ಉಪವಾಸದ ನಾಟಕ ಬಿಟ್ಟು ಅಧಿಕಾರದಿಂದ ಸನ್ಯಾಸತ್ವ ಸ್ವೀಕರಿಸಿ: ಮೋದಿ, ಅಮಿತ್ ಶಾಗೆ ಸುರ್ಜೇವಾಲ ತಿರುಗೇಟು

Update: 2018-04-12 13:44 GMT

ಬೆಂಗಳೂರು, ಎ.11: ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಕಲಿ ಉಪವಾಸದ ನಾಟಕವನ್ನು ಬಿಟ್ಟು 2019ರ ಲೋಕಸಭಾ ಚುನಾವಣೆಯಲ್ಲಿ ಶಾಶ್ವತವಾಗಿ ಅಧಿಕಾರದಿಂದ ಸನ್ಯಾಸತ್ವ ಸ್ವೀಕರಿಸಲು ಸಿದ್ಧರಾಗಲಿ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್‌ಸಿಂಗ್ ಸುರ್ಜೇವಾಲ ತಿರುಗೇಟು ನೀಡಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಭಯದಿಂದ ಬಿಜೆಪಿ ನಾಯಕರು ಸುದ್ದಿ ಮಾಧ್ಯಮಗಳ ಗಮನ ಸೆಳೆಯಲು ಉಪವಾಸ ಕೂರುವ ಹೊಸ ನಾಟಕ ಆರಂಭಿಸಿದ್ದಾರೆ. ಆದರೆ, ಇದಕ್ಕೆ ಸಂಸತ್ತು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಪಕ್ಷವು ಈ ಹಿಂದೆ ಒಟ್ಟು ಲೋಕಸಭೆ ಕಾರ್ಯಾವಧಿಯ ಶೇ.66.68 ರಷ್ಟು ಅವಧಿಯನ್ನು (2009-14), ಸದನದ 250 ಗಂಟೆಗಳನ್ನು ಮತ್ತು ಬಜೆಟ್‌ನ ಅವಧಿಯಲ್ಲಿ ಬಹಳಷ್ಟು ಅಡೆತಡೆಗಳನ್ನು ಉಂಟು ಮಾಡಿತ್ತು. ಈ ಕುರಿತು ಮೋದಿ ಸರಕಾರ ಹಾಗೂ ಬಿಜೆಪಿ ಪಕ್ಷ ಸಾರ್ವಜನಿಕರ ಎದುರು ಬಹಿರಂಗ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಸರಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು, 63,690 ಕೋಟಿ ರೂ.ಗಳ ಬ್ಯಾಂಕ್ ಲೂಟಿ ಹಗರಣವನ್ನು ಪ್ರಸ್ತಾಪಿಸಲು ಅವಕಾಶ ನೀಡಿಲ್ಲ. ಸಾವಿರಾರು ಕೋಟಿ ರೂ.ಗಳನ್ನು ವಂಚಿಸಿ ನರೇಂದ್ರಮೋದಿಯ ಮೂಗಿನ ಕೆಳಗೆ ನೀರವ್ ಮೋದಿ, ಚೋಕ್ಸಿ, ಜತಿನ್ ಮೆಹ್ತಾ ಹೇಗೆ ದೇಶ ಬಿಟ್ಟು ಓಡಿ ಹೋದರು ಎಂಬುದಕ್ಕೆ ಬಿಜೆಪಿಯವರು ಈವರೆಗೆ ಉತ್ತರಿಸಲಿಲ್ಲ ಎಂದು ರಣದೀಪ್‌ಸಿಂಗ್ ಹೇಳಿದರು.

ರಫೆಲ್ ಯುದ್ಧ ವಿಮಾನಗಳನ್ನು 58 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ನೀಡಿ ಖರೀದಿಸಿದ್ದು ಏಕೆ? ಈ ಯೋಜನೆಯನ್ನು ಬೆಂಗಳೂರಿನ ಪ್ರತಿಷ್ಠಿತ ಎಚ್‌ಎಎಲ್‌ನಿಂದ ಹಿಂಪಡೆದದ್ದು ಏಕೆ? ಎಂಬುದಕ್ಕೆ ಬಿಜೆಪಿಯವರು ಉತ್ತರ ನೀಡಿಲ್ಲ. ಎರಡು ಕೋಟಿ ಯುವಕರ ಭವಿಷ್ಯಕ್ಕೆ ಮಾರಕವಾದ ಎಸ್‌ಎಸ್‌ಸಿ ಹಗರಣದ ಪರಿಹಾರದ ಬಗ್ಗೆ ಕಿಂಚಿತ್ ಧ್ವನಿಯನ್ನು ಬಿಜೆಪಿಯವರು ಎತ್ತಲಿಲ್ಲ ಎಂದು ಅವರು ಆರೋಪಿಸಿದರು.

24 ಲಕ್ಷ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಬಹಿರಂಗ ಹಗರಣದ ಬಗ್ಗೆ ಬಿಜೆಪಿ ಸ್ಪಂದಿಸಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಎಸ್ಸಿ-ಎಸ್ಟಿ ಕಾಯ್ದೆಗೆ ಬಿಜೆಪಿಯವರು ಬೆಂಬಲ ನೀಡಿದ್ದು, ಅದರ ಹಿಂದಿನ ಪಿತೂರಿಯ ಬಗ್ಗೆ ದನಿ ಎತ್ತಲಿಲ್ಲ ಎಂದು ರಣದೀಪ್‌ಸಿಂಗ್ ಹೇಳಿದರು.

