×
Ad

ಅಲ್ಪಸಂಖ್ಯಾತರ ಕೋಟಾದಡಿಯಲ್ಲಿ ಟಿಕೆಟ್ ಕೇಳಬೇಡಿ: ಮುಖಂಡರಿಗೆ ಸಿ.ಎಂ ಸಿದ್ದರಾಮಯ್ಯ ಸೂಚನೆ

Update: 2018-04-10 19:23 IST

ಬೆಂಗಳೂರು/ಹೊಸದಿಲ್ಲಿ, ಎ.10: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಲ್ಪಸಂಖ್ಯಾತರ ಕೋಟಾದಡಿಯಲ್ಲಿ ಟಿಕೆಟ್‌ಗಳನ್ನು ಕೇಳಬೇಡಿ ಎಂದು ಸಮುದಾಯದ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ಅಲ್ಪಸಂಖ್ಯಾತ ಮುಖಂಡರ ಸಭೆಯಲ್ಲಿ ಈ ಬಾರಿ 26 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಪಸಂಖ್ಯಾತ ಸಮುದಾಯದವರಾದ ಇಕ್ಬಾಲ್ ಅಹಮದ್ ಸರಡಗಿ, ಸಿ.ಎಂ.ಇಬ್ರಾಹಿಮ್, ರಿಝ್ವಾನ್ ಅರ್ಶದ್, ಕೆ.ಅಬ್ದುಲ್ ಜಬ್ಬಾರ್‌ರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಿಝ್ವಾನ್ ಅರ್ಶದ್ ಹಾಗೂ ಸಲೀಮ್ ಅಹ್ಮದ್‌ರಿಗೆ ಟಿಕೆಟ್ ನೀಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ನಮಗೆ ಗೆಲುವು ಮಾತ್ರ ಮಾನದಂಡವಾಗಿದೆ. ಆದುದರಿಂದ, ಅಲ್ಪಸಂಖ್ಯಾತರ ಕೋಟಾದಡಿಯಲ್ಲಿ ಟಿಕೆಟ್‌ಗಳನ್ನು ಕೇಳಬೇಡಿ. ಹಾಲಿ ಗೆದ್ದಿರುವ ಶಾಸಕರು ಮತ್ತೆ ಗೆದ್ದು ಬರಲು ಅಗತ್ಯ ರಣತಂತ್ರಗಳನ್ನು ರೂಪಿಸುವಂತೆ ಮುಖ್ಯಮಂತ್ರಿ ಕರೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ರೋಷನ್‌ಬೇಗ್, ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಸೀರ್ ಹುಸೇನ್, ಶಾಸಕ ಎನ್.ಎ.ಹಾರೀಸ್, ಕೇಂದ್ರದ ಮಾಜಿ ಸಚಿವ ರಹ್ಮಾನ್‌ಖಾನ್, ವಿಧಾನಪರಿಷತ್ ಮಾಜಿ ಸದಸ್ಯ ಸಲೀಮ್ ಅಹ್ಮದ್ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News