×
Ad

ಸಿದ್ದು ಮತ್ತು ಪರಂ ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯುತ್ತಾರೆಯೇ ?

Update: 2018-04-10 23:26 IST

ಬೆಂಗಳೂರು,ಎ.10: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಒಳಒಪ್ಪಂದವಾಗಿದೆ. ಹೀಗಾಗಿ ಅದೊಂದೇ ಕ್ಷೇತ್ರವನ್ನು ನೆಚ್ಚಿಕೊಳ್ಳುವುದು ಅಪಾಯಕಾರಿಯಾಗಬಹುದು ಎನ್ನುವುದನ್ನು ಹಿತೈಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿರುವಂತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುನ್ನೆಚ್ಚರಿಕೆ ಕ್ರಮವಾಗಿ ಚಾಮುಂಡೇಶ್ವರಿಯ ಜೊತೆಗೆ ಉತ್ತರ ಕರ್ನಾಟಕದ ಸುರಕ್ಷಿತ ಕ್ಷೇತ್ರವೊಂದರಿಂದಲೂ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಹಿಂದಿನ ಚುನಾವಣೆಯಲ್ಲಿ 30,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರೂ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಹಸಿರು ನಿಶಾನೆಯನ್ನು ತೋರಿಸಿದ್ದಾರಾದರೂ, ಪರಮೇಶ್ವರ್‌ಗೆ ಇನ್ನೂ ಅಂತಹ ಅನುಮತಿಯನ್ನು ನೀಡಿಲ್ಲ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯ ಜೊತೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ. ಬಾದಾಮಿಯ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರು ಅನಾರೋಗ್ಯದಿಂದಿದ್ದಾರೆ ಮತ್ತು ಅವರ ಕ್ಷೇತ್ರದಿಂದ ಸಿದ್ದರಾಮಯ್ಯನವರು ಸ್ಪರ್ಧಿಸಬಹುದು ಎಂದು ಪಕ್ಷವು ಅವರಿಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿದ್ದರಾಮಯ್ಯನವರೂ ಇದೇ ಸಮುದಾಯಕ್ಕೆ ಸೇರಿದ್ದು, ಅವರನ್ನು ತಮ್ಮ ಅಗ್ರ ನಾಯಕ ಎಂದು ಅಲ್ಲಿಯ ಕುರುಬರು ಪರಿಗಣಿಸಿರುವುದು ಮುಖ್ಯಮಂತ್ರಿಗಳಿಗೆ ಒಂದು ಪ್ಲಸ್ ಪಾಯ್ಂಟ್ ಆಗಲಿದೆ. ಸಿದ್ದರಾಮಯ್ಯ ಅವರು ಸ್ವಕ್ಷೇತ್ರ ವರುಣಾವನ್ನು ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕಿಳಿಯುತ್ತಿರುವ ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಡಲು ಸಿದ್ಧರಿದ್ದಾರೆ.

ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಹವಣಿಸುತ್ತಿದ್ದಾರೆ ಎನ್ನುವುದರ ವಾಸನೆ ಹೊಡೆದಿರುವ ಬಿಜೆಪಿ ಮತ್ತು ಜೆಡಿಎಸ್ ಅವರನ್ನು ‘ಹೇಡಿಗಳು’ ಎಂದು ಬಣ್ಣಿಸುವುದರ ಮೂಲಕ ಈಗಾಗಲೇ ಅವರ ವಿರುದ್ಧ ದಾಳಿಯನ್ನು ಇನ್ನಷ್ಟು ಮೊನಚುಗೊಳಿಸಿವೆ.

ಸಿದ್ದರಾಮಯ್ಯ ಅವರು 1983-2008ರ ನಡುವೆ ಚಾಮುಂಡೇಶ್ವರಿ ಕ್ಷೇತ್ರದಿಂದ ಐದು ಬಾರಿ ಗೆದ್ದಿದ್ದಾರೆ. ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ, 2 ಮತ್ತು 3ನೇ ಬಾರಿ ಜನತಾ ಪಾರ್ಟಿಯ ಟಿಕೆಟ್‌ನಲ್ಲಿ, 4ನೇ ಬಾರಿ ಜೆಡಿಎಸ್‌ನಿಂದ ಮತ್ತು ಕೊನೆಯ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ವಿಜಯ ಸಾಧಿಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ವ್ಯೆಹಾತ್ಮಕ ಕಾರಣಗಳಿಂದ ವರುಣಾ ಕ್ಷೇತ್ರಕ್ಕೆ ವಲಸೆ ಹೋದ ಅವರು ಅಲ್ಲಿ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.

ಚಾಮುಂಡೇಶ್ವರಿಯ ಹಾಲಿ ಶಾಸಕ ಜೆಡಿಎಸ್‌ನ ಜಿ.ಟಿ.ದೇವಗೌಡ ಅವರು ಮೈಸೂರು ಜಿಲ್ಲೆಯ ಪ್ರಬಲ ನಾಯಕರಾಗಿದ್ದಾರೆ ಮತ್ತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಮಹಾನಾಯಕ ಎಚ್.ಡಿ.ದೇವೇಗೌಡ ಅವರು ತನ್ನ ಒಂದು ಕಾಲದ ‘ಶಿಷ್ಯ’ ಸಿದ್ದರಾಮಯ್ಯನವರನ್ನು ಮಣ್ಣುಮುಕ್ಕಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.

ಸಿದ್ದರಾಮಯ್ಯನವರನ್ನು ಸೋಲಿಸಲು ಬಿಜೆಪಿಯು ಜೆಡಿಎಸ್‌ನೊಂದಿಗೆ ಗುಪ್ತ ಒಪ್ಪಂದವೊಂದನ್ನು ಮಾಡಿಕೊಂಡಿದೆ ಎನ್ನುವುದು ಮುಖ್ಯಮಂತ್ರಿಗಳ ಆರೋಪವಾಗಿದೆ.

ಅರೆನಗರ ಕ್ಷೇತ್ರವಾಗಿರುವ ಚಾಮುಂಡೇಶ್ವರಿಯಲ್ಲಿ 72,000 ಒಕ್ಕಲಿಗ ಮತ್ತು 30,000 ಲಿಂಗಾಯತ ಮತಗಳಿವೆ. ಹಿಂದುಳಿದ ವರ್ಗಗಳು, ಎಸ್‌ಸಿ/ಎಸ್‌ಟಿಗಳು ಮತ್ತು ಮುಸ್ಲಿಮರು ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಹೊಂದಿದ್ದಾರೆ. ಎಲ್ಲ ಜಾತಿಗಳು ಮತ್ತು ಧರ್ಮಗಳ ಜನರ ಮತಗಳನ್ನು ಪಡೆಯುವ ವಿಶ್ವಾಸವನ್ನು ಸಿದ್ದರಾಮಯ್ಯ ಹೊಂದಿದ್ದಾರೆ.

ಸಿದ್ದರಾಮಯ್ಯನವರೊಂದಿಗೆ ಸಂಬಂಧ ಹಳಸಿದ ಬಳಿಕ ಜೆಡಿಎಸ್ ಪಾಳೆಯವನ್ನು ಸೇರಿಕೊಂಡಿರುವ ಮಾಜಿ ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ಅವರು, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರ ಮುಖ್ಯಮಂತ್ರಿಗಳಿಗೆ ಅಷ್ಟು ಸುಲಭವಾಗಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News