ಬೆಂಗಳೂರು: ಐಪಿಎಲ್ ಪಂದ್ಯಾವಳಿ ಹಿನ್ನೆಲೆ; ಮೆಟ್ರೊ ಅವಧಿ ವಿಸ್ತರಣೆ

Update: 2018-04-12 14:37 GMT

ಬೆಂಗಳೂರು, ಎ.12: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಲ್) ಪಂದ್ಯಾವಳಿ ನಡೆಯುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದ್ದು, ಪ್ರಯಾಣ ದುಬಾರಿಯಾಗಲಿದೆ.

ಪಂದ್ಯ ನಡೆಯುವ ದಿನಗಳಂದು ರಾತ್ರಿ 12.30 ಗಂಟೆರವರೆಗೂ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಇನ್ನು, ಜನದಟ್ಟಣೆ ನಿವಾರಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ರಿಟರ್ನ್ ಟಿಕೇಟ್ ಪರಿಚಯಿಸಿದ್ದು, ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ನಿಲ್ದಾಣಗಳಲ್ಲಿ ಟಿಕೆಟ್ ದೊರೆಯಲಿವೆ.

ರಿಟರ್ನ್ ಟಿಕೆಟ್‌ಗೆ 50.ರೂ ನಿಗದಿಪಡಿಸಿದ್ದು, ಎ. 13, 21, 25, 29 ಸೇರಿದಂತೆ, ಮೇ 1 ಹಾಗೂ 17ರಂದು ಪಂದ್ಯ ಮುಗಿದ ನಂತರ ಕಬ್ಬನ್ ಪಾರ್ಕ್ ಹಾಗೂ ಎಂಜಿ ರಸ್ತೆ ಮೆಟ್ರೊ ನಿಲ್ದಾಣಕ್ಕೆ ತೆರಳುವವರು ಟಿಕೆಟ್‌ಗೆ 50 ರೂ. ಪಾವತಿಸಬೇಕಿದೆ.

ಪ್ರಯಾಣಿಕರ ದಟ್ಟಣೆ ಹಾಗೂ ತ್ವರಿತವಾಗಿ ಟಿಕೆಟ್ ವಿತರಿಸಿ ಚಿಲ್ಲರೆ ಸಮಸ್ಯೆ ನಿವಾರಿಸಿರುವ ನಿಟ್ಟಿನಲ್ಲಿ ಈ ಬಾರಿ ಟೋಕನ್ ಬದಲು ಕಾಗದ ಟಿಕೆಟ್ ವಿತರಿಸಲು ಕ್ರಮ ಕೈಗೊಂಡಿದೆ. ಕಾಗದದ ಟೋಕನ್ ತೋರಿಸಿ ಪ್ರಯಾಣಿಕರು ನೇರವಾಗಿ ಪ್ಲಾಟ್ ಫಾರಂಗೆ ಪ್ರವೇಶಿಸಿ ನಿಲ್ದಾಣದಿಂದ ನಿರ್ಗಮಿಸಬಹುದಾಗಿದೆ. ಅಲ್ಲದೆ, ವಿಸ್ತರಣೆ ಸಮಯದಲ್ಲೂ ಸ್ಮಾರ್ಟ್ ಕಾರ್ಡ್‌ಗೆ ರಿಯಾಯಿತಿ ಸಿಗಲಿದೆ.

ಪಂದ್ಯದ ದಿನದಂದು ರೈಲು ಸಂಚಾರದ ಅವಧಿ ವಿಸ್ತರಿಸಿದ್ದು, ನಾಯಂಡಹಳ್ಳಿ, ಬೈಯಪ್ಪನಹಳ್ಳಿಯಿಂದ ಕೊನೆಯ ರೈಲು 12.30.ಗಂಟೆಗೆ ಹೊರಡಲಿದೆ. ನಾಗಸಂದ್ರ, ಯಲಚೇನಹಳ್ಳಿ ಕಡೆಗೆ ಮೆಜೆಸ್ಟಿಕ್ ನಿಲ್ದಾಣದಿಂದ ಸಂಪರ್ಕ ಕಲ್ಪಿಸಿದ್ದು, ರಾತ್ರಿ 11 ಗಂಟೆಯಿಂದ ಪ್ರತಿ ಐದು ನಿಮಿಷಕ್ಕೊಂದು ರೈಲು ಸಂಚಾರವಿರಲಿದೆ ಎಂದು ನಿಗಮದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News