ಬೆಂಗಳೂರು: ನಗರದಾದ್ಯಂತ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆ
ಬೆಂಗಳೂರು, ಎ.12: ದಟ್ಟ ಮೋಡಗಳು ಸಾಲುಗಟ್ಟಿರುವುದರಿಂದಾಗಿ ನಗರದಾದ್ಯಂತ ಮತ್ತೆ 2 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ತಾಪಮಾನ ಹೆಚ್ಚಿದ್ದು ಮಳೆಯಾಗುವ ಸಾಧ್ಯತೆ ಇದೆ. ಕಳೆದ ಸಾಲಿನಲ್ಲಿ 36 ರಿಂದ 39 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಈ ವರ್ಷ ಎಪ್ರಿಲ್ 2ನೇ ವಾರದಲ್ಲೂ ಸಹ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಟಿಲ್ಲ. ಗುರುವಾರ ನಗರದಲ್ಲಿ ಗರಿಷ್ಠ ತಾಪಮಾನ 33.3ಡಿಗ್ರಿ ಸೆಲ್ಸಿಯಸ್, ಕನಿಷ್ಟ 21.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನುಳಿದಂತೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗರಿಷ್ಠ 33ಡಿಗ್ರಿ ಸೆಲ್ಸಿಯಸ್, ಕನಿಷ್ಟ 21.4ಡಿಗ್ರಿ ಸೆಲ್ಸಿಯಸ್, ಎಚ್.ಎ.ಎಲ್‌ನಲ್ಲಿ ಗರಿಷ್ಠ 32.8 ಡಿಗ್ರಿ ಸೆಲ್ಸಿಯಸ್, ಕನಿಷ್ಟ 21.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ 48 ಗಂಟೆಯೊಳಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, 2 ದಿನಗಳ ಕಾಲ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಪ್ರಕಟನೆ ತಿಳಿಸಿದೆ.