀಕ್ಷಿಸಲು ಸಾಧ್ಯವಾಗು ತ್ತದೆ. ಕನ್ನಡಕ ಧಾರಣೆಯು ನಿಮ್ಮ ವಯಸ್ಸನ್ನು ಅವಲಂಬಿಸಿರುತ್ತದೆ. ನಿಮಗೆ ವಯಸ್ಸಾದಷ್ಟೂ ನೀವು ಕನ್ನಡಕಗಳನ್ನು ಬದಲಿಸಬೇಕಾದ ಅಗತ್ಯ ಕಡಿಮೆಯಾಗುತ್ತದೆ. ನೀವು ಯುವಕರಾಗಿದ್ದರೆ ಪ್ರತಿವರ್ಷ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಂಡು ಹೊಸ ಕನ್ನಡಕಗಳನ್ನು ಧರಿಸಿ.

► ಚಳಿಗಾಲದಲ್ಲಿ ಕಣ್ಣುಗಳು ಒಣಗುತ್ತವೆ

ಚಳಿಗಾಲ ಸಮೀಪಿಸುತ್ತಿದ್ದಂತೆ ನಿಮ್ಮ ಕಣ್ಣುಗಳು ಕೆಂಪಗಾಗಿವೆ ಎಂದು ಅನ್ನಿಸಿದರೆ ಮತ್ತು ತುರಿಕೆಯುಂಟಾಗುತ್ತಿದ್ದರೆ ಅವು ಒಣಗುತ್ತಿವೆ ಎನ್ನುವುದರ ಸೂಚನೆಯಾಗಿದೆ. ಒಣಗಾಳಿಯಿದ್ದಾಗ ಕಣ್ಣುಗಳ ಮೇಲ್ಮೈನಲ್ಲಿರುವ ನೀರು ಬೇಗನೆ ಆವಿಯಾಗುತ್ತದೆ. ಹೀಗಾಗಿ ನಿಮ್ಮ ಮಲಗುವ ಕೋಣೆಯಲ್ಲಿ ಹ್ಯುಮಿಡಿಫೈಯರ್ ಇದ್ದರೆ ಅದು ಕೃತಕ ಕಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೇವವಾಗಿರಿಸುತ್ತದೆ, ಜೊತೆಗೆ ಬಹಳಷ್ಟು ನೀರನ್ನು ಸೇವಿಸುವದೂ ಅಗತ್ಯವಾಗಿದೆ.

► ಮೇಕಪ್ ಕಣ್ಣುಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ಮಹಿಳೆಯರು ತಮ್ಮ ಕಣ್ಣುಗಳ ರೆಪ್ಪೆಗಳನ್ನು ಕಪ್ಪು ಮಾಡಿಕೊಳ್ಳುತ್ತಿದ್ದರೆ ಆ ಬಗ್ಗೆ ಮರುಚಿಂತನೆ ನಡೆಸಬೇಕು. ಇದಕ್ಕಾಗಿ ಬಳಸುವ ಬ್ರಷ್ ಕಣ್ಣಿನ ಅಕ್ಷಿಪಟಲಕ್ಕೆ ಹಾನಿಯ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಅಲ್ಲದೆ ಮೇಕಪ್‌ನ ಅವಶೇಷಗಳು ಕಣ್ಣಿನ ಹೊರಪದರದ ಕೆಳಗೆ ಸಂಗ್ರಹಗೊಳ್ಳುತ್ತಿರುತ್ತವೆ.

► ಧೂಮ್ರಪಾನವು ದೃಷ್ಟಿಗೆ ಹಾನಿಯನ್ನುಂಟು ಮಾಡುತ್ತದೆ

ಅತಿಯಾದ ಧೂಮ್ರಪಾನವು ಅಕ್ಷಿಪಟಲದ ಮಧ್ಯದಲ್ಲಿರುವ ಮ್ಯಾಕುಲಾ ಎಂಬ ಪುಟ್ಟಭಾಗಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಕ್ರಮೇಣ ಅಂಧತ್ವಕ್ಕೆ ಕಾರಣವಾಗಬಹುದು. ಧೂಮ್ರಪಾನವು ಆಪ್ಟಿಕ್ ನರ ಮತ್ತು ರೆಟಿನಾಗಳಿಗೆ ಹಾನಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ.

