ಎ.12 ರಂದು ಬಿಜೆಪಿಯ ‘ಕರುನಾಡ ಜಾಗೃತಿ ಯಾತ್ರೆ’: ಶೋಭಾ ಕರಂದ್ಲಾಜೆ
ಬೆಂಗಳೂರು, ಎ. 10: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರು ಎ.12ರಿಂದ ಎರಡು ದಿನಗಳ ಕಾಲ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ‘ಕರುನಾಡ ಜಾಗೃತಿ ಯಾತ್ರೆ’ ನಡೆಸಲಿದ್ದು, ಎ.12ಕ್ಕೆ ಕಾಂಗ್ರೆಸ್ ವಿರುದ್ಧದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಏರ್ಪಡಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.12ಕ್ಕೆ ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೆರೆಯಲ್ಲಿ ಮುಷ್ಟಿಧಾನ್ಯ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದು, ಮುಷ್ಟಿಧಾನ್ಯದಿಂದ ಸಿದ್ಧಪಡಿಸಿದ ಪ್ರಸಾದದ ಸಹಭೋಜನ ಮಾಡಲಿದ್ದಾರೆ ಎಂದರು.
ಸಂವಾದ: ‘ನವ ಬೆಂಗಳೂರು’ ಚರ್ಚಾ ಕಾರ್ಯಮ್ರಮಕ್ಕೆ ಎ.11ಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಚಾಲನೆ ನೀಡಲಿದ್ದು, ಚರ್ಚೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನಗರದ 84 ಕಾಲೇಜುಗಳ 11,500 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರು, ಕಸ, ಕಾನೂನು ಸುವ್ಯವಸ್ಥೆ, ಪರಿಸರ, ಮೂಲಸೌಲಭ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ನೀಡಲಿದ್ದಾರೆ ಎಂದ ಅವರು, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಕಾರ್ಗಿಲ್ ಯುದ್ಧ ವೀರ ರವೀಂದ್ರನಾಥ್‌ಗೆ ಗೌರವ ನೀಡಿಲ್ಲ ಎಂದು ದೂರಿದರು.