ಅಜ್ಮಾನ್: ‘ತುಂಬೆ ಡೆಂಟಲ್ ಹಾಸ್ಪಿಟಲ್’ ಶುಭಾರಂಭ

Update: 2018-04-12 04:55 GMT

ಅಜ್ಮಾನ್, ಎ.12: ಅಜ್ಮಾನ್‌ನ ಪ್ರಪ್ರಥಮ ಖಾಸಗಿ ದಂತ ವೈದ್ಯಕೀಯ ಆಸ್ಪತ್ರೆಯೆನಿಸಿರುವ ‘ತುಂಬೆ ಡೆಂಟಲ್ ಹಾಸ್ಪಿಟಲ್’ ಮಂಗಳವಾರ ಇಲ್ಲಿನ ಅಲ್‌ಜುರ್ಫ್‌ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿ ಶುಭಾರಂಭಗೊಂಡಿತು.

ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೊಸ್ಸಾಂ ಹಮ್ದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಂಬೆ ಗ್ರೂಪ್‌ನ ಆರೋಗ್ಯಪಾಲನೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಹಾಗೂ ತುಂಬೆ ಗ್ರೂಪ್‌ನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

37 ಸಾವಿರ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮೂರು ಅಂತಸ್ತಿನ ಈ ಆಸ್ಪತ್ರೆ 60 ಡೆಂಟಲ್ ಚೆಯರ್‌ಗಳನ್ನು ಹೊಂದಿದೆ. ಇದು ಮಧ್ಯಪ್ರಾಚ್ಯದ ಅತಿ ದೊಡ್ಡ ಖಾಸಗಿ ದಂತ ವೈದ್ಯಕೀಯ ಆಸ್ಪತ್ರೆಯಾಗಿದೆ.

ಅತ್ಯಂತ ದಕ್ಷ ಹಾಗೂ ಅರ್ಹ ವೈದ್ಯಕೀಯ ತಜ್ಞರನ್ನು ಹೊಂದಿರುವ ತುಂಬೆ ಡೆಂಟಲ್ ಹಾಸ್ಪಿಟಲ್ ಅತ್ಯಂತ ಮಿತ ದರದಲ್ಲಿ ಚಿಕಿತ್ಸಾರ್ಥಿಗಳಿಗೆ ಉನ್ನತಮಟ್ಟದ ದಂತ ವೈದ್ಯಕೀಯ ಸೇವೆಯನ್ನು ಒದಗಿಸಲಿದೆ. 25 ವಿವಿಧ ರಾಷ್ಟ್ರೀಯತೆಗಳ ಶುಶ್ರೂಷಕರ ತಂಡ ಕೂಡಾ ಇಲ್ಲಿದ್ದು, ರೋಗಿಗಳೊಂದಿಗೆ 50 ವಿಭಿನ್ನ ಭಾಷೆಗಳಲ್ಲಿ ಸಂಭಾಷಿಸುವ ಸಾಮರ್ಥ್ಯ ಹೊಂದಿದೆ.

ಈ ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಹಾಗೂ ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯದ ದಂತ ವೈದ್ಯಕೀಯ ಕಾಲೇಜಿನ ಪ್ರಸ್ತಾವಿತ ಸ್ನಾತಕೋತ್ತರ ಕೋರ್ಸ್‌ಗಳಿಗೂ ತರಬೇತಿ ನೀಡಲಿದೆ.

ಆಸ್ಪತ್ರೆಯಲ್ಲಿ ಸಾಮಾನ್ಯ ದಂತ ಚಿಕಿತ್ಸೆಯ ಜೊತೆಗೆ ಎಂಡೊಡೊಂಟಿಕ್ಸ್, ಪಿರೀಯಡೊಂಟಿಕ್ಸ್, ಕಾಸ್ಮೆಟಿಕ್ ಡೆಂಟಿಸ್ಟ್ರಿ, ಓರಲ್ ಸರ್ಜರಿ ಮತ್ತಿತರ ಅತ್ಯಾಧುನಿಕ ಹಾಗೂ ಸಂಕೀರ್ಣವಾದ ಚಿಕಿತ್ಸೆಗಳನ್ನೂ ನೀಡಲಿದೆ. ದಂತದ ಕಾಯಿಲೆಗಳಿಗೆ ಸ್ಟೆಮ್ ಸೆಲ್ ಚಿಕಿತ್ಸಾ ವಿಭಾಗವನ್ನೂ ಆರಂಭಿಸುವ ಯೋಜನೆಯನ್ನೂ ಆಸ್ಪತ್ರೆ ಹೊಂದಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News