ರಾಜ್ಯದಲ್ಲಿ ಬಂದ್ ವೇಳೆ ಮುನ್ನೆಚ್ಚರಿಕೆ ಕ್ರಮ: ಸರಕಾರದಿಂದ ಸ್ಪಷ್ಟನೆ ಬಯಸಿದ ಹೈಕೋರ್ಟ್
ಬೆಂಗಳೂರು, ಎ.10: ರಾಜ್ಯದಲ್ಲಿ ಬಂದ್ ಆಚರಿಸಿದರೆ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದಾಗಿ ತಾನು ಹೊರಡಿಸಿರುವ ತೀರ್ಪಿನ ಪಾಲಿಸುವ ಸಂಬಂಧ ರಾಜ್ಯ ಸರಕಾರದಿಂದ ಹೈಕೋರ್ಟ್ ಸ್ಪಷ್ಟನೆ ಬಯಸಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎ.12ರಂದು ರಾಜ್ಯ ಬಂದ್‌ಗೆ ಕರೆ ನೀಡಿರುವುದನ್ನು ಪ್ರಶ್ನಿಸಿ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ.ರಾಜಾ ಸೇರಿ ಇತರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ಈ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಬಂದ್ ವಿಚಾರದಲ್ಲಿ ಫೆ.2ರಂದು ಕೋರ್ಟ್ ಹೊರಡಿಸಿರುವ ಆದೇಶ ಪಾಲನೆ ಬಗ್ಗೆ ರಾಜ್ಯ ಸರಕಾರ ಯಾವ ನಿಲುವು ಹೊಂದಿದೆ ಎಂಬುದನ್ನು ಬುಧವಾರ ಲಿಖಿತ ರೂಪದಲ್ಲಿ ಸ್ಪಷ್ಟಪಡಿಸುವಂತೆ ಸರಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಾವುದೇ ಬಂದ್‌ಗಳಿಗೆ ಕರೆ ನೀಡಿದರೆ ಸಾರ್ವಜನಿಕರಿಗೆ ಉಂಟಾಗುವ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟವನ್ನು ತಪ್ಪಿಸಲು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ನ್ಯಾಯಾಲಯವು ಫೆ.2ರಂದು ಆದೇಶ ಹೊರಡಿಸಿದೆ. ಈ ಆದೇಶ ಪ್ರಕಟಗೊಂಡ ನಂತರ ಯಾವುದೇ ಬಂದ್‌ಗಳಿಗೆ ಕರೆ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಮತ್ತದೇ ವಿಚಾರ ಸಂಬಂಧ ಪದೇ ಪದೇ ಅರ್ಜಿಗಳನ್ನು ಸಲ್ಲಿಸಿ ಕೋರ್ಟ್ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀದ್ದೀರಿ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲರು, ಕನ್ನಡಪರ ಸಂಘಟನೆಗಳು ಎ.12ರಂದು ನಡೆಸಲು ಉದ್ದೇಶಿರುವ ಬಗ್ಗೆ ರಾಜ್ಯ ಬಂದ್ ಕುರಿತು ಕೋರ್ಟ್‌ಗೆ ವಿವರಿಸಿದರು. ಇದಕ್ಕೆ ತೃಪ್ತಿಯಾಗದ ನ್ಯಾಯಪೀಠ, ಒಂದು ಬಾರಿ ಕೋರ್ಟ್ ನಿದೇಶನ ನೀಡಿದ ಮೇಲೆ ಮುಗೀತು. ಪದೇ ಪದೇ ನಿರ್ದೇಶನ ನೀಡಬೇಕಿಲ್ಲ. ಒಂದೊಮ್ಮೆ ಯಾರಾದರೂ ಬಂದ್‌ಗೆ ಕರೆ ನೀಡಿದರೆ ಸರಕಾರವು ಸೂಕ್ತ ಕ್ರಮ ಜರುಗಿಸಲಿದೆ. ಒಂದು ವೇಳೆ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ರಾಜ್ಯ ಸರಕಾರ ನಡೆದುಕೊಂಡಿದ್ದರೆ, ಅದನ್ನು ನಮಗೆ ತೋರಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು.
ಆದರೂ ಅರ್ಜಿದಾರರ ಪರ ವಕೀಲರು ವಾದ ಮಂಡನೆ ಮುಂದುವರಿಸುತ್ತಿದ್ದರಿಂದ, ಫೆ.2ರಂದು ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲನೆ ಬಗ್ಗೆ ಸರಕಾರದ ನಿಲುವು ಏನು ಎಂದು ಸರಕಾರಿ ವಕೀಲರನ್ನು ಪ್ರಶ್ನಿಸಿತು.
ಸರಕಾರಿ ವಕೀಲರು ಪ್ರತಿಕ್ರಿಯಿಸಿ, ಈ ಬಗ್ಗೆ ಸರಕಾರದಿಂದ ಮಾಹಿತಿ ಪಡೆದು ಕೋರ್ಟ್‌ಗೆ ತಿಳಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದರಿಂದ ಸರಕಾರಿ ವಕೀಲರಿಗೆ ಮೇಲಿನಂತೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.