ಶಿರಹಟ್ಟಿಯಲ್ಲಿ ದೊಡ್ಡಮನಿಗೆ ದೊಡ್ಡ ಸವಾಲು!

Update: 2018-04-11 10:34 GMT

► ಕ್ಷೇತ್ರ ಉಳಿಸಿಕೊಳ್ಳಲು ಎಲ್ಲಿಲ್ಲದ ಹರಸಾಹಸ 

► ಯಾರಿಗೆ ದೊರೆಯಲಿದೆ ಫಕ್ಕೀರ ಸಿದ್ದರಾಮ ಶ್ರೀ ಆಶೀರ್ವಾದ

ಗದಗ, ಎ.10: ಶಿರಹಟ್ಟಿ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲು ಕ್ಷೇತ್ರದಲ್ಲಿ ಚುನಾವಣೆ ಪ್ರಚಾರವು ರಂಗೇರುತ್ತಿದ್ದು, ಉರಿ ಬಿಸಿಲಿನ ಮಧ್ಯೆಯು ಹಾಲಿ ಮತ್ತು ಮಾಜಿ ಶಾಸಕರು ಅಧಿಕಾರದ ಗದ್ದುಗೆ ಏರಲು ಎಲ್ಲಿಲ್ಲದ ಆಶ್ವಾಸನೆಗಳ ಸುರಿಮಳೆಗಳನ್ನೆ ಸುರಿಸುತ್ತಿದ್ದಾರೆ.

ಮೀಸಲು ಕ್ಷೇತ್ರದ ಹಾಲಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ರಾಮಕೃಷ್ಣ ದೊಡ್ಡಮನಿ ಅವರಿಗೆ ಟಿಕೆಟ್ ಎಂದು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿವೆ.

ಬಿಜೆಪಿಯಿಂದ ಮಾಜಿ ಶಾಸಕ ರಾಮಣ್ಣ ಲಮಾಣಿ ಸೇರಿದಂತೆ ಗುರುನಾಥ ದಾನಪ್ಪನವರ, ಅಶ್ವತ್ಥ ನಾಯಕ, ಭೀಮಸಿಂಗ್ ರಾಠೋ , ರಾಮಣ್ಣ ಲಮಾಣಿ (ಶಿಗ್ಲಿ) ಮತ್ತಿತರರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಟಿಕೆಟ್‌ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್ ಕಮಿಟಿಯ ಸಭೆಯಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ನೀಡಬೇಕೆಂದು ಒಲವು ಮೂಡಿದ್ದರಿಂದ ಅವರಿಗೆ ಟಿಕೆಟ್ ಲಭಿಸುವುದು ಸ್ಪಷ್ಟವಾಗಿದ್ದಲ್ಲದೇ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಮೊದಲ ಹಂತದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯಲ್ಲೂ ಅವರ ಹೆಸರು ಅಂತಿಮಗೊಂಡಿದೆ. ಜೆಡಿಎಸ್ ಪಕ್ಷದಿಂದ ಮುಖಂಡರಾದ ಶೀವು ಲಮಾಣಿ, ಸುರೇಶ ನಂದೆಣ್ಣವರ, ಯಮ ನಪ್ಪ ಬೆಳಗಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ್ಕೆ ಜಿಲ್ಲಾಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ಸೇರಿದಂತೆ 3 ಜನರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ವಿಶ್ಲೇಷಣೆ: ಕಾಂಗ್ರೆಸ್‌ನ ಹಾಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಈ ಬಾರಿಯೂ ಕ್ಷೇತ್ರದ ಅಧಿಕಾರವನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರಕ್ಕೆ ಸುಮಾರು 3,479 ಕೋಟಿ ರೂ. ಅನುದಾನ ತಂದಿದ್ದು, ಅದರಲ್ಲಿ ಹೆಚ್ಚಿನದಾಗಿ ನೀರಾವರಿ ಕ್ಷೇತ್ರಕ್ಕೆ ಅನುಕೂಲವಾಗುವ ಚೆಕ್ ಡ್ಯಾಮ್ ಕಾಮಗಾರಿಗಳನ್ನೆ ಹೆಚ್ಚು ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಬಿಜೆಪಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ತಮ್ಮ ಅಧಿಕಾರದ ಅವಧಿಯಲ್ಲಿ ಸುಮಾರು 1,500 ಕೋಟಿ ರೂ. ಅನುದಾನ ನೀಡಿದ್ದಾರೆ. ರಾಮಣ್ಣ ಜನಸ್ನೇಹಿ, ಯಾವುದೇ ಸಾಮಾನ್ಯ ಕಾರ್ಯಕ್ರಮದಲ್ಲ್ಲೂ ಕಾಣಿಸಿಕೊಳ್ಳುತ್ತಾರೆ ಎಂದೆಲ್ಲ ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೂ ಪ್ರಾದೇಶಿಕ ಪಕ್ಷ ಗಳಾದ ಜೆಡಿಎಸ್, ನಮ್ಮ ಕಾಂಗ್ರೆಸ್ ಕ್ಷೇತ್ರದ ಗದ್ದುಗೆ ಏರಲು ಯಾವ ಅಭ್ಯರ್ಥಿ ಸೂಕ್ತ ಎಂಬೆಲ್ಲ ಲೆಕ್ಕಾಚಾರ ಹಾಕುತ್ತಿವೆ.

