ನಾಗರಿಕರ ಸೇವೆಗೆ ಸುವಿಧಾ-ಸಮಾಧಾನ್ ಅಪ್ಲಿಕೇಷನ್: ಸಂಜೀವ್‌ಕುಮಾರ್
ಬೆಂಗಳೂರು, ಎ.10: ಚುನಾವಣೆಗೆ ಸಂಬಂಧಿಸಿದ ಅನುಮತಿ, ಪರವಾನಗಿ ಹಾಗೂ ಸಾರ್ವಜನಿಕ ಕುಂದುಕೊರತೆಗಳ ನಿವಾರಣೆಗೆ ಭಾರತದ ಚುನಾವಣಾ ಆಯೋಗವು ಸುವಿಧಾ ಮತ್ತು ಸಮಾಧಾನ್ ಎಂಬ ಎರಡು ನಾಗರಿಕ ಸೇವಾ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿ ನಮ್ಮ ವೆಬ್‌ಸೈಟ್ www.ceokarnataka.kar.nic.in ನಲ್ಲಿ ಅಳವಡಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ‘ಭಾರತ ರತ್ನ’ ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್ ಮತದಾನದ ಮಹತ್ವದ ಕುರಿತು ಸಂದೇಶ ನೀಡಿರುವ ಕನ್ನಡ ಹಾಗೂ ಇಂಗ್ಲಿಷ್ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸುವಿಧಾ: ಚುನಾವಣೆಗೆ ಸಂಬಂಧಿಸಿದ ಅನುಮತಿ/ಪರವಾನಗಿಗಳನ್ನು 24 ಗಂಟೆಗೊಳಗೆ ನೀಡಲು ಸುವಿಧಾ ಎಂಬ ಏಕಗವಾಕ್ಷಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಭೆ, ರ್ಯಾಲಿ, ವಾಹನ, ತಾತ್ಕಾಲಿಕ ಚುನಾವಣಾ ಕಚೇರಿ, ಧ್ವನಿವರ್ಧಕ, ಇತ್ಯಾದಿಗಳಿಗೆ ಅನುಮತಿಗಾಗಿ ಸುವಿಧಾ ಬಳಸಬಹುದು ಎಂದು ಅವರು ಹೇಳಿದರು.
ಈ ವ್ಯವಸ್ಥೆಯನ್ನು ಪ್ರತಿ ಚುನಾವಣಾಧಿಕಾರಿಗಳ ಮಟ್ಟದಲ್ಲಿ, ಪ್ರತಿ ಉಪ-ವಿಭಾಗದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅರ್ಜಿ ಸಲ್ಲಿಸುವುದು, ಪ್ರಕ್ರಿಯೆ, ಅನುಮತಿ ನೀಡುವಿಕೆಯನ್ನು ಸಹಕ್ರಿಯೆಯ ಆಧಾರದಲ್ಲಿ ಮಾಡಲಾಗಿದೆ. ಆದರೆ, ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್‌ಗಳ ಬಳಕೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಕನಿಷ್ಟ 36 ಗಂಟೆಗಳ ಮೊದಲು ಸಲ್ಲಿಸಬೇಕು ಎಂದು ಅವರು ಸೂಚನೆ ನೀಡಿದರು.
ಸುವಿಧಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಸಹಕಾರಿಯಾಗಿದೆ. ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆಯಲು ಎಲ್ಲ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಸುವಿಧಾ ಸಮಾನ ಅವಕಾಶ ಕಲ್ಪಿಸುತ್ತದೆ ಎಂದು ಅವರು ಹೇಳಿದರು.
ಎಪ್ರಿಲ್ 9ರವರೆಗೆ 336 ಅರ್ಜಿಗಳು ಅನುಮತಿ ಕೋರಿ ಸ್ವೀಕೃತವಾಗಿದ್ದು, ಈ ಪೈಕಿ 207ನ್ನು ವಿಲೇವಾರಿ ಮಾಡಲಾಗಿದೆ. ಗರಿಷ್ಠ 66 ಅರ್ಜಿಗಳು ಉಡುಪಿ ಜಿಲ್ಲೆಯಲ್ಲಿ ಸ್ವೀಕೃತವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ 44 ಸ್ವೀಕೃತವಾಗಿವೆ. ರಾಜಕೀಯ ಪಕ್ಷಗಳು ಹೆಚ್ಚಿನ ಸಮಯ, ಶ್ರಮ ವ್ಯರ್ಥ ಮಾಡದೆ ಸುಲಭವಾಗಿ ಈ ಅರ್ಜಿಗಳನ್ನು ಬಳಸಬುದಾಗಿದೆ ಎಂದು ಅವರು ತಿಳಿಸಿದರು.
ಸಮಾಧಾನ: ನಾಗರಿಕರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಮಾಜದ ವಿವಿಧ ಸ್ಥರದ ಎಲ್ಲ ರೀತಿಯ ದೂರುಗಳು, ಕುಂದು-ಕೊರತೆ, ಸಲಹೆ-ಸೂಚನೆಗಳನ್ನು ಒಂದೇ ವೇದಿಕೆಯಡಿ ಸಲ್ಲಿಸಲು ಅವಕಾಶವಾಗುವಂತಹ ವ್ಯವಸ್ಥೆಯನ್ನು ಚುನಾವಣಾ ಆಯೋಗವು ‘ಸಮಾಧಾನ’ ಅನ್ನುವ ವ್ಯವಸ್ಥೆಯನ್ನು ಸಿದ್ಧಪಡಿಸಿದೆ ಎಂದು ಸಂಜೀವ್‌ಕುಮಾರ್ ಹೇಳಿದರು.
ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ದೂರುಗಳು ಇಲ್ಲವೆ ಸಲಹೆಗಳನ್ನು ಬಹುಮಾಧ್ಯಮಗಳ ಮೂಲಕ ದಾಖಲಿಸುವ ಈ ವ್ಯವಸ್ಥೆಯು ಅದಕ್ಕೆ ಪರಿಹಾರವನ್ನು ದೊರಕಿಸಿಕೊಡುವಲ್ಲಿಯೂ ಸಹಕಾರಿಯಾಗಿದೆ. ನಾಗರಿಕರು ಸಹಾಯವಾಣಿ 1950, ಇಲ್ಲವೇ ವೆಬ್‌ಸೈಟ್, ಫ್ಯಾಕ್ಸ್, ಎಸ್‌ಎಂಎಸ್ ಸೇರಿದಂತೆ ಇನ್ನಿತರ ಮಾಧ್ಯಮಗಳನ್ನು ಬಳಸಿಕೊಂಡು ದೂರು/ಸಲಹೆಗಳನ್ನು ದಾಖಲಿಸಲು ಆಯೋಗವು ಅವಕಾಶ ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದರು.
ಸಮಾಧಾನದಲ್ಲಿ ನಾಗರಿಕರು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಹಿತಿ, ಸಲಹೆ ಅಥವಾ ನೆರವು ಬೇಕಾಗಿದ್ದಲ್ಲಿ ಅಥವಾ ಉಲ್ಲಂಘನೆಯಾದ ಪ್ರಕರಣಗಳಿಗೆ ಸೇರಿದಂತೆ ವಿವಿಧ ರೀತಿಯ ವಿಷಯವಾರು ರೂಪದಲ್ಲಿ ದಾಖಲಿಸಲು ಅವಕಾಶವಿದೆ ಎಂದು ಸಂಜೀವ್‌ಕುಮಾರ್ ಹೇಳಿದರು.
ತಪ್ಪುಮಾಹಿತಿಗಳನ್ನು ನೀಡುವುದನ್ನು ತಪ್ಪಿಸಲು ದೂರುದಾರರ ಗುರುತಿಗಾಗಿ ಪ್ರತ್ಯೇಕವಾದ ಐಡಿಯನ್ನು ಸಕ್ರಿಯಗೊಳಿಸಿ ಅದಕ್ಕೆ ಅವರ ಮೊಬೈಲ್ ಸಂಖ್ಯೆಯನ್ನು ಜೋಡಿಸಲಾಗುತ್ತದೆ. ಇದೇ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಸಲ್ಲಿಸಿದ ಅರ್ಜಿಯ ಸ್ಥಿತಿ-ಗತಿಯನ್ನು ಅರಿತುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಕನ್ನಡದಲ್ಲಿ ದೂರು ಸಲ್ಲಿಸಲು ಅನುವಾಗುವಂತೆ ಯೂನಿಕೋಡ್ ತಂತ್ರಾಂಶವನ್ನು ಅಳವಡಿಸಲಾಗಿದೆ. ದೂರುಗಳನ್ನು ಚುನಾವಣಾಧಿಕಾರಿಗಳು/ ಉಪ ಚುನಾವಣಾಧಿ ಕಾರಿಗಳ ಸಮ್ಮುಖದಲ್ಲಿ ದಾಖಲಿಸಲಾಗುತ್ತದೆ. ಮತದಾನಕ್ಕೆ ಸಂಬಂಧಿಸಿದ ದೂರುಗಳನ್ನು ಮುಖ್ಯಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸಲ್ಲಿಸಲು ಅವಕಾಶವಿದೆ ಎಂದು ಅವರು ಹೇಳಿದರು.
ಸಮಾಧಾನದಲ್ಲಿ ಇದುವರೆಗೆ 253 ದೂರು ಮತ್ತು ಸಲಹೆಗಳನ್ನು ದಾಖಲಿಸಲಾಗಿದ್ದು, ಈ ಪೈಕಿ 172 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮಾದರಿ ನೀತಿ ಸಂಹಿತೆ(ಎಂಸಿಸಿ) ಉಲ್ಲಂಘನೆಗೆ ಸಂಬಂಧಿಸಿದಂತೆ ಛಾಯಾಚಿತ್ರ, ಮುದ್ರಿತ ಧ್ವನಿ, ವಿಡಿಯೋಗಳನ್ನು ದೂರಿನ ಜೊತೆ ಸಲ್ಲಿಸಬಹುದು ಹಾಗೂ ಆಡಿಯೋ, ವಿಡಿಯೋ, ಚಿತ್ರ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.
ಚುನಾವಣಾ ಆಯೋಗವು ಸುಗಮ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಅನುವಾಗುವಂತೆ ಸಾರ್ವಜನಿಕರು ಈ ವೇದಿಕೆಯನ್ನು ಬಳಸಿಕೊಂಡು ಆಯೋಗಕ್ಕೆ ನೆರವಾಗಬಹುದಾಗಿದೆ ಎಂದು ಸಂಜೀವ್‌ಕುಮಾರ್ ಮನವಿ ಮಾಡಿದರು.