×
Ad

ಬೆಂಗಳೂರು: ಚಂದನ್‌ಮಲ್ ಪೂಕ್‌ರಾಜ್ ಬೋತ್ರಾ ಟ್ರಸ್ಟ್ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ

Update: 2018-04-12 20:49 IST

ಬೆಂಗಳೂರು, ಎ.12: ನಗರದ ಚಂದನ್‌ಮಲ್ ಪೂಕ್‌ರಾಜ್ ಬೋತ್ರಾ ಟ್ರಸ್ಟ್ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದು, ಕ್ಯಾನ್ಸರ್ ರೋಗಿಗಳು, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಟ್ರಸ್ಟ್‌ನ ಡಾ.ನಾಗೇಶ್ ಶರ್ಮಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ, ಔಷಧಿ ಜೊತೆಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಹಾಗೂ ಮೊಬೈಲ್ ಹೋಮ್‌ಕೇರ್ ಸರ್ವೀಸ್ ಸೇವೆ ಲಭ್ಯವಿದೆ. ಇದೀಗ ಬೋತ್ರಾ ಟ್ರಸ್ಟ್ ಬೆಂಗಳೂರು ಪೂರ್ವ ಹಾಗೂ ಈಶಾನ್ಯ ಭಾಗಗಳಲ್ಲಿ ಕ್ಯಾನ್ಸರ್ ರೋಗಿಗಳಿಗೆ ಗೃಹ ಆರೈಕೆ ಸೇವೆ ಹಮ್ಮಿಕೊಂಡಿದೆ. ಕ್ಯಾನ್ಸರ್ ರೋಗಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ತಮ್ಮ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ಡಾ.ವೀಣಾ ಮಾತನಾಡಿ, ನಗರದಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಹೋಮ್‌ಕೇರ್ ತಂಡ ಕಾರ್ಯ ನಿರ್ವಹಿಸುತ್ತಿದೆ. ಕ್ಯಾನ್ಸರ್ ರೋಗಿಗಳು ತಮ್ಮ ಅಂತಿಮ ಕ್ಷಣಗಳನ್ನು ಕುಟುಂಬದ ಸದಸ್ಯರೊಂದಿಗೆ ಕಳೆಯಲು ಇಚ್ಛೆ ಪಡುತ್ತಾರೆ. ಅಂತಹವರಿಗೂ ಉಚಿತವಾಗಿ ಸೇವೆ ಲಭ್ಯವಿದೆ. ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ರೋಗಿಗಳಿಗೆ ಹೋಮ್‌ಕೇರ್ ತಂಡ ಮಾರ್ಗದರ್ಶನ ನೀಡುತ್ತದೆ ಎಂದರು.

ರೋಗಿಯ ಮನೆಗೆ ಇಬ್ಬರು ನರ್ಸ್, ವೈದ್ಯರು, ಮಾರ್ಗದರ್ಶಕರು ಹಾಗೂ ಸಾಮಾಜಿಕ ಕಾರ್ಯಕರ್ತರು ತೆರಳಿ ಔಷಧೋಪಚಾರ ನೀಡಲಿದ್ದಾರೆ. ಆದರೆ, ಈ ಸೇವೆಯನ್ನು ರೋಗಿಯು ವಾರಕ್ಕೆ ಎರಡು ದಿನ ಪಡೆದುಕೊಳ್ಳಬಹುದಾಗಿದೆ. ಇಲ್ಲಿಯವರೆಗೆ 4051 ರೋಗಿಗಳಿಗೆ ಈ ರೀತಿ ಚಿಕಿತ್ಸೆ ನೀಡಲಾಗಿದೆ. ಸದ್ಯ 75 ಕ್ಯಾನ್ಸರ್ ರೋಗಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ರೋಗಗಳು, ಇಎಸ್‌ಟಿ ಮೂಳೆ ರೋಗಗಳು, ದಂತ ಹಾಗೂ ಕಣ್ಣಿನ ಸಮಸ್ಯೆಗಳಿಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಮೂಳೆ ರೋಗ ಹಾಗೂ ಹೃದಯ ಶಸ್ತ್ರಚಿಕಿತ್ಸೆಗಳಿಗೆ ರಾಮಯ್ಯ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸಿಕೊಡಲಾಗುತ್ತದೆ. ಆಸಕ್ತರು ದೂ.ಸಂ. 080 25468872, 42685656 ಸಂಪರ್ಕಿಸಿ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News