ಪರೀಕ್ಷಾ ಪ್ರಕ್ರಿಯೆಗಳಲ್ಲಿ ಗೊಂದಲ ನಿಲ್ಲಲಿ

Update: 2018-04-10 18:35 GMT

ಮಾನ್ಯರೇ,

ದ್ವಿತೀಯ ಪಿಯುಗೆ ಸಂಬಂಧಿಸಿದಂತೆ ಪ್ರತಿವರ್ಷವೂ ಪ್ರಶ್ನೆ ಪತ್ರಿಕೆಗಳಲ್ಲಿ ಗೊಂದಲ ಉಂಟಾಗುತ್ತಿದೆ. ಅದನ್ನು ಸರಿಪಡಿಸಲು ಶಿಕ್ಷಣ ಇಲಾಖೆ ಕೃಪಾಂಕಗಳನ್ನು ನೀಡುತ್ತಿದೆ. ಭೌತ ವಿಜ್ಞಾನದಲ್ಲಿ 6 ಮತ್ತು ಇಂಗ್ಲಿಷ್ ವಿಷಯದಲ್ಲಿ 3 ಕೃಪಾಂಕಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಉತ್ತಮ ನಡೆ. ಆದರೆ ಶಿಕ್ಷಣ ಇಲಾಖೆಯು ಪರೀಕ್ಷಾ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಅನುಮಾನ ಉಂಟಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಆಟವಾಡುವ ಇಲಾಖೆ ಬೇಜವಾಬ್ದಾರಿಯ ಅಧಿಕಾರವನ್ನು ನಿರ್ವಹಿಸುತ್ತಿದೆ. ತಪ್ಪುಪ್ರಶ್ನೆ, ಪಠ್ಯದಲ್ಲಿ ಇಲ್ಲದಂತಹ ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಲ್ಲಿರುವುದ ರಿಂದ ಅದಕ್ಕೆ ಕೃಪಾಂಕಗಳನ್ನು ನೀಡಬೇಕೆಂದು 2016ರಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸಿದಂತಹ ಹೋರಾಟ ದೊಡ್ಡ ಸುದ್ದಿಯಾಗಿತ್ತು. ಅಂತಹದೇ ಗೊಂದಲ ಈ ಬಾರಿಯೂ ಉಂಟಾಗಿದೆ. ಭೌತ ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ತಪ್ಪುಪ್ರಶ್ನೆಗಳಿರುವುದರಿಂದ ಕೃಪಾಂಕಗಳನ್ನು ನೀಡುವಂತೆ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದರು. ಪರಿಹಾರವಾಗಿ ಇಲಾಖೆಯು ಕೂಡ ಕೃಪಾಂಕಗಳನ್ನು ನೀಡಲು ಒಪ್ಪಿಕೊಂಡಿದೆ. ಅಲ್ಲದೆ ಶಿಕ್ಷಣ ಇಲಾಖೆಯು ಪ್ರಶ್ನೆ ಪತ್ರಿಕೆಯ ದೋಷಗಳಿಗೆ ಸಂಬಂಧಿಸಿದಂತೆ ಮುಂದಿನ ವರ್ಷ ಪ್ರಶ್ನೆ ಪತ್ರಿಕೆ ಕರಡನ್ನು ತಿದ್ದಲು ತಂಡವನ್ನು ನೇಮಿಸುವುದಾಗಿ ತಿಳಿಸಿದೆ. ದ್ವಿತೀಯ ಪಿಯು ಅಲ್ಲದೆ ಎಸೆಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿಯೂ ಇಂತಹ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತವೆ. ಹಾಗಾಗಿ ಮುಂದಿನ ದಿನಗಳಲ್ಲಾದರೂ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಮರುಕಳಿಸದಂತೆ ಶಿಕ್ಷಣ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ಎಚ್ಚರವಹಿಸಬೇಕಾಗಿದೆ. 

Writer - -ರಾಮು ಎಲ್.ಪಿ., ಲಕ್ಕವಳ್ಳಿ

contributor

Editor - -ರಾಮು ಎಲ್.ಪಿ., ಲಕ್ಕವಳ್ಳಿ

contributor

Similar News