ತುಳುವರ ಹೊಸವರ್ಷ ಬಿಸು ಪರ್ಬ

Update: 2018-04-14 18:23 GMT

ಶುಭಕಾರ್ಯ, ಹೊಸ ಕೆಲಸಗಳಿಗೆ ಬಿಸುಪರ್ಬ ಶುಭದಿನವೆಂದು ತುಳುವರು ನಂಬಿಕೊಂಡು ಬಂದಿದ್ದಾರೆ. ಹಾಗಾಗಿ ಅಂದು ಹೆಣ್ಣುಮಕ್ಕಳಿಗೆ ಕಿವಿ –- ಮೂಗು ಚುಚ್ಚಿಸುವುದು, ಗೇಣಿ ಆಧಾರದಲ್ಲಿ ಬೇಸಾಯ ಮಾಡುವವರು ಅಂದು ಹಳೆಯ ಬೇಸಾಯ ಬಿಟ್ಟು ಹೊಸತ್ತು ಆರಂಭಿಸುವುದು, ಹೊಸಕಾರ್ಯಗಳೇನಿದ್ದರೆ ಅಂದು ಶುಭಾರಂಭಗೊಳಿಸುವುದು ವಾಡಿಕೆ.

ಪಗ್ಗು ತಿಂಗಳು(ಎಪ್ರಿಲ್-ಮೇ) ತುಳುವರಿಗೆ ವರ್ಷಾ ರಂಭದ ಮೊದಲ ತಿಂಗಳು. ತುಳುವರ ಪ್ರಕಾರ ಮೀನ ಮಾಸ ಮುಗಿದು ಮೇಷ ಮಾಸದ ಸಂಕ್ರಮಣಕ್ಕೆ ಹೊಸ ವರ್ಷ ಆಚರಣೆ. ಈ ಸಂಕ್ರಮಣವು ಸಾಮಾನ್ಯವಾಗಿ ವರ್ಷಂಪ್ರತಿ ಎಪ್ರಿಲ್ ತಿಂಗಳ 14ರಂದು ಬರುತ್ತದೆ. ಮೇಷ ಸಂಕ್ರಮಣದ ಮರುದಿನ ಅಂದರೆ ‘ಸಿಂಗೊಡೆ’ಯನ್ನು ತುಳುವರು ವರ್ಷದ ಮೊದಲ ದಿನ ‘ಬಿಸು ಪರ್ಬ’ ಎಂದು ಆಚರಿಸುತ್ತಾರೆ. ‘ಬಿಸು ಪರ್ಬ’ ಎಂದರೆ ಸೌರಮಾನ ಯುಗಾದಿ ಹಬ್ಬ. ಈ ದಿನವೇ ತುಳುವರಿಗೆ ವರ್ಷಾರಂಭದ ದಿನ ಅಥವಾ ಹೊಸ ವರ್ಷದ ದಿನ.

ತುಳುವರು ಮೂಲತಃ ಕೃಷಿಕರು. ಹೀಗಾಗಿ ಅವರ ಎಲ್ಲಾ ಹಬ್ಬಗಳು ಒಂದಿಲ್ಲೊಂದು ರೀತಿ ಕೃಷಿ ಸಂಸ್ಕೃತಿಯನ್ನು ಆಧರಿಸಿ ಆಚರಣೆಗೊಳ್ಳುತ್ತದೆ. ಬಿಸು ಪರ್ಬದಲ್ಲೂ ಕಣಿ ಇಡುವುದು, ಬುಳೆ ಕಾಣಿಕೆ ಒಪ್ಪಿಸುವುದು, ಎಣೇಲು ಬೇಸಾಯಕ್ಕೆ ಮುಹೂರ್ತ ‘ಕೈ ಬಿತ್ತ್ ಹಾಕುವುದು’ ಮುಂತಾದ ಆಚರಣೆ ಇದೆ. ಇವೆಲ್ಲದರಲ್ಲಿ ನಾವು ಕೃಷಿ ಪ್ರಾಧಾನ್ಯತೆಯನ್ನು ಕಾಣಬಹುದು.