► ಕಣ್ಣಿನ ಆರೋಗ್ಯಕ್ಕೆ ಗಜ್ಜರಿಯೊಂದೇ ಅಲ್ಲ

ಕ್ಯಾರಟ್ ಅಥವಾ ಗಜ್ಜರಿ ಉತ್ತಮ ದೃಷ್ಟಿಗೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಕ್ಯಾರಟ್ ಉತ್ತಮ ದೃಷ್ಟಿಯನ್ನು ನೀಡುವ ಏಕಮೇವ ಆಹಾರವಲ್ಲ. ಬಸಳೆ, ಪಾಲಕ್‌ನಂತಹ ಗಾಢ ಹಸಿರು ಎಲೆಗಳ ತರಕಾರಿಗಳು ಗಜ್ಜರಿಗಿಂತ ಒಳ್ಳೆಯ ಪರಿಣಾಮವನ್ನು ನೀಡುತ್ತವೆ. ವಯೋಸಂಬಂಧಿತ ಅಂಧತ್ವಕ್ಕೆ ಕಾರಣವಾಗುವ ಮ್ಯಾಕುಲಾಕ್ಕೆ ಹಾನಿಯನ್ನು ಇವು ತಡೆಗಟ್ಟುತ್ತವೆ.

► ಮಂದ ಬೆಳಕಿನಲ್ಲಿ ಓದಿದರೆ ಕಣ್ಣುಗಳಿಗೆ ಹಾನಿಯಿಲ್ಲ

 ಮಂದ ಬೆಳಕಿನಲ್ಲಿ ಓದಿದರೆ ಕಣ್ಣುಗಳಿಗೆ ಹಾನಿಯಾಗುತ್ತದೆ ಎನ್ನುವುದು ಇನ್ನೊಂದು ಸಾಮಾನ್ಯ ಮಿಥ್ಯೆಯಾಗಿದೆ. ಇದರಿಂದ ಕಣ್ಣಗಳಿಗೆ ಯಾವುದೇ ಹಾನಿಯಾಗುವುದಿಲ್ಲ, ಆದರೆ ಕಣ್ಣುಗಳು ಬೇಗನೆ ಆಯಾಸಗೊಳ್ಳುತ್ತವೆ ಮತ್ತು ತಲೆನೋವಿಗೂ ಕಾರಣವಾಗ ಬಹುದು. ಮಂದ ಬೆಳಕಿನಲ್ಲಿ ಓದುವ ಅತ್ಯುತ್ತಮ ವಿಧಾನವೆಂದರೆ ಬೆಳಕು ನೇರವಾಗಿ ಓದುತ್ತಿರುವ ಪುಟದ ಮೇಲೆ ಬೀಳುತ್ತಿರಬೇಕು.

