ಖಾಸಗಿ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಅಗತ್ಯವಿಲ್ಲ: ಸಂಜೀವ್‌ಕುಮಾರ್
ಬೆಂಗಳೂರು, ಎ.10: ಮದುವೆ, ಹುಟ್ಟುಹಬ್ಬ ಸೇರಿದಂತೆ ಇನ್ನಿತರ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಚುನಾವಣಾ ಆಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲವೆಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಸ್ಪಷ್ಟಪಡಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ‘ಭಾರತ ರತ್ನ’ ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್ ಮತದಾನದ ಮಹತ್ವದ ಕುರಿತು ಸಂದೇಶ ನೀಡಿರುವ ಕನ್ನಡ ಹಾಗೂ ಇಂಗ್ಲಿಷ್ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮದುವೆ, ಹುಟ್ಟುಹಬ್ಬಗಳಂತಹ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡುವಂತೆ ಕೋರಿ ಸಾರ್ವಜನಿಕರು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮಾದರಿ ನೀತಿಸಂಹಿತೆ ಜಾರಿ ದಳದ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ. ವಾಸ್ತವವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾವುದೆ ಅನುಮತಿಯ ಅಗತ್ಯವಿಲ್ಲ ಎಂದು ಅವರು ಹೇಳಿದರು.
ರಾಜಕೀಯ ವ್ಯಕ್ತಿಗಳು ಭಾಗವಹಿಸದಿರುವ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿಯ ಅಗತ್ಯವಿಲ್ಲ. ಆದರೆ, ಸಾರ್ವಜನಿಕರು ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮಾದರಿ ನೀತಿಸಂಹಿತೆ ಜಾರಿ ದಳದ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ ಎಂದು ಅವರು ತಿಳಿಸಿದರು. ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯಕ್ತಿಗಳು ಉಡುಗೊರೆ ಹಂಚುವುದು, ಇಲ್ಲವೆ ಊಟದ ವ್ಯವಸ್ಥೆ ಸೇರಿದಂತೆ ಮತದಾರರನ್ನು ಓಲೈಸಲು ಯಾವುದೇ ರೀತಿಯ ಆಮಿಷಗಳನ್ನು ಒಡ್ಡಿದರೆ ಅಂತಹವರ ಮೇಲೆ ಚುನಾವಣಾ ಆಯೋಗವು ಕಾನೂನಿನ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಸಂಜೀವ್‌ಕುಮಾರ್ ಎಚ್ಚರಿಕೆ ನೀಡಿದರು.
ನಗದು ಮಿತಿ: ಸಾರ್ವಜನಿಕರು ಯಾವುದೇ ದಾಖಲೆಗಳಿಲ್ಲದೆ 50 ಸಾವಿರ ರೂ.ಗಳವರೆಗಿನ ಮೊತ್ತವನ್ನು ತಮ್ಮೊಂದಿಗೆ ಪ್ರಯಾಣದ ವೇಳೆಯಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ. ಹಾಗೆಯೇ, 10 ಸಾವಿರ ರೂ.ಇಲ್ಲವೇ ಅದಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ದಾಖಲೆಗಳ ಅವಶ್ಯಕತೆ ಇರುವುದಿಲ್ಲ ಎಂದು ಅವರು ಹೇಳಿದರು.
ಚುನಾವಣೆಯ ವೇಳೆ ನಡೆಯುವ ಅಕ್ರಮಗಳನ್ನು ತಡೆಯಲು ರಾಜ್ಯಾದ್ಯಂತ 1255 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ವಾಹನಗಳು ಮತ್ತು ಲಗೇಜುಗಳನ್ನು ತಪಾಸಣೆ ನಡೆಸುವ ವೇಳೆ ಸಾರ್ವಜನಿಕರು ಸಹಕರಿಸಬೇಕು. ಒಂದು ವೇಳೆ ಎಲ್ಲ ದಾಖಲೆಗಳಿದ್ದರೂ ಅನಗತ್ಯವಾಗಿ ಚೆಕ್ ಪೋಸ್ಟ್‌ಗಳಲ್ಲಿ ತೊಂದರೆ ನೀಡಿದರೆ ಅವುಗಳ ಬಗ್ಗೆ ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಜಿ.ಪಂ. ಸಿಇಓ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಮಾದರಿ ನೀತಿ ಸಂಹಿತೆ: 1156 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 1255 ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳನ್ನು ರಚಿಸಲಾಗಿದ್ದು, ಈವರೆಗೆ 12,537 ಗೋಡೆಬರಹಗಳು, 17,693 ಪೋಸ್ಟರ್‌ಗಳು ಮತ್ತು 7,711 ಬ್ಯಾನರ್‌ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದು ಹಾಕಲಾಗಿದೆ ಎಂದು ಸಂಜೀವ್‌ಕುಮಾರ್ ಹೇಳಿದರು.
ಕಳೆದ 24 ಗಂಟೆಗಳಲ್ಲಿ 14.14 ಲಕ್ಷ ರೂ.ಗಳ ನಗದು, 1.65 ಸಾವಿರ ರೂ.ಮೌಲ್ಯದ 100 ಎಲ್‌ಇಡಿ ಟಿವಿಗಳು, 3 ಲಕ್ಷ ರೂ.ಮೊತ್ತದ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು 4.07 ಕೋಟಿ ರೂ.ನಗದು, 4.5 ಲೀಟರ್ ಮದ್ಯ, ವಾಹನಗಳು ಮತ್ತಿತರ ವಸ್ತುಗಳು ಸೇರಿದಂತೆ 1.21 ಕೋಟಿ ರೂ.ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ ಎಂದು ಸಂಜೀವ್‌ಕುಮಾರ್ ಹೇಳಿದರು. ಅಲ್ಲದೇ, ಕಳೆದ 24 ಗಂಟೆಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳು 10 ಲಕ್ಷ ರೂ.ಮೌಲ್ಯದ ಮೂರು ವಾಹನಗಳು, 54.52 ಲಕ್ಷ ರೂ.ನಗದು, 9.96 ಕೋಟಿ ರೂ.ಮೌಲ್ಯದ ಇತರ ವಸ್ತುಗಳು, ಪೊಲೀಸ್ ಪ್ರಾಧಿಕಾರಗಳು 7 ಲಕ್ಷ ರೂ.ನಗದು, 160 ಲ್ಯಾಪ್‌ಟಾಪ್, 4.69 ಕೋಟಿ ರೂ.ನಗದನ್ನು ವಶಪಡಿಸಿಕೊಂಡಿವೆ ಎಂದು ಅವರು ತಿಳಿಸಿದರು.
ಕಾನೂನು ಮತ್ತು ಸುವ್ಯವಸ್ಥೆ: 1237 ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 185 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 174 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 437 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಂಜೀವ್‌ಕುಮಾರ್ ಹೇಳಿದರು.
ಹಾಸನ ಡಿಸಿ ವಿರುದ್ಧ ಕಾಂಗ್ರೆಸ್ ದೂರು
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾಂಗ್ರೆಸ್ ಮುಖಂಡರು ನೀಡಿರುವ ದೂರಿನ ಅನ್ವಯ ಮೈಸೂರು ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನದ ಆವರಣ ಅಥವಾ ಮೇಲೆ ಅಳವಡಿಸಲಾಗಿದ್ದ ಯಾವುದೆ ಧ್ವಜಗಳನ್ನು ತೆರವುಗೊಳಿಸಲಾಗಿಲ್ಲ.
-ಸಂಜೀವ್‌ಕುಮಾರ್, ಮುಖ್ಯ ಚುನಾವಣಾಧಿಕಾರಿ