ಬಿಸು ಕಣಿ ಇಡುವುದು: ಬಿಸು ಹಬ್ಬದಂದು ಬೆಳಗ್ಗೆ ಬೇಗ ಎದ್ದು ಇಲ್ಲವೇ ಅದರ ಮುನ್ನಾ ದಿನ ಮನೆಯ ಯಜಮಾನ ಅನುಕೂಲಕ್ಕೆ ತಕ್ಕಂತೆ ದೈವಸ್ಥಾನ, ದೇವರು ಅಥವಾ ತುಳಸಿಕಟ್ಟೆಯ ಎದುರು ಎರಡು ಜೋಡಿ ಬಾಳೆ ಎಲೆಯಲ್ಲಿ ಒಂದು ಮಣೆ ಇಡುತ್ತಾನೆ.ಅದರ ಮೇಲೆ ದೀಪವಿಟ್ಟು ಅದರ ಎಡ ಬಲಗಳಲ್ಲಿ ಹೂವು, ಅಕ್ಕಿ, ಹಣ್ಣು , ತರಕಾರಿ, ತೆಂಗಿನ ಕಾಯಿ ಇಟ್ಟು ಅದರ ಮಧ್ಯ ಭಾಗದಲ್ಲಿ ಕನ್ನಡಿ ಇಡುತ್ತಾನೆ. ಬಿಸುಹಬ್ಬದಂದು ಬೆಳಗ್ಗೆ ಬೇಗ ಎದ್ದು ಮನೆಮಂದಿಯೆಲ್ಲ ಮಿಂದು ಶುಚಿಯಾಗಿ ಕನ್ನಡಿಯಲ್ಲಿ ಮುಖ ನೋಡಿ ಬಿಸುಕಣಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ.

ಪಗ್ಗು ತಿಂಗಳೆಂದರೆ ಗಿಡ-ಮರಗಳಲ್ಲಿ ಫಲಗಳು ಯಥೇಚ್ಛವಾಗಿ ಬೆಳೆದಿರುತ್ತವೆೆ. ಅಲ್ಲದೆ ಬಿಸು ಕಣಿಗೆ ಅರ್ಪಿಸದೆ ಹೊಸಫಲವನ್ನು ತಿನ್ನಬಾರದೆಂಬ ನಂಬಿಕೆ ತುಳುವರಲ್ಲಿ ರೂಢಿಯಲ್ಲಿದೆ. ಇಲ್ಲಿ ತಮ್ಮನ್ನು ರಕ್ಷಿಸುವ ದೈವ-ದೇವರುಗಳಿಗೆ ಸಂಪೂರ್ಣ ಶರಣಾಗತರಾಗುವ, ಎಲ್ಲವೂ ನಿನ್ನದೇ ನಮ್ಮದೇನು ಇಲ್ಲ ಎನ್ನುವ ಸಂಕೇತವನ್ನು ನಾವು ಕಾಣಬಹುದು.ಅಲ್ಲದೆ ಮುಂದೆ ವರ್ಷಪೂರ್ತಿ ಶುಭಫಲ ಅನುಗ್ರಹವಾಗಲಿ ಎಂಬ ಕೋರಿಕೆಯನ್ನೂ ಗಮನಿಸಬಹುದು.

ಬಿತ್ತನೆ ಮಾಡುವುದು: ತುಳುವರು ತಮ್ಮ ವರ್ಷದ ಪ್ರಥಮ ಬೆಳೆಗೆ ಬೀಜ ಹಾಕಲು ಬಿಸು ಪರ್ಬದಂದು ಮುಹೂರ್ತದ ದಿನವೆಂದು ನಿಗದಿಪಡಿಸಿದ್ದಾರೆ. ಯಾಕೆಂದರೆ ಅಂದು ಬಿತ್ತನೆ ಮಾಡಿದ ಬೀಜ ನಾಶವಾಗದು.ಅಲ್ಲದೆ ಸಮೃದ್ಧ ಫಸಲು ದೊರಕುತ್ತದೆ ಎಂಬ ನಂಬಿಕೆ ತುಳುವರಲ್ಲಿದೆ. ಅಂದು ಬೆಳಗ್ಗೆ ಮನೆಯ ಯಜಮಾನ ಎತ್ತುಗಳನ್ನು ಗದ್ದೆಗೆ ಕೊಂಡುಹೋಗಿ ಎರಡು ಸುತ್ತು ಭೂಮಿ ಉಳುತ್ತಾನೆ. ನಂತರ ಅದಕ್ಕೆ ಹಟ್ಟಿಗೊಬ್ಬರ ಹಾಕಿ ಬೀಜ ಬಿತ್ತನೆ ಮಾಡುತ್ತಾರೆ. ಅಕಸ್ಮಾತ್ ಕೆಲವೊಂದು ಕಾರಣಗಳಿಗೆ ಬೀಜ ಬಿತ್ತನೆ ಮಾಡಲಾಗದವರು ಕೈಬಿತ್ತು ಪಾಡುನಿ (ಕೈ ಬೀಜ ಹಾಕುವುದು)ಎಂದು ಬಿತ್ತನೆ ಶಾಸ್ತ್ರ ಮಾಡುತ್ತಾರೆ.