ನೇರ ಹಣಾಹಣಿ:  ಈ ಬಾರಿಯ ಚುನಾವಣೆಯ ಕಣದಲ್ಲಿ ಎರಡು ಪಕ್ಷಗಳು ಮಾತ್ರ ನೇರ ಜಿದ್ದಾ ಜಿದ್ದಿನ ಪೈಪೋಟಿ ನೀಡಲಿವೆ. ಕಳೆದ ಬಾರಿ ಬಿಜೆಪಿಯಿಂದ ಬಿಎಸ್‌ವೈ ಬೇರ್ಪಟ್ಟು ಕೆಜಿಪಿ ಪಕ್ಷ, ಬಿ.ಶ್ರೀರಾಮಲು ಬಿಎಸ್‌ಆರ್ ಪಕ್ಷ ಸ್ಥಾಪಿಸಿದ್ದರಿದ ರಾಮಣ್ಣ ಲಮಾಣಿ ಕೇವಲ 315 ಮತಗಳ ಅಂತರದಲ್ಲಿ ಸೋಲಬೇಕಾಯಿತು. ಈಗ ಕೆಜಿಪಿ, ಬಿಎಸ್‌ಆರ್ ಬಿಜೆಪಿಗೆ ವಿಲೀನವಾಗಿದ್ದರಿಂದ ಬಿಜೆಪಿಗೆ ಲಾಭ ಆಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಇನ್ನೊಂದೆಡೆ ಕ್ಷೇತ್ರಕ್ಕೆ ಬಹಳಷ್ಟು ಅನುದಾನವನ್ನು ರಾಜ್ಯದಿಂದ ತಂದಿದ್ದೇನೆ ಈ ಬಾರಿಯೂ ನಿಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿ ಎಂದು ಹಾಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಚುನಾವಣೆಯ ಪ್ರಚಾರವನ್ನು ಭರದಿಂದ ನಡೆಸಿದ್ದು, ಈ ಚುನಾವಣೆ ದೊಡ್ಡಮನಿಗೆ ದೊಡ್ಡ ಸವಾಲಾಗಿದೆ.

ಮತದಾರರ ಸಂಖ್ಯೆ: ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಕಳೆದ ಫೆಬ್ರುವರಿ-20ರಂದು ತಯಾರಿಸಲಾದ ಮತದಾರರ ಅಂತಿಮ ಪಟ್ಟಿಯಲ್ಲಿ ಪುರುಷರು-1,05,784 ಹಾಗೂ ಮಹಿಳೆಯರು-1,02,882 ಒಟ್ಟು 2,08,666 ಮತದಾರರಿದ್ದಾರೆ.

2013ರ ವಿಧಾನಸಭಾ ಚುನಾವಣೆಯ ಹಿನ್ನೋಟ

ರಾಮಕೃಷ್ಣ ದೊಡ್ಡಮನಿ (ಕಾಂಗ್ರೆಸ್)-44,738

ರಾಮಣ್ಣ ಲಮಾಣಿ (ಬಿಜೆಪಿ) -44,423

ಜಯಶ್ರೀ ಹಳ್ಳೆಪ್ಪನವರ (ಬಿಎಸ್‌ಆರ್)-26,791

ಗುರಪ್ಪ ವಡ್ಡರ (ಜೆಡಿಎಸ್) -5,520

ಶೋಭಾ ಲಮಾಣಿ (ಕೆಜೆಪಿ) -3,841

ಗೆಲುವಿನ ಅಂತರ ಕೇವಲ 315 ಮತಗಳು

ಶೇ. 71.88 %ಮತದಾನ

ಕ್ಷೇತ್ರದ ಇತಿಹಾಸ

ಈವರೆಗೆ ನಡೆದ ಒಟ್ಟು 13 ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 6ಬಾರಿ ಗೆಲುವಿನ ನಗೆ ಬೀರಿದೆ. 1957 ಕಾಂಗ್ರೆಸ್-ಲೀಲಾವತಿ ಮಾಗಡಿ, 1962 ಪಕ್ಷೇತರ-ಕೆ.ಎಸ್.ವೀರಯ್ಯ, 1967 ಪಕ್ಷೇತರ-ಎಸ್.ವಿ ಕಾಶಿಮಠ, 1972 ಕಾಂಗ್ರೆಸ್-ವಿ.ವಿ.ವಾಯಿ,1978-83 ಪಕ್ಷೇತರ -ಗೂಳಪ್ಪ ಉಪ್ಪನಾಳ, 1985 ಜನತಾ ಪಕ್ಷ-ಟಿ.ಬಿ.ಬಾಳಿಕಾಯಿ, 1989 ಕಾಂಗ್ರೆಸ್-ಎಸ್.ಎಮ್. ಪಾಟೀಲ್. 1994 ಜನತಾ ದಳ ಪಕ್ಷ- ಗಂಗಣ್ಣ ಮಹಂತ ಶೆಟ್ಟರ್, 1999,2004 ಕಾಂಗ್ರೆಸ್-ಜಿ.ಎಸ್. ಗಡ್ಡದೇವರಮಠ. ಕ್ಷೇತ್ರ ಪುನರ್ ವಿಂಗಡನೆಯಾದಾಗ ಪರಿಶಿಷ್ಟ ಜಾತಿ ಮೀಸಲಾತಿ ಮೊದಲ ಶಾಸಕ 2008 ಬಿಜೆಪಿ- ರಾಮಣ್ಣ ಲಮಾಣಿ, 2013-ಕಾಂಗ್ರೆಸ್ ರಾಮಕೃಷ್ಣ ದೊಡ್ಡಮನಿ.

Writer - ಕೆ ಎಮ್. ಪಾಟೀಲ

contributor

Editor - ಕೆ ಎಮ್. ಪಾಟೀಲ

contributor

Similar News