×
Ad

ಬೆಂಗಳೂರು: ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಕೇಂದ್ರ ಸರಕಾರ ವಿಫಲ ಖಂಡಿಸಿ ಪ್ರತಿಭಟನೆ

Update: 2018-04-10 20:11 IST

ಬೆಂಗಳೂರು, ಎ.10: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.

ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಸಮಿತಿಯ ಕಾರ್ಯಕರ್ತರು, ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಸರಕಾರ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿದೆ. ಹೀಗಾಗಿ, ಕೇಂದ್ರ ಸರಕಾರ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವ ತೀರ್ಪನ್ನು ಮರುಪರಿಶೀಲನೆ ನಡೆಸಲು ಮೇಲ್ಮನವಿ ಸಲ್ಲಿಸಿ ಸಮರ್ಥ ವಾದ ಮಂಡಿಸಬೇಕೆಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಪ್ರಧಾನಿ ಮೋದಿ ದಲಿತ ವಿರೋಧಿ. ಹೀಗಾಗಿ, ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನ ತಳೆದಿದ್ದಾರೆ. ಅಲ್ಲದೆ, ಬಿಜೆಪಿಯದು ಕೋಮುವಾದಿ ಮನಸ್ಥಿತಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ಅಲ್ಲದೆ ಕೇಂದ್ರ ಸರಕಾರ ದಲಿತರ ಸಂವಿಧಾನ ಬದ್ಧ ಸೌಲಭ್ಯಗಳನ್ನು ಕಿತ್ತುಕೊಳ್ಳಲು ಹೊರಟಿದೆ ಎಂದು ದೂರಿದರು.

ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್. ಮೂರ್ತಿ ಮಾತನಾಡಿ, ಸುಪ್ರೀಂ ಕೋರ್ಟ್ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವ ತೀರ್ಪು ನೀಡಿದ್ದು, ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ದಲಿತರ ದೌರ್ಜನ್ಯವೆಸಗಿದವರಿಗೆ ಶೇ.2ರಷ್ಟು ಶಿಕ್ಷೆ ಯಾಗುತ್ತಿಲ್ಲ. ಅಲ್ಲದೆ, ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ನೀತಿ ಅನುಸರಿಸುವ ಜೊತೆಗೆ ದೌರ್ಜನ್ಯ ನಡೆಸುವವರಿಗೆ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರದ ಸಚಿವರು ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡುತ್ತಿದ್ದು, ಕೋಮುಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದ ಅವರು, ದಲಿತ ನೌಕರರಿಗೆ ಭಡ್ತಿ ಮೀಸಲು ಸೇರಿದಂತೆ ಸಂವಿಧಾನ ಬದ್ಧ ಸೇವಾ ಸೌಲಭ್ಯಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರ್ಬಲಗೊಳಿಸುವ ತೀರ್ಪು ಮರು ಪರಿಶೀಲನೆಗೆ ಮೇಲ್ಮನವಿ ಸಲ್ಲಿಸುವ ಜೊತೆಗೆ ಸಮರ್ಥವಾದ ಮಂಡಿಸಿ, ದಲಿತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News