15ನೆ ಹಣಕಾಸು ಆಯೋಗದಿಂದ ದಕ್ಷಿಣದ ರಾಜ್ಯಗಳಿಗೆ ಬಿಜೆಪಿಯಿಂದ ಉಂಟಾದ ಅನ್ಯಾಯದ ಬಗ್ಗೆ ಇವರು ಪ್ರತಿಭಟಿಸಲಿಲ್ಲ. ಆಂಧ್ರಪ್ರದೇಶ, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿ ಅದನ್ನು ಕಡೆಗಣಿಸಿದರು. ರಾಜ್ಯದ ಮಹದಾಯಿ ನದಿ ನೀರಿನ ಹಂಚಿಕೆ ಕುರಿತಂತೆ ಇಲ್ಲಿಯವರೆಗೂ ಯಾವುದೆ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ದೂರಿದರು.

ಬಿಜೆಪಿ ಆಡಳಿತವಿರುವ ಗೋವಾ ರಾಜ್ಯದ ಸಚಿವ ವಿನೋದ್ ಪಾಲೇಕರ್ ಕನ್ನಡಿಗರನ್ನು ಅಪಮಾನಿಸಿದಾಗ ಅದರ ಬಗ್ಗೆ ಇವರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. 300 ಮಂದಿ ಲೋಕಸಭಾ ಸದಸ್ಯರನ್ನು ಹೊಂದಿರುವ ಬಿಜೆಪಿಯು ತನ್ನ ಅವಧಿಯಲ್ಲಿ ಶೇ.1ರಷ್ಟು ಕೆಲಸವನ್ನು ಮಾಡಿಲ್ಲ. ತಮ್ಮ ಅವಧಿಯಲ್ಲಿ ಶೇ.6ರಷ್ಟು ಕೆಲಸ ಮಾಡಿದ ರಾಜ್ಯಸಭೆಗೂ ಕೆಲಸ ಮಾಡಲು ಬಿಟ್ಟಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಸ್ಥಾನದ ಮೌಲ್ಯವನ್ನು ನರೇಂದ್ರಮೋದಿ ಕಳೆದಿದ್ದಾರೆ. ಕೇಂದ್ರ ಸರಕಾರಕ್ಕೆ ಜವಾಬ್ದಾರಿ ಪ್ರಜ್ಞೆ ಹೊರಟು ಹೋಗಿದೆ. ಇದಲ್ಲದೆ, ಸರಕಾರದ ನಿರ್ದೇಶನ ಮತ್ತು ಉದ್ದೇಶ ಎರಡು ದಾರಿ ತಪ್ಪಿದೆ. ಮೋದಿ ಹಾಗೂ ಅಮಿತ್ ಶಾ ನೀಡಿರುವ ಸುಳ್ಳಿನ ಭರವಸೆಗಳು ಬಯಲಾದಂತೆಲ್ಲ ಇವರ ಹಡಗಿನಿಂದ ಒಬ್ಬೊಬ್ಬರೆ ಹೊರಗೆ ಜಿಗಿಯುತ್ತಿದ್ದಾರೆ ಎಂದು ರಣದೀಪ್‌ಸಿಂಗ್ ಹೇಳಿದರು.

ಬಿಜೆಪಿಯು ತನ್ನ ಹಳೆಯ ಒಡೆದು ಆಳುವ ನೀತಿಗೆ ಮತ್ತೆ ವಾಪಸ್ ಬಂದಿದೆ. ಧರ್ಮ, ಜಾತಿ, ಸಮುದಾಯ, ಭಾಷೆ, ದಕ್ಷಿಣ-ಉತ್ತರ, ಪೂರ್ವ-ಪಶ್ಚಿಮ, ಚರ್ಮ ಮತ್ತು ಬಣ್ಣ, ಆಹಾರ ಪದ್ಧತಿ, ಸಂಸ್ಕೃತಿ-ಸಂಪ್ರದಾಯ, ಲಿಂಗ, ಮುಂದುವರೆದವರು- ಹಿಂದುಳಿದವರು, ದಲಿತರು-ದಲಿತೇತರರು, ಆದಿವಾಸಿಗಳು-ಆದಿವಾಸಿಯೇತರರು ಎನ್ನುವ ಮೂಲಕ ವಿಭಜನೆಯನ್ನು ಮಾಡಲು ಆರಂಭಿಸಿದ್ದಾರೆ ಎಂದು ಅವರು ದೂರಿದರು.

ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಎಲ್ಲ ಬಿಜೆಪಿಯ ಮುಖಂಡರ ನಕಲಿ ಉಪವಾಸದ ಸಮಯ ಮುಗಿದಿದೆ. ನೀವು ಅಧಿಕಾರವನ್ನು ಕಳೆದುಕೊಂಡು ಸನ್ಯಾಸತ್ವ ಸ್ವೀಕರಿಸಿ 2019ಕ್ಕೆ ಶಾಶ್ವತವಾಗಿ ಉಪವಾಸ ಮತ್ತು ಧ್ಯಾನವನ್ನು ಮಾಡಲು ಹೊರಡುವ ಸಂದರ್ಭ ಬಂದಿದೆ.
-ರಣದೀಪ್‌ಸಿಂಗ್ ಸುರ್ಜೇವಾಲ, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News