ಬುಳೆ ಕಾಣಿಕೆ ಅರ್ಪಿಸುವುದು: ಊರಿನ ಧಣಿಗಳಿಗೆ (ಒಡೆಯರಿಗೆ)ಒಕ್ಕಲು ಕುಟುಂಬದವರು ತಾವು ಬೆಳೆದ ತರಕಾರಿ, ಹಣ್ಣು-ಹಂಪಲು, ತೆಂಗಿನಕಾಯಿ, ಅಕ್ಕಿ ಇನ್ನಿತರ ವಸ್ತುಗಳನ್ನು ಕಾಣಿಕೆಯಾಗಿ ಕೊಡುವುದನ್ನು ಬುಳೆ ಕಾಣಿಕೆ (ಬೆಳೆ ಕಾಣಿಕೆ)ಕೊಡುವುದು ಎನ್ನುತ್ತಾರೆ. ಹೀಗೆ ಕಾಣಿಕೆ ಕೊಡುವುದನ್ನು ತಾವು ಮುಂದಿನ ವರ್ಷವೂ ಒಡೆಯನ (ಧಣಿಗಳ)ಒಕ್ಕಲುಗಳಾಗಿ ಮುಂದುವರಿಯಲು ಹಾಗೂ ಒಡೆಯನ ಗದ್ದೆಯಲ್ಲಿ ಗೇಣಿ ಪದ್ಧತಿಯಲ್ಲಿ ಬೇಸಾಯ ಮಾಡಲು ಅನುಮತಿ ಕೇಳುವ ಪದ್ಧತಿ ಹಿಂದೆ ರೂಢಿಯಲ್ಲಿತ್ತು.

ಹಿರಿಯರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು ಈ ಹಬ್ಬದ ಇನ್ನೊಂದು ವಿಶೇಷತೆ. ಇದನ್ನು ‘ಕಾರ್ ಪತ್ತುನು’ ಎನ್ನುತ್ತಾರೆ. ಮನೆಯಲ್ಲಿ ತಂದೆ ತಾಯಿ ಇದ್ದರೆ ಅವರ ಕಾಲು ಹಿಡಿಯವುದು. ಒಕ್ಕಲು ಮನೆಯವರು ಧಣಿಗೆ ಬುಳೆ ಕಾಣಿಕೆ ಕೊಡಲು ಹೋಗುವಾಗ ಧಣಿಯ ಕಾಲು ಹಿಡಿಯುತ್ತಾರೆ. ಕೆಲವೊಂದು ಕಡೆ ಬಿಸುಪರ್ಬದಂದು ಧಣಿಗಳು ಒಕ್ಕಲು ಮನೆಯವರಿಗೆ ವರ್ಷಕ್ಕೊಂದು ಜೊತೆ ಬಟ್ಟೆ ಉಡುಗೊರೆ ನೀಡುವುದಿದೆೆ.

