ಕೊಹ್ಲಿ, ಮಿಥಾಲಿ ವಿಸ್ಡನ್ ಅಗ್ರ ಕ್ರಿಕೆಟಿಗರು

Update: 2018-04-11 18:48 GMT

ಹೊಸದಿಲ್ಲಿ, ಎ.11: ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಕ್ರಮವಾಗಿ ವಿಸ್ಡನ್ ವಿಶ್ವದ ಪ್ರಮುಖ ಆಟಗಾರ ಹಾಗೂ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿಶ್ವಕಪ್ ವಿಜೇತ ಮಹಿಳಾ ತಂಡದ ಸದಸ್ಯೆಯರಾದ ಹೀದರ್ ನೈಟ್, ನಟಾಲೀ ಹಾಗೂ ಆ್ಯನಿ ಶೃಬ್‌ಸೋಲ್ ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯಂತ ಯಶಸ್ವಿ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಾಗಿ ಹೊರಹೊಮ್ಮಿದ ಕೊಹ್ಲಿ ಸತತ ಎರಡನೇ ವರ್ಷ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದರು.

ಕೊಹ್ಲಿ 2017ರ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 2,818 ರನ್ ಗಳಿಸಿದ್ದಾರೆ. ಕಳೆದ ವರ್ಷ ಮಹಿಳಾ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ ತಂಡದ ನಾಯಕಿಯಾಗಿದ್ದ ಮಿಥಾಲಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ ಸಾಧನೆಯನ್ನು ಶ್ಲಾಘಿಸಿದ ವಿಸ್ಡನ್ ಸಂಪಾದಕ ಲಾರೆನ್ಸ್ ಬೂತ್,‘‘ಕೊಹ್ಲಿ ಬಾರಿಸಿದ 5 ಟೆಸ್ಟ್ ಶತಕಗಳ ಪೈಕಿ ಎರಡು ದ್ವಿಶತಕವಾಗಿತ್ತು. ಎರಡು ಬಾರಿ ಔಟಾಗದೆ ಉಳಿದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ 1,460 ರನ್ ಸಾಧನೆಯನ್ನು ಯಾರಿಗೂ ಸರಿಗಟ್ಟಲು ಸಾಧ್ಯವಿಲ್ಲ’’ ಎಂದರು.

ಮಿಥಾಲಿ ರಾಜ್‌ರನ್ನು ಪ್ರಶಂಶಿಸಿದ ಲಾರೆನ್ಸ್ ಬೂತ್,‘‘ವಿಶ್ವ ಕ್ರಿಕೆಟ್‌ನ ಮುಂಚೂಣಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಎನಿಸಿಕೊಳ್ಳುವ ಮೂಲಕ ಮಿಥಾಲಿರಾಜ್ ಭಾರತೀಯರಿಗೆ ಹೆಮ್ಮೆ ತಂದಿದ್ದಾರೆ. ವಿಶ್ವಕಪ್ ವೇಳೆ ತನ್ನ ತಂಡದ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಿದ್ದ ಅವರು ಮಹಿಳಾ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ್ದಾರೆ. ಸತತ 7 ಅರ್ಧಶತಕಗಳನ್ನು ಸಿಡಿಸಿರುವುದು ಮತ್ತೊಂದು ದಾಖಲೆಯಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News