ಶೂದ್ರರ ಹುಟ್ಟನ್ನು ಅಪವಿತ್ರವೆಂದ ಮನುಧರ್ಮದ ನಿಷೇಧಕ್ಕೆ ಹೋರಾಟ ಅಗತ್ಯ: ಲೇಖಕಿ ಕಲೈ ಸೆಲ್ವಿ
ಬೆಂಗಳೂರು, ಎ.11: ಶೂದ್ರರ ಹುಟ್ಟನ್ನೆ ಅಪವಿತ್ರವೆನ್ನುವ ಮೂಲಕ ಶಿಕ್ಷಣ ಸೇರಿದಂತೆ ಮೂಲಭೂತ ಹಕ್ಕುಗಳಿಂದ ವಂಚಿಸಿದ್ದ ಮನುಧರ್ಮದ ನಿಷೇಧಕ್ಕೆ ದಲಿತ ಹಾಗೂ ಹಿಂದುಳಿದ ಸಮುದಾಯ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಲೇಖಕಿ ಕಲೈ ಸೆಲ್ವಿ ತಿಳಿಸಿದ್ದಾರೆ.
ಬುಧವಾರ ದಲಿತ ಸಂಘರ್ಷ ಸಮಿತಿ ನಗರದ ಗಾಂಧಿ ಭವನದಲ್ಲಿ ಜ್ಯೋತಿಬಾ ಫುಲೆ 191ನೆ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜ್ಞಾನ ಪ್ರಸಾರ ಐಕ್ಯತಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡುವವರ, ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡುವವರ ವಿರುದ್ಧ ಪ್ರತಿಭಟನೆ ಮಾಡುವುದು ಸರಿ. ಆದರೆ, ದಲಿತ ಹಾಗೂ ಹಿಂದುಳಿದ ಸಮುದಾಯದ ಹುಟ್ಟನ್ನೆ ಅಪವಿತ್ರಗೊಳಿಸಿ, ವಿದ್ಯೆ, ಆಸ್ತಿ ನೀಡದೆ ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣುತ್ತಿರುವ ಮನುಧರ್ಮದ ವಿರುದ್ಧ ಯಾಕೆ ಹೋರಾಟ ಮಾಡುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತಿಸಿ, ಮನುಧರ್ಮದ ನಿಷೇಧವಾಗುವವರೆಗೆ ನಿರಂತರವಾದ ಹೋರಾಟ ಮಾಡಲು ಸಜ್ಜಾಗಬೇಕಾಗಿದೆ ಎಂದು ಅವರು ಹೇಳಿದರು.
ಮಾನವೀಯತೆಗಾಗಿ ಹಗಲಿರುಳು ಶ್ರಮಿಸಿದ ಬಸವಣ್ಣ, ಸರ್ವಜ್ಞನ ಕುರಿತು ಪಕ್ಕದ ತಮಿಳುನಾಡಿಗೆ ಗೊತ್ತಾಗುವುದಿಲ್ಲ. ತಮಿಳುನಾಡಿನ ಸಾಮಾಜಿಕ ಹೋರಾಟಗಾರಾದ ಪೆರಿಯಾರ್ ಕರ್ನಾಟಕದ ಜನತೆಗೆ ತಿಳಿಯುವುದಿಲ್ಲ. ಆದರೆ, ಯಾವತ್ತೂ ನಮ್ಮ ಬದುಕಿಗೆ ಅಗತ್ಯವೆ ಇಲ್ಲದ ರಾಮಾಯಣದ ವಾಲ್ಮೀಕಿ, ತುಳಸಿದಾಸರು ಯಾರೆಂದು ಗೊತ್ತು. ಅಷ್ಟರ ಮಟ್ಟಿಗೆ ಮಾನವತಾವಾದಿಗಳ, ಸಮಾಜಮುಖಿ ಚಿಂತಕರ ಬದುಕನ್ನು ಜನಸಾಮಾನ್ಯರಿಂದ ದೂರವಿಡುವಂತಹ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಅವರು ವಿಷಾದಿಸಿದರು.
ಮನುವಾದಿ ದೇವರುಗಳಾದ ರಾಮ, ಕೃಷ್ಣ, ಸರಸ್ವತಿ, ಲಕ್ಷ್ಮಿ ಗೊತ್ತಿರುತ್ತಾರೆ. ಇವರ ಫೋಟೋಗಳನ್ನು ನಮ್ಮ ಮನೆಗಳಲ್ಲಿ ಹಾಕಿಕೊಂಡು ಪೂಜಿಸುತ್ತೇವೆ. ಆದರೆ, ನಮಗೆ ಶಿಕ್ಷಣ ನೀಡಿದ, ಆಸ್ತಿಯ ಹಕ್ಕನ್ನು ದಯಪಾಲಿಸುವ ಮೂಲಕ ಘನತೆಯ ಬದುಕನ್ನು ನಡೆಸಲು ಅವಕಾಶ ಮಾಡಿಕೊಟ್ಟ ಜ್ಯೋತಿಬಾ ಫುಲೆ, ಸಾವಿತ್ರಿಬಾ ಫುಲೆ ನಮಗೆ ಗೊತ್ತಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾಜಿಕ ಹೋರಾಟಗಾರರ ಕುರಿತು ಎಲ್ಲಿಯೂ ದಾಖಲಿಸುವುದಿಲ್ಲ. ಆದರೂ ಸಂಘ ಸಂಸ್ಥೆಗಳು ನಮ್ಮ ನಾಯಕರ ಕುರಿತು ನಿರಂತರವಾಗಿ ಪರಿಚಯಿಸುವಂತಹ ಕೆಲಸ ಮಾಡುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಮಾರಪ್ಪ, ಹಿರಿಯ ವಕೀಲ ವಿಜಯ್‌ಕುಮಾರ್, ದಸಂಸ ಗೌರವಾಧ್ಯಕ್ಷ ಕೆ.ತಮ್ಮಯ್ಯ, ಸಂಚಾಲಕ ರಮೇಶ್, ನವೀನ್‌ಕುಮಾರ್ ಮತ್ತಿತರರಿದ್ದರು.
ದಲಿತರಿಗೆ ಬಾಡಿಗೆ ಮನೆ ಸಿಗುವುದಿಲ್ಲ
ನಗರಗಳಲ್ಲಿ ವಿದ್ಯಾವಂತರಿದ್ದಾರೆ. ಇಲ್ಲಿ ಜಾತಿ ವ್ಯವಸ್ಥೆ ಇಲ್ಲವೆಂದು ಹೇಳುವವರಿದ್ದಾರೆ. ಆದರೆ, ಇಂದಿಗೂ ಬೆಂಗಳೂರಿನಲ್ಲಿ ದಲಿತರಿಗೆ ಬಾಡಿಗೆ ಮನೆ ಸಿಗುವುದಿಲ್ಲ. ಮನೆ ಎದುರಿಗೆ ಸಸ್ಯಾಹಾರಿಗಳಿಗೆ ಮಾತ್ರ ಬಾಡಿಗೆ ಮನೆ ಕೊಡಲಾಗುವುದು ಎಂದು ನಾಮಫಲಕ ಹಾಕಿರುತ್ತಾರೆ.
-ಕಲೈ ಸೆಲ್ವಿ, ಲೇಖಕಿ