ಸುಶೀಲ್ ಕುಮಾರ್‌ಗೆ ‘ಹ್ಯಾಟ್ರಿಕ್’ ಕಾಮನ್‌ವೆಲ್ತ್ ಗೋಲ್ಡ್

Update: 2018-04-12 09:34 GMT

ಗೋಲ್ಡ್‌ಕೋಸ್ಟ್, ಎ.12: ಭಾರತದ ಹಿರಿಯ ಕುಸ್ತಿಪಟು ಸುಶೀಲ್‌ಕುಮಾರ್ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್‌ನಲ್ಲಿ ‘ಹ್ಯಾಟ್ರಿಕ್’ ಚಿನ್ನ ಜಯಿಸಿದ ಸಾಧನೆ ಮಾಡಿದ್ದಾರೆ.

 2010ರ ದಿಲ್ಲಿ ಗೇಮ್ಸ್, 2014ರ ಗ್ಲಾಸ್ಗೋ ಗೇಮ್ಸ್‌ನಲ್ಲೂ ಚಿನ್ನ ಜಯಿಸಿದ್ದ ಸುಶೀಲ್ ಈಗ ಹ್ಯಾಟ್ರಿಕ್ ಪೂರೈಸಿದ್ದಾರೆ. ಇದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನ ಅತ್ಯಂತ ಯಶಸ್ವಿ ಕುಸ್ತಿಪಟುವಾಗಿ ಹೊರಹೊಮ್ಮಿದರು.

ಭಾರತ 8ನೇ ದಿನವಾದ ಗುರುವಾರ ಕುಸ್ತಿ ವಿಭಾಗವೊಂದರಲ್ಲಿ ನಾಲ್ಕನೇ ಪದಕವನ್ನು ಬಾಚಿಕೊಂಡಿದೆ.

ಫೈನಲ್ ಸುತ್ತಿನ ಕುಸ್ತಿ ಪಂದ್ಯದಲ್ಲಿ ಸುಶೀಲ್ ಅವರು ಎದುರಾಳಿ ದಕ್ಷಿಣ ಆಫ್ರಿಕದ ಜೊಹಾನ್ಸ್ ಬೋಥಾ ವಿರುದ್ಧ ಆರಂಭದಲ್ಲೇ 10-0 ಮುನ್ನಡೆ ಸಾಧಿಸಿ ಎದುರಾಳಿಗೆ ಹೋರಾಡಲು ಅವಕಾಶವನ್ನೇ ನೀಡಲಿಲ್ಲ. ಬೋಥಾಗೆ ಒಂದೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಟೆಕ್ನಿಕಲ್ ಶ್ರೇಷ್ಠತೆ ಆಧಾರದಲ್ಲಿ ಸುಶೀಲ್ ವಿಜಯಿ ಎಂದು ಘೋಷಿಸಲ್ಪಟ್ಟರು. 34ರ ಹರೆಯದ ಸುಶೀಲ್ ಕೇವಲ 80 ಸೆಕೆಂಡ್‌ನಲ್ಲಿ ಗೆಲುವಿನ ನಗೆ ಬೀರಿದರು.

ಇಂದು ಸುಶೀಲ್ ಭಾರತಕ್ಕೆ ಕುಸ್ತಿಯಲ್ಲಿ ಎರಡನೇ ಚಿನ್ನ ಗೆದ್ದುಕೊಟ್ಟರು. ಇದಕ್ಕೆ ಮೊದಲು ರಾಹುಲ್ ಅವಾರೆ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ಬಬಿತಾ ಕುಮಾರಿ ಹಾಗೂ ಕಿರಣ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದಾರೆ.

ಸುಶೀಲ್ ಕುಮಾರ್ ಹ್ಯಾಟ್ರಿಕ್ ಚಿನ್ನದ ಸಾಧನೆಯನ್ನು ಹೆತ್ತವರು ಹಾಗೂ ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡ ಶಾಲಾ ಮಕ್ಕಳಿಗೆ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News