ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ರಜೆ ಇಲ್ಲದ ಇಲಾಖೆಯೆಂದು ಪರಿಗಣಿಸಲು ಒತ್ತಾಯ

Update: 2018-04-12 14:34 GMT

ಬೆಂಗಳೂರು, ಎ.12: ಪದವಿ ಪೂರ್ವ ಉಪನ್ಯಾಸಕರಿಗೆ ಬೇಸಿಗೆ ರಜೆಯೆ ಇಲ್ಲದಂತೆ ವೇಳಾಪಟ್ಟಿ ಸಿದ್ಧಗೊಂಡಿರುವುದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ರಜೆ ಇಲ್ಲದ ಇಲಾಖೆಯೆಂದು ಪರಿಗಣಿಸಬೇಕೆಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಪ್ರಥಮ ಪಿಯು ಪರೀಕ್ಷೆ ಫೆ.21ರಂದು ಮುಗಿದಿದ್ದು, ವಿದ್ಯಾರ್ಥಿಗಳಿಗೆ 69ದಿನ ಬೇಸಿಗೆ ರಜೆ ಸಿಕ್ಕಿದೆ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. ಆದರೆ, ವಾಸ್ತವವಾಗಿ ಮಾ.18ರವರೆಗೆ ದ್ವಿತೀಯ ಪಿಯು ಪರೀಕ್ಷೆಗಳನ್ನು ಉಪನ್ಯಾಸಕರು ನಡೆಸಿರುತ್ತಾರೆ. ಆದಾದ ನಂತರ ಎ.11 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಬೇರೆ ಬೇರೆ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಿರ್ವಹಿಸಿರುತ್ತಾರೆ. ಇದರ ಜೊತೆಗೆ ಪ್ರಥಮ ಪಿಯುನಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳನ್ನು ಎ.16ರಿಂದ 28ರವರೆಗೆ ನಡೆಸಲು ಇಲಾಖೆ ವೇಳಾಪಟ್ಟಿ ಪ್ರಕಟಿಸಿದೆ. ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ಮೇ.2ರಂದು ಪ್ರಕಟಿಸಲು ಸೂಚಿಸಲಾಗಿದೆ. ದಸರ ರಜೆಯನ್ನು 15 ದಿನ ಕಡಿತಗೊಳಿಸಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗಿತ್ತು.

ಹೀಗೆ ಉಪನ್ಯಾಸಕರಿಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ರಜೆಯನ್ನು ಪಡೆಯದಂತೆ ಶಿಕ್ಷಣ ಕಲಾಖೆ ನಿರಂತರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ಉಪನ್ಯಾಸಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಪಿಯು ಉಪನ್ಯಾಸಕರಿಗೆ ಬೇಸಿಗೆ ರಜೆ ಇಲ್ಲದಂತೆ ಮಾಡಲಾಗಿದೆ. ಹೀಗಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ರಜೆ ಇಲ್ಲದ ಇಲಾಖೆಯೆಂದು ಪರಿಗಣಿಸುವುದು ಸೂಕ್ತವೆಂದು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಅಭಿಪ್ರಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News