­ಶುಭಕಾರ್ಯ, ಹೊಸ ಕೆಲಸಗಳಿಗೆ ಬಿಸುಪರ್ಬ ಶುಭದಿನವೆಂದು ತುಳುವರು ನಂಬಿಕೊಂಡು ಬಂದಿದ್ದಾರೆ. ಹಾಗಾಗಿ ಅಂದು ಹೆಣ್ಣುಮಕ್ಕಳಿಗೆ ಕಿವಿ - ಮೂಗು ಚುಚ್ಚಿಸುವುದು, ಗೇಣಿ ಆಧಾರದಲ್ಲಿ ಬೇಸಾಯ ಮಾಡುವವರು ಅಂದು ಹಳೆಯ ಬೇಸಾಯ ಬಿಟ್ಟು ಹೊಸತ್ತು ಆರಂಭಿಸುವುದು, ಹೊಸಕಾರ್ಯಗಳೇನಿದ್ದರೆ ಅಂದು ಶುಭಾರಂಭಗೊಳಿಸುವುದು ವಾಡಿಕೆ. ಅಲ್ಲದೆ ಅಂದು ಹಣ, ಒಡವೆ ಇತ್ಯಾದಿ ಬೆಲೆಬಾಳುವಂತಹ ವಸ್ತುಗಳನ್ನು ಸಾಲಕೊಡಬಾರದೆಂಬ ನಂಬಿಕೆ ತುಳುವರಲ್ಲಿದೆ. ಇದು ವರ್ಷಾರಂಭದ ಶುಭದಿನವಾದ ಬಿಸು ಎಂಬ ಕಾರಣ ಒಂದೆಡೆಯಾದರೆ, ಬಿಸು ಹಬ್ಬ ಬರುವುದು ಸಿಂಗೊಡೆಯಂದು. ತುಳುವರು ಪ್ರತೀ ತಿಂಗಳ ಮೊದಲದಿನವನ್ನು ಸಿಂಗೊಡೆಯೆನ್ನುತ್ತಾರೆ. ಈ ದಿನ ಸಾಲ ಕೊಡಬಾರದೆಂಬ ನಂಬಿಕೆ ತುಳುವರಲ್ಲಿದೆ.

ಬಿಸುಪರ್ಬದಂದು ಮಧ್ಯಾಹ್ನಕ್ಕೆ ಕಾಯಿಪಲ್ಲೆಗಳಿಂದ ಅಡುಗೆ ಮಾಡಿ ವಿಶೇಷವಾಗಿ ಗೇರುಬೀಜದ ಪಾಯಸ ಮಾಡಿ ಮನೆಮಂದಿಯೆಲ್ಲಾ ಊಟಮಾಡುತ್ತಾರೆ. ಸಂಜೆ ಜಾನಪದ ಕ್ರೀಡೆಗಳಲ್ಲಿ ಕಳೆಯುವುದು ಬಿಸು ಹಬ್ಬದ ಇನ್ನೊಂದು ವಿಶೇಷ. ಅಂದು ಕೋಳಿ ಅಂಕ, ತೆಂಗಿನಕಾಯಿ ಕುಟ್ಟುವುದು, ತೆಪ್ಪಂಗಾಯಿ, ಬಿಲ್ಲೀಸ್ ಮೊದಲಾದ ಮನೋರಂಜನಾ ಕ್ರೀಡೆಗಳಲ್ಲಿ ತುಳುವರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಇಡೀ ಭಾರತಾದ್ಯಂತ ಯುಗಾದಿ ಹಬ್ಬವು (ಹೊಸ ವರ್ಷದ ಆಗಮನವನ್ನು) ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಅಂತೆಯೇ ತುಳುವರು ತಾವು ನಂಬಿರುವ ದೈವ-ದೇವರುಗಳಿಗೆ ಋಣಿ ಯಾಗಿ ತಾವು ಬೆಳೆದಿರುವ ಫಲಕಾಣಿಕೆಗಳನ್ನು ಅರ್ಪಿಸಿ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದರೆ ಇಂದು ಈ ಹಬ್ಬವು ಸಂಪೂರ್ಣವಾಗಿ ನಶಿಸುವ ಹಂತದಲ್ಲಿದೆ.ಆಧುನಿಕತೆಯ ಭರಾಟೆಯಲ್ಲಿ ಹಬ್ಬದ ಆಚರಣೆಯ ಹಲವಾರು ಕ್ರಮಗಳು ಬಳಕೆಯಲ್ಲಿಲ್ಲ.ಇನ್ನಾದರೂ ನಮ್ಮ ಪೂರ್ವಿಕರು ಆಚರಣೆಮಾಡಿಕೊಂಡು ಬಂದಿರುವ ಹಬ್ಬ-ಹರಿದಿನಗಳ ಮಹತ್ವವನ್ನು ಅರಿತುಕೊಂಡು ನಮ್ಮ ಶಕ್ತ್ಯಾನುಸಾರ ಉಳಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಪಡೋಣ.

Writer - ವಿಶ್ವನಾಥ ಪಂಜಿಮೊಗರು

contributor

Editor - ವಿಶ್ವನಾಥ ಪಂಜಿಮೊಗರು

contributor

Similar News