ಬೆಂಗಳೂರು: ಸರ ಕಳ್ಳತನ ಮಾಡುತ್ತಿದ್ದ ಬಾವರಿಯಾ ಗುಂಪಿನ ಸದಸ್ಯನಿಗೆ ಗುಂಡೇಟು

Update: 2018-04-11 16:18 GMT

ಬೆಂಗಳೂರು, ಎ.11: ಒಂಟಿ ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಬೈಕ್‌ನಲ್ಲಿ ಬಂದು ಕ್ಷಣಮಾತ್ರದಲ್ಲಿ ಸರ ಕಸಿದು ಪರಾರಿಯಾಗುತ್ತಿದ್ದ ಬಾವರಿಯಾ ಗುಂಪಿನ ಸದಸ್ಯನೊಬ್ಬನಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶ ಮೂಲದ ಬಾವರಿಯಾ ಗುಂಪಿನ ರಾಮ್‌ಸಿಂಗ್(35) ಬಂಧಿತ ಆರೋಪಿ ಎಂದು ಉತ್ತರ ವಿಭಾಗದ ಪೊಲೀಸರು ತಿಳಿಸಿದ್ದು, ಮತ್ತೊಬ್ಬ ಆರೋಪಿಗಾಗಿ ತನಿಖೆ ಮುಂದುವರೆಸಲಾಗಿದೆ.

ಪ್ರಕರಣದ ವಿವರ: ಪಂಜಾಬ್ ನೋಂದಣಿಯ ಬೈಕ್‌ನಲ್ಲಿ ಬರುವ ಬಾವರಿಯಾ ಗುಂಪಿನ ಸದಸ್ಯರು ಸರ ಅಪಹರಣ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಪುರ ಕ್ರಾಸ್ ಬಳಿ ಮಂಗಳವಾರ ಮಧ್ಯಾಹ್ನ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.

ಪಂಜಾಬ್ ನೋಂದಣಿಯ ಬಜಾಜ್ ಬೈಕ್ ಬಂದಾಗ ಆರೋಪಿಗಳ ಚಹರೆ ಪತ್ತೆಹಚ್ಚಿದ ಪೇದೆಗಳಾದ ಬಿರಾದಾರ ಮತ್ತು ಇಮಾಮ್‌ಸಾಬ್ ಕರಿಕುಟ್ಟಿ ಅವರು ಬೈಕ್ ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಬೈಕ್‌ಅನ್ನು ಸ್ಥಳದಲ್ಲೇ ಬಿಟ್ಟು ಪೊಲೀಸರ ಮೇಲೆ ಚಾಕುನಿಂದ ಕುತ್ತಿಗೆಗೆ ಇರಿದು ಪರಾರಿಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ವಿಶೇಷ ತಂಡ ಇಡೀ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಕೈಗೊಂಡಿತ್ತು.

ತಡರಾತ್ರಿ ಸಮಯದಲ್ಲಿ ಸೋಮಶೆಟ್ಟಿಹಳ್ಳಿ ಸಮೀಪದ ಕೆರೆಗುಡ್ಡದಹಳ್ಳಿ ಕಾಡಿನಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಗುರುತಿಸಿ ಆತನನ್ನು ಹಿಡಿಯಲು ಮುಂದಾದ ಪೇದೆ ಇಮಾಮ್‌ಸಾಬ್ ಕರಿಕುಟ್ಟಿ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾದಾಗ ಸಮಯ ಪ್ರಜ್ಞೆ ಮೆರೆದ ನಂದಿನಿ ಲೇಔಟ್ ಪಿಎಸ್ಸೈ ಸೋಮಶೇಖರ್ ಅವರು ಶರಣಾಗುವಂತೆ ಎಚ್ಚರಿಕೆ ನೀಡಿ ಗುಂಡು ಹಾರಿಸಿದರು.

ಗುಂಡೇಟಿನಿಂದ ರಾಮ್‌ಸಿಂಗ್‌ನ ಬಲಗಾಲು ಮತ್ತು ಬಲಗೈಗೆ ಗಾಯಗಳಾಗಿವೆ. ಆತನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿಯ ಹಲ್ಲೆಯಿಂದ ಗಾಯಗೊಂಡಿರುವ ಇಬ್ಬರು ಪೇದೆಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್ಸೈ ಸೋಮಶೇಖರ್ ನೀಡಿದ ದೂರಿನ ಮೇರೆಗೆ ರಾಮ್‌ಸಿಂಗ್ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News