ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಕಾಲೇಜ್ ಪ್ರಥಮ ದರ್ಜೆ ಸಹಾಯಕ

Update: 2018-04-11 16:15 GMT

ಬೆಂಗಳೂರು, ಎ.11: ವ್ಯಕ್ತಿಯೊಬ್ಬರಿಗೆ ಉದ್ಯೋಗ ನೀಡಲು ಕಾಲೇಜಿನ ಪ್ರಥಮ ದರ್ಜೆ ಸಹಾಯಕನೊಬ್ಬ ಬರೋಬ್ಬರಿ 2.75 ಲಕ್ಷ ರೂ. ಲಂಚ ಕೇಳಿದ್ದು, ಈ ಸಂಬಂಧ ಎಸಿಬಿ ಬಲೆಗೆ ಬಿದ್ದಿದ್ದಾರೆ.

ನಗರದ ಪಿವಿಪಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಎಚ್.ಪ್ರಕಾಶ್ ಲಂಚ ಕೇಳಿದ ಆರೋಪಿಯಾಗಿದ್ದು, ಪ್ರಕರಣ ಸಂಬಂಧ ಇವರ ವಿರುದ್ಧ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಎಸಿಬಿ ತಿಳಿಸಿದೆ.

ಏನಿದು ಪ್ರಕರಣ: ನಗರದ ಕೋನೆ ಮಲ್ಲತ್ತಹಳ್ಳಿ ನಿವಾಸಿ ಎಂ.ಎನ್.ಶ್ರೀನಿವಾಸ್ ಅವರು ಪಿ.ವಿ.ಪಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅನುದಾನಿತ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವೈಯುಕ್ತಿಕ ಕಾರಣಗಳಿಂದ ರಜೆ ಪಡೆದಿದ್ದರು. ನಂತರ ಎರಡು ವರ್ಷಗಳಿಂದ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ.
ಬಳಿಕ ಕೆಲಸಕ್ಕೆ ವಾಪಸ್ಸು ಸೇರುವ ಬಗ್ಗೆ ಕಾಲೇಜಿನ ಎಚ್.ಪ್ರಕಾಶ್ ಅವರನ್ನು ಭೇಟಿಯಾಗಿದ್ದರು. ಆದರೆ, ಕೆಲಸಕ್ಕೆ ವಾಪಸ್ಸು ತೆಗೆದುಕೊಳ್ಳಲು ಸಂಬಂಧಪಟ್ಟವರ ಬಳಿ ಮಾತನಾಡಲು 2.75 ಲಕ್ಷ ರೂ. ಲಂಚದ ಹಣಕ್ಕಾಗಿ ಒತ್ತಡ ಹಾಕಿದ್ದಾರೆ ಎಂದು ದೂರು ನೀಡಲಾಗಿತ್ತು.

ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಲಂಚದ ಹಣವನ್ನು ವಶಕ್ಕೆ ಪಡೆದು ಆರೋಪಿ ಎಚ್.ಪ್ರಕಾಶ್ ವಿರುದ್ಧ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News