► ಕಣ್ಣುಗಳು ಕೆಂಪಗಾಗಿದ್ದರೆ ನೇತ್ರವೈದ್ಯರನ್ನು ಕಾಣಬೇಕು

ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗಿದ್ದಾಗ ಹೆಚ್ಚಿನವರಿಗೆ ಬೆಳಕು ನೋಡಲಾಗುವುದಿಲ್ಲ ಮತ್ತು ಇದು ದೃಷ್ಟಿನಾಶಕ್ಕೂ ಕಾರಣವಾಗಬಹುದು. ಇದಕ್ಕೆ ನಿಖರವಾದ ಕಾರಣ ಸಾಮಾನ್ಯ ವೈದ್ಯರಿಗೆ ಗೊತ್ತಾಗುವುದಿಲ್ಲ ಮತ್ತು ಆ್ಯಂಟಿಬಯಾಟಿಕ್‌ಗಳನ್ನು ನೀಡುತ್ತಾರೆ. ವೈರಸ್‌ನಿಂದ ಕಣ್ಣುಗಳು ಕೆಂಪಗಾಗಿದ್ದರೆ ಈ ಆ್ಯಂಟಿಬಯಾಟಿಕ್‌ಗಳು ಉಪಯೋಗವಾಗುವು ದಿಲ್ಲ. ಹೀಗಾಗಿ ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗಿದ್ದರೆ ನೇತ್ರತಜ್ಞರ ಬಳಿಗೇ ಹೋಗಿ. ಅವರು ಸೂಕ್ತ ಚಿಕಿತ್ಸೆ ನೀಡುತ್ತಾರೆ.

► ರಾತ್ರಿವೇಳೆ ಕಾಂಟ್ಯಾಕ್ಟ್ ಲೆನ್ಸ್ ತೆಗೆದಿರಿಸಿ

 ನೀವು ಕಾಂಟ್ಯಾಕ್ಟ್ ಲೆನ್ಸ್ ಧರಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ಅವುಗಳನ್ನು ತೆಗೆದಿರಿಸಲು ಮರೆಯಬೇಡಿ. ಹಾಗೆಯೇ ಮಲಗಿದರೆ ಸೋಂಕಿನ ಸಾಧ್ಯತೆಯು 10ರಿಂದ 20 ಪಟ್ಟು ಅಧಿಕವಾಗಿರುತ್ತದೆ. ಅಲ್ಲದೆ ಅದು ‘ಕಾಂಟ್ಯಾಕ್ಟ್ ಲೆನ್ಸ್ ಎಕ್ಯೂಟ್ ರೆಡ್ ಆಯ್’ಗೂ ಕಾರಣವಾಗಬಹುದು. ಹೀಗಾದಾಗ ಕಣ್ಣುಗಳು ನೋಯುತ್ತಿರುತ್ತವೆ ಮತ್ತು ಕೆಂಪಗಾಗಿರುತ್ತವೆ,ಜೊತೆಗೆ ಹೆಚ್ಚಿನ ಬೆಳಕನ್ನು ನೋಡಲಾಗುವುದಿಲ್ಲ.

►  ಕನ್ನಡಕವನ್ನು ಸ್ವಚ್ಛಗೊಳಿಸಲು ಏನನ್ನು ಬೇಕಾದರೂ ಬಳಸಬೇಡಿ

ನಿಮ್ಮ ಕನ್ನಡಕಗಳು ನಿತ್ಯವೂ ಕೊಳೆಯಾಗುತ್ತಿರುತ್ತವೆ ಮತ್ತು ಅವುಗಳನ್ನು ಧರಿಸುವ ಮುನ್ನ ಸ್ವಚ್ಛಗೊಳಿಸಬೇಕಾಗುತ್ತದೆ.ಇದಕ್ಕಾಗಿ ಬಿಸಿನೀರನ್ನು ಬಳಸಿದರೆ ಗಾಜುಗಳ ಆಯಸ್ಸು ಕಡಿಮೆಯಾಗುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಕನ್ನಡಕವನ್ನು ಮುಳುಗಿಸಿ ಬಳಿಕ ಸ್ವಚ್ಛವಾದ ಮೈಕ್ರೋಫೈಬರ್ ಬಟ್ಟೆಯಿಂದ ಅದನ್ನು ಚೆನ್ನಾಗಿ ಒರೆಸಿ. ಕೈಗೆ ಸಿಕ್ಕಿದ ಬಟ್ಟೆಯನ್ನು ಬಳಸಿದರೆ ಅದರಲ್ಲಿರುವ ಧೂಳು ಗಾಜುಗಳ ಮೇಲೆ ಕುಳಿತುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News